ADVERTISEMENT

ಎಲ್ಲಿಂದಲೋ ಬಂದವರು ಹಣ ಪಡೆದು ಹೋದರು!

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 9:15 IST
Last Updated 4 ಅಕ್ಟೋಬರ್ 2011, 9:15 IST

ಕೊಪ್ಪಳ:ಆ ಯುವತಿಯರು ಎಲ್ಲಿಂದ ಬಂದಿದ್ದಾರೋ ಗೊತ್ತಿಲ್ಲ. ಆದರೆ, ನಗರದ ಆಯ್ದ ರಸ್ತೆಗಳಲ್ಲಿ ನಿಂತು ಹೋಗಿ-ಬರುವ ಬೈಕ್ ಸವಾರರನ್ನು ನಿಲ್ಲಿಸಿ ಹಣ ಕೇಳುವುದನ್ನು ಬಿಡಲಿಲ್ಲ. ಈ ರೀತಿ ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ಕೆಲವೆಡೆ ಪತ್ರಿಕೆಯ ಕ್ಯಾಮರಾ ಕಣ್ಣಿಗೆ ಸಿಕ್ಕರೂ, ಹೆಚ್ಚಿನ ವಿವರ ಪಡೆಯಲು ಹೋದಾಗ ತಪ್ಪಿಸಿಕೊಂಡು ಓಡಿ ಹೋದರು!

ಇಂತಹ ವಿಲಕ್ಷಣ ಘಟನೆ ನಗರದಲ್ಲಿ ಸೋಮವಾರ ಕಂಡು ಬಂದಿತು. ನಗರದ ರೈಲ್ವೆ ನಿಲ್ದಾಣ ರಸ್ತೆ, ಗದಗ ರಸ್ತೆಗಲ್ಲಿ ಹೆಚ್ಚಾಗಿ ಕಂಡು ಬಂದ ಈ ಯುವತಿಯರು, ಬೈಕ್ ನಿಲ್ಲಿಸಿ, ಸವಾರರಿಂದ ಹಣ ಪಡೆಯುತ್ತಿದ್ದರು. ಹಿಂದಿಯಲ್ಲಿಯೇ ಮಾತನಾಡುತ್ತಿದ್ದ ಅವರು, ಹಣ ಏಕೆ ಎಂಬ ಬೈಕ್ ಸವಾರರ ಪ್ರಶ್ನೆಗೆ ಉತ್ತರಿಸುವ ವ್ಯವಧಾನ ತೋರದೇ ಜಾಗ ಖಾಲಿ ಮಾಡುತ್ತಿದ್ದರು.

ಒಬ್ಬ ಯುವತಿ ಹಣ ಕೇಳುತ್ತಿದ್ದರೆ ಮತ್ತಿಬ್ಬರು ದೂರದಿಂದ ಕಣ್ಗಾವಲು ಇಡುತ್ತಿದ್ದರು. ಒಂದು ವೇಳೆ ಯಾರಾದರೂ ಹೆಚ್ಚಿನ ವಿಚಾರಣೆ ಮಾಡಲು ಮುಂದಾದರೆ, ಫೋಟೊ ತೆಗೆಯಲು ಬಂದರೆ ಎಲ್ಲರೂ ತಕ್ಷಣ ಕಾಲ್ಕಿತ್ತಿದ್ದು ಸಹ ಅಚ್ಚರಿ-ಕುತೂಹಲಕ್ಕೆ ಕಾರಣವಾಯಿತು.

ಸಂಘಟನೆಯೊಂದರ ಹೆಸರು, ಫಲಕವಾಗಲಿ ಸಹ ಅವರ ಬಳಿ ಇರಲಿಲ್ಲ. ಹೀಗಾಗಿ ಇಡೀ ಘಟನೆ ವಿಚಿತ್ರವಾಗಿ ಕಂಡರೂ ಹಲವು ಸಂಶಯಗಳಿಗೆ ಕಾರಣವಾಗಿದ್ದು ಸುಳ್ಳಲ್ಲ. ಅಲ್ಲದೇ, ಈ ಕುರಿತಂತೆ ನಗರ ಠಾಣೆಯಲ್ಲಿ ಸಹ ದೂರು ದಾಖಲಾಗಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.