ADVERTISEMENT

ಆಹಾರ ಧಾನ್ಯಗಳಿಗೆ ಮೂಲದಲ್ಲೇ ವಿಷಬೆರಕೆ!

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2017, 8:33 IST
Last Updated 16 ಅಕ್ಟೋಬರ್ 2017, 8:33 IST

ಕೊಪ್ಪಳ: ರೈತರು ರಸ್ತೆಯಲ್ಲೇ ಕಾಳು ಬೇರ್ಪಡಿಸುತ್ತಿದ್ದಾರೆ. ಆಹಾರ ಧಾನ್ಯಗಳಿಗೆ ವಾಹನಗಳ ಕೊಳಕು, ಡೀಸೆಲ್‌, ತೈಲ, ರಾಸಾಯನಿಕ ಮಿಶ್ರಣಗೊಳ್ಳುತ್ತಿದೆ. ಶುದ್ಧ ಆಹಾರ ಧಾನ್ಯ ಪರಿಷ್ಕರಣೆ ಹಂತದಲ್ಲೇ ಕಲಬೆರಕೆಯಾಗುವುದು ಆತಂಕಕಾರಿ. ಯಾವುದೇ ಪ್ರಯೋಗಾಲಯದಲ್ಲೂ ಇದನ್ನು ಶುದ್ಧೀಕರಿಸಲಾಗದು ಎಂದು ಕೃಷಿ ಮತ್ತು ಆಹಾರ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

'ಇದುವರೆಗೆ ರಸ್ತೆಯಲ್ಲೇ ಕಣ ಮಾಡಿ ಕಾಳು ಬೇರ್ಪಡಿಸುವುದರಿಂದ ವಾಹನ ಅಪಘಾತಗಳು ಸಂಭವಿಸಿದ್ದು, ಕಣ್ಣಿಗೆ ಹಾನಿಯಾದ ಪ್ರಕರಣಗಳು ಸಾಕಷ್ಟು ವರದಿಯಾಗಿದ್ದವು. ಈ ಬಗ್ಗೆ ಪೊಲೀಸರು ಸಾಕಷ್ಟು ಎಚ್ಚರಿಸಿದರೂ ರೈತರು ಗಣನೆಗೇ ತೆಗೆದುಕೊಂಡಿಲ್ಲ.

ಆದರೆ, ಈ ರೀತಿ ಮಾಡುವ ಮೂಲಕ ರೈತರು ಧಾನ್ಯಗಳನ್ನು ಸ್ವತಃ ವಿಷಬೆರಕೆ ಮಾಡಿಯೇ ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಇದು ಆತಂಕಕಾರಿ. ಈ ವಿಷಯ ತಿಳಿದಿದ್ದೂ ನಾವು ಖರೀದಿ ಮಾಡಬೇಕಾಗಿದೆ' ಎಂದು ನಗರದ ಎಪಿಎಂಸಿಯ ವರ್ತಕರೊಬ್ಬರು ಆತಂಕದಿಂದಲೇ ಹೇಳಿದರು.

ADVERTISEMENT

ಇದು ಒಂದೇ ಬೆಳೆಗೆ ಸೀಮಿತವಾಗಿಲ್ಲ. ಸಜ್ಜೆ, ಭತ್ತ, ತೊಗರಿ, ಮೆಕ್ಕೆಜೋಳ, ಉದ್ದು, ಎಳ್ಳು... ಹೀಗೆ ಎಲ್ಲ ಬೆಳೆಗಳನ್ನೂ ರಸ್ತೆಯಲ್ಲೇ ಪರಿಷ್ಕರಣೆ ಮಾಡಲಾಗುತ್ತದೆ. ದಲಾಲರು ಇಲ್ಲಿಂದಲೇ ಖರೀದಿಸುವುದೂ ನಡೆದಿದೆ. ಆದರೆ, ಸದ್ದಿಲ್ಲದೇ ವಿಷಕಾರಿ ವಸ್ತುಗಳು ಧಾನ್ಯಗಳಿಗೆ ಮಿಶ್ರಣಗೊಳ್ಳುತ್ತಿದೆ.

ತೈಲ ರಾಸಾಯನಿಕ, ಸೀಸ ನೇರ ಬೆರಕೆ 'ಬಸ್‌, ಲಾರಿ, ನಾಲ್ಕು ಚಕ್ರದ ನೂರಾರು ವಾಹನಗಳು ತೆನೆ ರಾಶಿಯ ಮೇಲೆ ಹರಿಯುವುದರಿಂದ ಕಾಳು ಬೇರ್ಪಡೆಯಾಗುತ್ತದೆ. ಆದರೆ ಟೈರ್‌ನಲ್ಲಿರುವ ರಸ್ತೆಯ ಕೊಳಕು, ಕಾರ್ಬನ್‌, ಎಂಜಿನ್‌ನಲ್ಲಿ ತೈಲ ಸೋರಿಕೆ ಇದ್ದರೆ ಅದರ ರಾಸಾಯನಿಕ, ಹೊಗೆಯಲ್ಲಿರುವ ಸೀಸದ ಅಂಶ ಇತ್ಯಾದಿಗಳು ಕಾಳುಗಳಿಗೆ ನೇರ ಮಿಶ್ರಣವಾಗುತ್ತದೆ' ಎನ್ನುತ್ತಾರೆ ಮೆಕ್ಯಾನಿಕ್‌ ಮೆಹಬೂಬ್‌.

ಕಣಗಳ ಕೊರತೆ? 'ಕ್ವಿಂಟಲ್‌ಗಟ್ಟಲೆ ಬೆಳೆ ಬೆಳೆಯುವ ರೈತರು ಕಟಾವಿನ ಕಾಲದಲ್ಲಿ ಹೊಲದ ಸಮೀಪವೇ ಪುಟ್ಟ ಕಣವನ್ನು ತಾತ್ಕಾಲಿಕವಾಗಿಯಾದರೂ ನಿರ್ಮಿಸಬಾರದೇ' ಎಂದು ಪ್ರಶ್ನಿಸುತ್ತಾರೆ ನಗರದ ಹಿರಿಯ ನಾಗರಿಕ ಗೋವಿಂದರಾವ್. 'ಎಲ್ಲ ಕಡೆಯೂ ಇದೇ ರೀತಿ ಕಾಳು ಬೇರ್ಪಡಿಸಲಾಗುತ್ತದೆ. ವಾಹನ ಸವಾರರು ಸ್ವಲ್ಪ ನಿಧಾನವಾಗಿ ಹೋಗಬೇಕು ಅಷ್ಟೇ. ಕಣ ನಿರ್ಮಿಸಿ ಅದಕ್ಕೆ ಆಳುಗಳು, ಪರಿಕರಗಳನ್ನು ಹೊಂದಿಸುವಲ್ಲಿ ದುಬಾರಿ ವೆಚ್ಚವಾಗುತ್ತದೆ' ಎನ್ನುತ್ತಾರೆ ಯುವ ರೈತ ಮಹೇಶ.

ಕಣ್ಣು, ಉಸಿರಾಟದ ಸಮಸ್ಯೆ ಹೆಚ್ಚಳ
ರಸ್ತೆಯಲ್ಲೇ ಕಾಳು ಬೇರ್ಪಡಿಸುವುದರಿಂದ ವಾಹನಗಳ ವೇಗಕ್ಕೆ ಬೀಸುವ ಗಾಳಿಯಿಂದ ರೈತಾಪಿ ಜನರಲ್ಲಿ ಕಣ್ಣಿನ ತೊಂದರೆಗಳು ಕಾಣಿಸಿಕೊಂಡಿವೆ. ನಗರದ ಕಣ್ಣಿನ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳಲ್ಲಿ ಇಂಥ ಕಸ ಸಿಲುಕಿ ತೊಂದರೆಗೊಳಗಾಗಿ ಬಂದವರ ಸಾಲೇ ಕಾಣ ಸಿಗುತ್ತದೆ ಎನ್ನುತ್ತಾರೆ ವೈದ್ಯರು. ಉಸಿರಾಟದ ಸಮಸ್ಯೆಗೂ ಇದೇ ಕಾರಣ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಆದರೆ, ನಿಖರ ಅಧ್ಯಯನ ನಡೆಯಬೇಕು ಎನ್ನುತ್ತಾರೆ ತಜ್ಞರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.