ಕುಷ್ಟಗಿ: ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿರುವ ಚಾಮುಂಡೇಶ್ವರಿ ಹಮಾಲರ ಸಂಘದ ಅಧ್ಯಕ್ಷ ಮತ್ತು ಸದಸ್ಯರ ನಡುವಿನ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ಬಿಕ್ಕಟ್ಟಿನಿಂದ ಪ್ರಾಂಗಣದ ವಹಿವಾಟು ಸ್ಥಗಿತಗೊಂಡ ಘಟನೆ ಮಂಗಳವಾರ ನಡೆಯಿತು.
ಸೋಮವಾರ ಸಂಜೆ 4 ಗಂಟೆಯಿಂದಲೇ ಆರಂಭವಾದ ಸಮಸ್ಯೆ ಮಂಗಳವಾರ ಮಧ್ಯಾಹ್ನದವರೆಗೂ ಮುಂದುವರೆದಿತ್ತು. ಲೋಡ್ ಮಾಡಿಕೊಳ್ಳುವ ಸಲುವಾಗಿ ಸುಮಾರು ಐವತ್ತಕ್ಕೂ ಅಧಿಕ ಲಾರಿಗಳು ನಿಂತಿದ್ದವು. ಬೇಸತ್ತ ರೈತರು, ಖರೀದಿದಾರರು, ವರ್ತರಕು ಎಪಿಎಂಸಿ ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದು ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿದ್ದರು. ನಂತರ ಸಂಘದ ಅಧ್ಯಕ್ಷ ಬಸಣ್ಣ ಗೋನಾಳ ಅವರೊಂದಿಗೆ ಮಾತನಾಡಿದ ಕಾರ್ಯದರ್ಶಿ ಎ.ಬಿ.ಪಾಟೀಲ, ಆಂತರಿಕ ಸಮಸ್ಯೆ ಬಗೆಹರಿಸಿಕೊಂಡು ಪ್ರಾಂಗಣದಲ್ಲಿನ ವಹಿವಾಟಿಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳುವಂತೆ ತಾಕೀತು ಮಾಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಸಣ್ಣ, ಪ್ರಾಂಗಣದಲ್ಲಿ ಸಭೆ ನಡೆಸಿ ಸಂಘದ ಸದಸ್ಯರಾದ ಹಮಾಲರಿಗೆ ಲೆಕ್ಕಪತ್ರದ ಮಾಹಿತಿ ನೀಡಲಾಗಿದೆ, ಸಮಸ್ಯೆ ಬಗೆಹರಿದಿದಿದ್ದು ಚಟುವಟಿಕೆ ಎಂದಿನಂತೆ ಆರಂಭಗೊಂಡಿದೆ ಎಂದರು. ಆದರೆ ತಾವು ಪದತ್ಯಾಗ ಮಾಡಿರುವುದಾಗಿ ಪ್ರಕಟಿಸಿದ ದಿಢೀರ್ ನಿರ್ಧಾರ ಎಲ್ಲರಲ್ಲಿ ಅಚ್ಚರಿ ತಂದಿತು.
ಸೋಮವಾರ ಸಂಜೆ ಸಂಘದ ಅಧ್ಯಕ್ಷರ ಸ್ವಂತ ಲಾರಿಗೆ ಶೇಂಗಾ ಮೂಟೆ ಲೋಡ್ ಮಾಡುವುದನ್ನು ಬಿಟ್ಟ ಹಮಾಲರು ಬೇರೆಯವರ ಬೇವಿನ ಬೀಜದ ಚೀಲಗಳನ್ನು ಲಾರಿಗೆ ಲೋಡ್ ಮಾಡಲು ಮುಂದಾದಾಗ ಅಸಮಾಧಾನಗೊಂಡ ಅಧ್ಯಕ್ಷ ಯಾವುದೇ ಲಾರಿಗಳಿಗೆ ಸರಕು ಹೇರದಂತೆ ಹೇಳಿದ್ದರಿಂದ ಕೆಲಸ ಸ್ಥಗಿತಗೊಂಡಿತ್ತು. ಮನಸ್ತಾಪ ಬೆಳೆಗ್ಗೆಯೂ ಮುಂದುವರೆದು, ಸಂಘದ ಲೆಕ್ಕಪತ್ರ ತೋರಿಸುವಂತೆ ಹಮಾಲರು ಕೆಲಸ ಸ್ಥಗಿತಗೊಳಿಸಿದರು.
ತಮ್ಮ ಲಾರಿಗೆ ಶೇಂಗಾ ಲೋಡ್ ಮಾಡಲಿಲ್ಲ ಎಂಬ ಒಂದೇ ಕಾರಣಕ್ಕೆ ಅಧ್ಯಕ್ಷ ಬಸಣ್ಣ ಗೋನಾಳ ಅದನ್ನೇ ನೆಪವಾಗಿಟ್ಟುಕೊಂಡು ಇತರೆ ಯಾವುದೇ ಲಾರಿಗಳಿಗೆ ಮಾಲು ತುಂಬದಂತೆ ತಾಕೀತು ಮಾಡಿದ್ದು ಎಷ್ಟರಮಟ್ಟಿಗೆ ಸರಿ ಎಂದು ಹಮಾಲರು ಆಕ್ರೋಶ ವ್ಯಕ್ತಪಡಿಸಿದರು. ಈ ಮಧ್ಯೆ ಕೆಲ ರಾಜಕೀಯ ವ್ಯಕ್ತಿಗಳು ಸಂಘದ ಅಧ್ಯಕ್ಷರ ಪದಚ್ಯುತಿಗೆ ಯತ್ನಿಸುತ್ತಿದ್ದು ಹಮಾಲರಿಗೆ ಪರೋಕ್ಷ ಕುಮ್ಮಕ್ಕು ನೀಡುತ್ತಿರುವುದು ಗೊಂದಲಕ್ಕೆ ಕಾರಣ ಎಂದು ಹೆಸರು ಪ್ರಕಟಿಸಲು ಇಚ್ಛಿಸದ ಕೆಲವರು ಹೇಳಿದರು.
ಹಮಾಲರ ಸಂಘಕ್ಕೆ ಸದಸ್ಯರಾಗಬೇಕಾದರೆ ಮೊದಲು ರೂ 500 ಶುಲ್ಕ ಇತ್ತು ಈಗ ರೂ 10-15 ಸಾವಿರ ಪಡೆಯಲಾಗುತ್ತಿದೆ, ಸುಮಾರು 380 ಸದಸ್ಯರಿದ್ದೇವೆ, ಸಂಘದಲ್ಲಿ ಲಕ್ಷಾಂತರ ಹಣ ಸಂಗ್ರಹವಾಗಿದೆ, ಆರೇಳು ವರ್ಷಗಳಾದರೂ ಅಧ್ಯಕ್ಷರು ಲೆಕ್ಕ ನೀಡುತ್ತಿಲ್ಲ ಎಂದು ಹಮಾಲರು ದೂರಿದರು. ಆದರೆ ಸಮಿತಿಯಲ್ಲಿ 274 ನೋಂದಾಯಿತ ಹಮಾಲರಿದ್ದಾರೆ ಎಂಬುದನ್ನು ಕಾರ್ಯದರ್ಶಿ ತಿಳಿಸಿದರು. ಸಂಘ ಅಧಿಕೃತವಾಗಿ ನೋಂದಣಿಯಾಗಿದೆಯೆ ಎಂಬುದನ್ನು ಅಧ್ಯಕ್ಷ ಗೋನಾಳ ಸ್ಪಷ್ಟಪಡಿಸಲಿಲ್ಲ.
ಅಳಲು: ಹಮಾಲರ ಮತ್ತು ಸಂಘದ ಅಧ್ಯಕ್ಷರ ನಡುವಿನ ಕಿತ್ತಾಟದಿಂದಾಗಿ ತಾವು ತೊಂದರೆಗೆ ಒಳಗಾಗಬೇಕಾಯಿತು ಎಂದು ಹಿರೇವಂಕಲಕುಂಟಾದ ರೈತ ವೀರಭದ್ರಗೌಡ ಎಂದು ಅಳಲು ತೋಡಿಕೊಂಡರು. ಪ್ರಾಂಗಣದಲ್ಲಿ ಎಲ್ಲರೂ ಪರಸ್ಪರ ಸಹಕಾರ ಇಲ್ಲದಿದ್ದರೆ ವಹಿವಾಟು ವ್ಯವಸ್ಥೆ ಹದಗೆಡುತ್ತದೆ ಎಂದು ಖರೀದಿದಾರರ ಸಂಘದ ಅಧ್ಯಕ್ಷ ಶಶಿಧರ ಕವಲಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.