ADVERTISEMENT

`ಇಲ್ಲ'ಗಳ ಮಧ್ಯೆ ನಲುಗುತ್ತಿದೆ ಪಾಲಿಟೆಕ್ನಿಕ್

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2013, 10:39 IST
Last Updated 3 ಆಗಸ್ಟ್ 2013, 10:39 IST

ಕಾರಟಗಿ: ನಿವೇಶನ ಇದ್ದರೂ ಸ್ವಂತ ಕಟ್ಟಡವಿಲ್ಲ, ಪೂರ್ಣ ಪ್ರಮಾಣದ ಪ್ರಾಚಾರ್ಯರಿಲ್ಲ, ಬೋಧಕ, ಬೋಧಕೇತರ ಸೇರಿದಂತೆ ಸಿಬ್ಬಂದಿ ಅಧಿಕ ಸ್ಥಾನಗಳು ಖಾಲಿ ಇವೆ,  ವರ್ಕ್‌ಶಾಪ್, ಲ್ಯಾಬ್ ಇಲ್ಲ, ತರಗತಿ ನಡೆಯುವುದಕ್ಕೆ ಪ್ರತ್ಯೇಕ ಕೊಠಡಿಗಳಿಲ್ಲ, ಪ್ರಾಯೋಗಿಕ ಉಪಕರಣಗಳನ್ನಿಡಲು ಹಾಗೂ ಕಾಲೇಜು ಸಿಬ್ಬಂದಿ ವಿಶ್ರಾಂತಿ ಕೊಠಡಿಗಳು ಇಲ್ಲ. ಹೀಗೆ ಎಲ್ಲವೂ `ಇಲ್ಲ'ಗಳ ಮಧ್ಯೆ ಇಲ್ಲಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವ್ಯಾಸಂಗ ನಲುಗುತ್ತಿದೆ.

2009ರಿಂದ ಕೆಲಕಾಲ ಪಾಲಿಟೆಕ್ನಿಕ್ ಕಾಲೇಜು ತಾತ್ಕಾಲಿಕವಾಗಿ ಸರ್ಕಾರಿ ಕಾಲೇಜಿನಲ್ಲಿ ನಡೆಯುತ್ತಿತ್ತು, ಬಳಿಕ ಎಪಿಎಂಸಿ ಕಟ್ಟಡಗಳಲ್ಲಿ ನಡೆಯುತ್ತಿದೆ. ಆರಂಭದಲ್ಲಿ ಪೂರ್ಣ ಪ್ರಮಾಣದ ಪ್ರಾಚಾರ್ಯರಾಗಿದ್ದ ಹುನಗುಂದರು ತೀವ್ರ ಆಸಕ್ತಿ ವಹಿಸಿದ್ದರಿಂದ, ಮೇಲಿಂದ ಮೇಲೆ ಆಗಿನ ಸಚಿವ ತಂಗಡಗಿಯವರ ಬೆನ್ನತ್ತಿದ ಮೇಲೆ ಕಟ್ಟಡಕ್ಕಾಗಿ ನಾಗನಕಲ್ ಬಳಿ 4 ಎಕರೆ 12ಗುಂಟೆ ಭೂಮಿ, 8 ಕೋಟಿ ರೂ. ಮಂಜೂರಾಗಿತ್ತು.

ಕಟ್ಟಡ ನಿರ್ಮಾಣ ಕಾಮಗಾರಿಯನ್ನು  ಗೃಹಮಂಡಳಿಗೆ ವಹಿಸಲಾಗಿತ್ತು. ಸ್ಥಳ ಪರಿಶೀಲಿಸಿದ ಬಳಿಕ ನೀರಿನ ಸೆಲೆ ಅಧಿಕ ಇದ್ದು, ಇರುವ ಹಣದಲ್ಲಿ ಕಟ್ಟಡ ನಿರ್ಮಾಣ ಅಸಾಧ್ಯ ಎನ್ನುವ ವರದಿ ಸರ್ಕಾರಕ್ಕೆ ಹೋದ ಬಳಿಕ ವಿಷಯದ ಬಗೆಗೆ ಯಾರೂ ಚಕಾರ ಎತ್ತದಿರುವುದರಿಂದ ಕಟ್ಟಡ ಇಂದಿಗೂ ಮರೀಚಿಕೆಯಾಗಿ ಉಳಿದಿದೆ. ಬಂದ ಅನುದಾನದ ಹಣ ವಾಪಸ್ಸಾಗಿದೆ.

ಬಳಿಕ ಪೂರ್ಣ ಪ್ರಮಾಣದ ಪ್ರಾಚಾರ್ಯರಿಲ್ಲದ್ದರಿಂದ ಕಾಲೇಜಿನ ಸುಧಾರಣೆಯತ್ತ ಗಮನ ಇಲ್ಲದಾಗಿದೆ. ಎಪಿಎಂಸಿಗೆ ನೀಡಬೇಕಾದ ಬಾಡಿಗೆ ಹಣ ಇಲಾಖೆಯಿಂದ ಸಕಾಲಕ್ಕೆ ಪಾವತಿಯಾಗದೆ, ಬಾಕಿ ಉಳಿದಿದೆ.

ವಿದ್ಯಾರ್ಥಿಗಳು ಹಣ ಹಾಗೂ ಸಮಯ ಹೆಚ್ಚುವರಿ ಖರ್ಚುಮಾಡಿ ವರ್ಕ್‌ಶಾಪ್, ಲ್ಯಾಬ್‌ಗೆಂದು ಕೊಪ್ಪಳ ಇಲ್ಲವೆ ಸಿರುಗುಪ್ಪಾದ ಕಾಲೇಜುಗಳಿಗೆ ತೆರಳಬೇಕಾದ ಅನಿವಾರ್ಯತೆ ಇದೆ. ಗೊದಾಮಿನಂಥ ಕಟ್ಟಡದಲ್ಲಿರುವ ಕಾಲೇಜಿನಲ್ಲಿ ತರಗತಿಗಳ ಮಧ್ಯೆ ಮರೆಮಾಡಲಾಗಿದೆ.  ಒಂದು ತರಗತಿಯ ಬೋಧನೆ ಪಕ್ಕದ ತರಗತಿಗಳಿಗೂ ಕೇಳುವಂತಿದೆ. ಸಿಬ್ಬಂದಿಗಳ ಕೊರತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.