ADVERTISEMENT

`ಉತ್ತಮ ಆಡಳಿತ ನೀಡಲು ವಿಫಲ'

`ಪ್ರಜಾವಾಣಿ' ವರದಿ ಪ್ರಸ್ತಾಪ- ಜನರ ಕ್ಷಮೆ ಕೋರಿದ ಸದಸ್ಯ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2013, 9:59 IST
Last Updated 14 ಫೆಬ್ರುವರಿ 2013, 9:59 IST
ಕೊಪ್ಪಳ ನಗರಸಭೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ನಗರಸಭೆ ಅಧ್ಯಕ್ಷ ಸುರೇಶ ದೇಸಾಯಿ ಅವರು ಅಧಿಕಾರಿಗಳು ನೀಡುತ್ತಿರುವ ವಿವರಣೆಯನ್ನು ಆಲಿಸುತ್ತಿರುವುದು. ಉಪಾಧ್ಯಕ್ಷ ಅಮ್ಜದ್ ಪಟೇಲ್, ಸದಸ್ಯರಾದ ಡಾ.ಉಪೇಂದ್ರ, ಕಾಟನ್ ಪಾಷಾ, ಗವಿಸಿದ್ಧಪ್ಪ ಮುಂಡರಗಿ, ಚಂದ್ರಶೇಖರ ಕವಲೂರು ಚಿತ್ರದಲ್ಲಿದ್ದಾರೆ
ಕೊಪ್ಪಳ ನಗರಸಭೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ನಗರಸಭೆ ಅಧ್ಯಕ್ಷ ಸುರೇಶ ದೇಸಾಯಿ ಅವರು ಅಧಿಕಾರಿಗಳು ನೀಡುತ್ತಿರುವ ವಿವರಣೆಯನ್ನು ಆಲಿಸುತ್ತಿರುವುದು. ಉಪಾಧ್ಯಕ್ಷ ಅಮ್ಜದ್ ಪಟೇಲ್, ಸದಸ್ಯರಾದ ಡಾ.ಉಪೇಂದ್ರ, ಕಾಟನ್ ಪಾಷಾ, ಗವಿಸಿದ್ಧಪ್ಪ ಮುಂಡರಗಿ, ಚಂದ್ರಶೇಖರ ಕವಲೂರು ಚಿತ್ರದಲ್ಲಿದ್ದಾರೆ   

ಕೊಪ್ಪಳ: `ನಗರ ಅಭಿವೃದ್ಧಿ ಸೇರಿದಂತೆ ಜನರ ನಿರೀಕ್ಷೆಯಂತೆ ಉತ್ತಮ ಆಡಳಿತ ನೀಡುವಲ್ಲಿ ಪ್ರಸ್ತುತ ಚುನಾಯಿತ ಮಂಡಳಿ ಸಂಪೂರ್ಣ ವಿಫಲವಾಗಿದೆ. ಇದಕ್ಕಾಗಿ ನಗರದ ಜನತೆಯ ಕ್ಷಮೆ ಕೇಳುತ್ತೇನೆ'
- ಇವು ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಬುಧವಾರ ನಡೆದ ಈ ಚುನಾಯಿತ ಮಂಡಳಿಯ ಕೊನೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯ ವೀರಣ್ಣ ಹಂಚಿನಾಳ ಅವರ ಮಾತುಗಳು.

ಸಭೆ ಪ್ರಾರಂಭಗೊಳ್ಳುತ್ತಿದ್ದಂತೆಯೇ ಮಾತನಾಡಿ, ಆಡಳಿತದ ವೈಫಲ್ಯಗಳನ್ನು ಪಟ್ಟಿ ಮಾಡಿದ ಅವರು, ಇಂದಿನ `ಪ್ರಜಾವಾಣಿ' ಪತ್ರಿಕೆಯಲ್ಲಿ ವಿಶ್ಲೇಷಣೆ ಮಾಡಿರುವಂತೆ ನಗರದ ಸಮಗ್ರ ಅಭಿವೃದ್ಧಿಗೆ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ನಗರಸಭೆ ಸಂಪೂರ್ಣ ವಿಫಲವಾಗಿದೆ ಎಂದರು.

ಕಳೆದ 5 ವರ್ಷಗಳಲ್ಲಿ ನಗರಸಭೆಗೆ 70-80 ಕೋಟಿ ರೂಪಾಯಿಗಳಷ್ಟು ಅನುದಾನ ಬಂದಿದೆ. ಈ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಲ್ಲಿಯೂ ವಿಫಲರಾಗಿದ್ದೇವೆ. ಪ್ರತಿ ಸಾಮಾನ್ಯ ಸಭೆಯಲ್ಲಿಯೂ ವಿಷಯಾಧಾರಿತ ಚರ್ಚೆಯೇ ನಡೆಯುವುದಿಲ್ಲ. ಈ ಎಲ್ಲ ಕಾರಣಗಳಿಂದ ನಗರಸಭೆಯ ಆಡಳಿತ ವೈಖರಿಯೇ ಹೇಸಿಗೆ ತರುವಂತಿದೆ. ಇದಕ್ಕಾಗಿ ಜನರೂ ನಮ್ಮನ್ನು ಕ್ಷಮಿಸುವುದಿಲ್ಲ ಎಂದು ಹೇಳಿದರು.

ಮಾಜಿ ಅಧ್ಯಕ್ಷರೂ ಆಗಿರುವ ಸದಸ್ಯ ಚಂದ್ರಶೇಖರ ಕವಲೂರು ಮಾತನಾಡಲು ಆರಂಭಿಸಿದ ಕೆಲ ಹೊತ್ತಿನ ನಂತರ ತೀವ್ರ ಮಾತಿನ ಚಕಮಕಿಯೇ ನಡೆಯಿತು.

ಸದಸ್ಯ ವೀರಣ್ಣ ಹಂಚಿನಾಳ ಹೇಳಿದ್ದು ಸರಿಯಾಗಿಯೇ ಇದೆ. `ಪತ್ರಿಕೆ'ಯಲ್ಲಿ ಬರೆದಿರುವುದು ಸಹ ಸರಿಯಾಗಿಯೇ ಇದೆ ಎಂದರು. ಈ ಮಾತಿಗೆ ಪ್ರತಿಕ್ರಿಯಿಸಿದ ಅಧ್ಯಕ್ಷ ಸುರೇಶ ದೇಸಾಯಿ, ನಮ್ಮನ್ನು ಟೀಕಿಸಿ ಬರೆಯುವುದು ಮಾಧ್ಯಮದ ಕೆಲಸ ಎಂದರು. ಆದರೆ, ಮಾಧ್ಯಮಗಳಲ್ಲಿ ಬರುವ ವರದಿಗಳನ್ನು ಲಘುವಾಗಿ ಪರಿಗಣಿಸಬಾರದು ಎಂದು ಕವಲೂರು ತಿರುಗೇಟು ನೀಡಿದರು.

ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಏರು ದನಿಯಲ್ಲಿ ಮಾತಿನ ಚಕಮಕಿ ಆರಂಭವಾಯಿತು. ಒಂದು ಹಂತದಲ್ಲಿ ನಗರಸಭೆಗೆ ಬಂದ ಅನುದಾನದ ಬಳಕೆ ಕುರಿತು ಕವಲೂರು ಪ್ರಸ್ತಾಪಕ್ಕೆ ಆಕ್ರಮಣಕಾರಿ ಧಾಟಿಯಲ್ಲಿ ಉತ್ತರಿಸಲು ಆರಂಭಿಸಿದ ಅಧ್ಯಕ್ಷ ದೇಸಾಯಿ, `ಗವಿಸಿದ್ಧಪ್ಪನ ಮಠಕ್ಕೆ ಹೋಗಿ ಪ್ರಮಾಣ ಮಾಡೋಣ ನಡೆಯಿರಿ. ಯಾರು ಎಷ್ಟು ಸಾಚಾ ಎಂಬುದು ಗೊತ್ತಾಗುತ್ತದೆ' ಎಂದು ಹೇಳಿದರು.

ಸಭೆಯ ಕಾರ್ಯಕ್ರಮ ಪಟ್ಟಿಯಲ್ಲಿನ ಲೋಪದೋಷಗಳನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ಮಾನ್ವಿ ಪಾಷಾ ಅವರಿಗೂ ದೇಸಾಯಿ ಖಾರವಾಗಿಯೇ ಪ್ರತಿಕ್ರಿಯೆ ನೀಡಿದರು.

`ನಗರಸಭೆಯ ಬಹುತೇಕ ಸಿಬ್ಬಂದಿ ಅಯೋಗ್ಯರಿದ್ದಾರೆ. ಸರಿಯಾಗಿ ಕೆಲಸ ಬರುವುದಿಲ್ಲ. ತಾವು ಏನು ಟೈಪು ಮಾಡುತ್ತೇವೆ ಎಂಬುದೇ ಅವರಿಗೆ ಗೊತ್ತಿಲ್ಲ. ಆದರೂ ಅಂಥವರಿದಂದಲೇ ಕಚೇರಿ ಕೆಲಸ ತೆಗೆದುಕೊಳ್ಳಬೇಕು' ಎಂದರು.

`ಇಂತಹ ಕೆಲ ಸಿಬ್ಬಂದಿಯನ್ನು ಬದಲಾಯಿಸೋಣ ಎಂದರೆ, ನೀವೇ ಅವರ ಸೇವೆಯನ್ನು ನವೀಕರಣ ಮಾಡಲು ದುಂಬಾಲು ಬೀಳುತ್ತೀರಿ' ಎಂಬ ದೇಸಾಯಿ ಅವರ ತೀಕ್ಷ್ಣ ಉತ್ತರಕ್ಕೆ ಮಾನ್ವಿ ಪಾಷಾ ನಿರುತ್ತರರಾದರು.

ನಗರಸಭೆ ಉಪಾಧ್ಯಕ್ಷ ಅಮ್ಜದ್‌ಪಟೇಲ, ಆಯುಕ್ತೆ ಬಿ.ಎಂ.ಅಶ್ವಿನಿ ವೇದಿಕೆ ಮೇಲಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.