ಕೊಪ್ಪಳ: ಗಣಿತ ಕಬ್ಬಿಣದ ಕಡಲೆ ಎಂಬ ಮಾತು ವಿದ್ಯಾರ್ಥಿ ವಲಯದಲ್ಲಿ ಸಾಮಾನ್ಯ.ಇದೇ ವಾದ ಸರಣಿ ಹಿಡಿದರೆ ನಂತರ ಸ್ಥಾನ ಇಂಗ್ಲಿಷ್‌ನದು. ವ್ಯಾಕರಣ, ಶಬ್ದ ಸಂಗ್ರಹ, ಅಲಂಕಾರಿಕ ಪದಗಳ ಬಳಕೆಯಿಂದ ಹಿಡಿದು ಇಂಗ್ಲಿಷ್‌ನಲ್ಲಿ ಸರಾಗವಾಗಿ ಸಂವಹನ ಮಾಡಬೇಕು ಎಂಬ ಆಸೆ ಇದ್ದರೂ ಸೂಕ್ತ ಮಾರ್ಗದರ್ಶನ, ಕಲಿಕಾ ಸಾಮಗ್ರಿ ಇಲ್ಲದೇ ಇರುವುದು ಈ ನಿಟ್ಟಿನ ಪ್ರಯತ್ನದಲ್ಲಿನ ಅಡ್ಡಿ.
ಅದರಲ್ಲೂ, ಬಹುರಾಷ್ಟ್ರೀಯ ಕಂಪನೆಗಳಿಂದ ಹಿಡಿದು ಸಣ್ಣ-ಪುಟ್ಟ ಉದ್ದಿಮೆಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕು ಎಂದರೆ ಸಂದರ್ಶನ ಎದುರಿಸಿ ಜಯಿಸುವುದು, ಗುಂಪು ಚರ್ಚೆಯಲ್ಲಿ ತಮ್ಮದೇ ಛಾಪು ಮೂಡಿಸಲು ಹಾಗೂ ಕಂಪ್ಯೂಟರ್ ಜ್ಞಾನ ಹೊಂದಲು ಇಂಗ್ಲಿಷ್ ಅತ್ಯವಶ್ಯ.
ವಿದ್ಯಾರ್ಥಿಗಳಲ್ಲಿ ಇಂಗ್ಲಿಷ್ ಬಗೆಗಿನ ಭಯ ಹೋಗಲಾಡಿಸುವ ಜೊತೆಗೆ ಸುಲಲಿತವಾಗಿ ಮಾತನಾಡುವ ಕಲೆ, ಶಬ್ದಗಳ ಸಂಗ್ರಹ, ವ್ಯಾಕರಣದ ಬಗ್ಗೆ ತಿಳಿವಳಿಕೆ ನೀಡುವ ಸಂಬಂಧ ನಗರದ ಪ್ರತಿಷ್ಠಿತ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯ ಸ್ಥಾಪಿಸಿರುವ `ಇಂಗ್ಲಿಷ್ ಭಾಷಾ ಪ್ರಯೋಗಾಲಯ~ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಭಾಷೆಗೂ ಒಂದು ಪ್ರಯೋಗಾಲಯವೇ ಎಂಬ ಅಚ್ಚರಿ ಒಂದೆಡೆಯಾದರೆ, ಭಾಷೆಯೊಂದರ (ಇಲ್ಲಿ ಇಂಗ್ಲಿಷ್) ಕಲಿಕೆಯನ್ನು ಇಷ್ಟು ವೈಜ್ಞಾನಿಕವಾಗಿ, ಕಲಿಯುವವರ ಸ್ನೇಹಿಯಾಗಿ ರೂಪಿಸಲು ಸಾಧ್ಯವೇ ಎಂಬ ಭಾವನೆಯನ್ನು ಈ ಪ್ರಯೋಗಾಲಯ ಮೂಡಿಸಿದರೂ ಅಚ್ಚರಿಯಿಲ್ಲ.
ಈ ಪ್ರಯೋಗಾಲಯದಲ್ಲಿನ ಕಲಿಕಾ ಪ್ರಕ್ರಿಯೆಯನ್ನು ಒಟ್ಟು ಮೂರು ಮುಖ್ಯ ವಿಭಾಗಗಳನ್ನಾಗಿ ಮಾಡಬಹುದು. ಕಂಪ್ಯೂಟರ್ ಆಧಾರಿತ ತರಬೇತಿ (ಸಿಬಿಟಿ), ವ್ಯಾಕರಣ ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ (ಪಿಡಿಪಿ) ಎಂಬುದಾಗಿ ವಿಂಗಡಿಸಬಹು ಎಂದು ಮಹಾವಿದ್ಯಾಲಯದ ಇಂಗ್ಲಿಷ್ ಉಪನ್ಯಾಸಕ ಎ.ಪಿ.ನಿರಂಜನ್ ವಿವರಿಸುತ್ತಾರೆ.
ಮೊದಲು ಇಂಗ್ಲಿಷ್‌ನಲ್ಲಿ ವಾಕ್ಯಗಳ ರಚನೆ ನಂತರ ಅದಕ್ಕೆ ಕನ್ನಡದಲ್ಲಿ ವಿವರಣೆ, ಸಂವಹನದ ಮೂಲಭೂತ ಕೌಶಲಗಳನ್ನು ಈ ಕಂಪ್ಯೂಟರ್ ಆಧಾರಿತ ತರಬೇತಿ ಮೂಲಕ ಕಲಿಸಲು ಮತ್ತು ಕಲಿಯಲು ಸಾಧ್ಯ. ಸುಮಾರು 20ಕ್ಕೂ ಹೆಚ್ಚು ಕಾಲ್ಪನಿಕ ಸನ್ನಿವೇಶಗಳ ಮೂಲಕ ಇಂಗ್ಲಿಷ್‌ನಲ್ಲಿ ಸಂಭಾಷಣೆ ಹೇಗಿರಬೇಕು ಎಂಬುದನ್ನು ವಿವರಿಸಲಾಗುತ್ತದೆ ಎಂದೂ ವಿವರಿಸುತ್ತಾರೆ.
ಇನ್ನು, ಶಬ್ದಗಳ ಉಚ್ಚಾರಣೆ, ಯಾವ ಪದದ ಮೇಲೆ ಎಷ್ಟು ಸ್ವರಭಾರ ಇರಬೇಕು, ಸಂದರ್ಭಕ್ಕೆ ತಕ್ಕಂತೆ ಯಾವ ಶಬ್ದಕ್ಕೆ ಒತ್ತು ನೀಡಬೇಕು ಎಂಬುದನ್ನು ಎರಡನೇ ಭಾಗದಲ್ಲಿ ಕಲಿಯಬಹುದು. ಇನ್ನು, ಸಂದರ್ಶನಗಳನ್ನು ಹೇಗೆ ಎದುರಿಸಬೇಕು, ವಿಚಾರ ಸಂಕಿರಣದ ಸಿದ್ಧತೆ ಹೇಗಿರಬೇಕು, ಆಕರ್ಷಕ ವ್ಯಕ್ತಿತ್ವ ಹೊಂದಲು ಅನುಸರಿಬೇಕಾದ ಅಂಶಗಳು ಯಾವವು ಎಂಬ ಬಗ್ಗೆ ಪರ್ಸನಾಲಿಟಿ ಡೆವಲೆಪ್‌ಮೆಂಟ್ ಪ್ರೊಗ್ರಾಮ್ (ಪಿಡಿಸಿ) ವಿವರಿಸುತ್ತದೆ.
ಅಲ್ಲದೇ, ವೈದ್ಯರು, ಎಂಜಿನಿಯರ್‌ಗಳು, ಬ್ಯಾಂಕ್ ಪರಿಸರದಲ್ಲಿ ಬಳಸುವ ಪಾರಿಭಾಷಿಕ ಪದಗಳನ್ನು ಸಹ ಈ ಪ್ರಯೋಗಾಲಯದಲ್ಲಿನ ಸೌಲಭ್ಯದಿಂದ ತಿಳಿದುಕೊಳ್ಳಬಹುದು ಎಂದು ವಿವರಿಸುತ್ತಾರೆ.
ವಿಶ್ವವಿದ್ಯಾಲಯ ಧನಸಹಾಯ ಆಯೋಗ ನೀಡಿರುವ 3.5 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಈ ಭಾಷಾ ಪ್ರಯೋಗಾಲಯದಲ್ಲಿ ಒಟ್ಟು 24 ಕಂಪ್ಯೂಟರ್‌ಗಳಿವೆ. ನಿರ್ಭಯದಿಂದ ಇಂಗ್ಲಿಷ್ ಮಾತನಾಡುವ ಜೊತೆಗೆ ಅಕರ್ಷಕ ವ್ಯಕ್ತಿತ್ವ ಹೊಂದುವುದು ಆ ಮೂಲಕ ಯಶಸ್ವಿ ವ್ಯಕ್ತಿಯಾಗಬಯಸುವ ಪ್ರತಿಯೊಬ್ಬ ವಿದ್ಯಾರ್ಥಿ ಮೇಲೆ ಈ ಪ್ರಯೋಗಾಲಯದ ಸದುಪಯೋಗ ಪಡೆಯುವ ಜವಾಬ್ದಾರಿ ಇದೆ. ಅಲ್ಲದೇ, ಇಂತಹ ಪ್ರಯೋಗಾಲಯ ಅಳವಡಿಸುವ ಮೂಲಕ ಗವಿಸಿದ್ಧೇಶ್ವರ ಮಹಾವಿದ್ಯಾಲಯ ಸಹ ಮಾದರಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.