ADVERTISEMENT

ಎಸ್ಸೆಸ್ಸೆಲ್ಸಿ: ಜಿಲ್ಲೆಗೆ ಶೇ 80.43 ಫಲಿತಾಂಶ

ರಾಜ್ಯಮಟ್ಟದ ಪಟ್ಟಿಯಲ್ಲಿ 19ನೇ ಸ್ಥಾನಕ್ಕಿಳಿದ ಕೊಪ್ಪಳ

​ಪ್ರಜಾವಾಣಿ ವಾರ್ತೆ
Published 8 ಮೇ 2018, 13:37 IST
Last Updated 8 ಮೇ 2018, 13:37 IST

ಕೊಪ್ಪಳ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಶೇ 80.43 ಫಲಿತಾಂಶ ಬಂದಿದೆ. ಶೇಕಡಾವಾರು ಫಲಿತಾಂಶದಲ್ಲಿ ಕಳೆದಬಾರಿಗಿಂತ ಸುಮಾರು ಶೇ 4ರಷ್ಟು ಉನ್ನತಿ ಸಾಧಿಸಿದೆ. ಆದರೆ, ರಾಜ್ಯಮಟ್ಟದದಲ್ಲಿ 19ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ಬಾರಿ ಜಿಲ್ಲೆ 11ನೇ ಸ್ಥಾನದಲ್ಲಿತ್ತು. ಶೇ 76.05 ಫಲಿತಾಂಶ ಲಭಿಸಿತ್ತು.

ಪರೀಕ್ಷೆಗೆ ಜಿಲ್ಲೆಯಲ್ಲಿ ಒಟ್ಟು 17,647 ವಿದ್ಯಾರ್ಥಿಗಳು ಹಾಜರಾಗಿದ್ದರು. 14,194 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹಾಜರಾಗಿದ್ದ 9,020 ಬಾಲಕರ ಪೈಕಿ 7,133 ಮಂದಿ ಉತ್ತೀರ್ಣರಾಗಿದ್ದಾರೆ. 8,627 ಬಾಲಕಿಯರ ಪೈಕಿ 7,061 ಮಂದಿ ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ತಾಲ್ಲೂಕುವಾರು ಫಲಿತಾಂಶ: ಕೊಪ್ಪಳ ತಾಲ್ಲೂಕಿನಿಂದ ಪರೀಕ್ಷೆಗೆ ಹಾಜರಾದ 2,503 ವಿದ್ಯಾರ್ಥಿಗಳ ಪೈಕಿ 1,80 ಮಂದಿ ಉತ್ತೀರ್ಣರಾಗಿದ್ದಾರೆ. ಯಲಬುರ್ಗಾ ತಾಲ್ಲೂಕಿನಿಂದ ಹಾಜರಾದ 1,782 ವಿದ್ಯಾರ್ಥಿಗಳ ಪೈಕಿ 1,400 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಗಂಗಾವತಿಯಿಂದ ಹಾಜರಾದ 2,799 ವಿದ್ಯಾರ್ಥಿಗಳ ಪೈಕಿ 2,225 ಮಂದಿ ಪಾಸಾಗಿದ್ದಾರೆ. ಕುಷ್ಟಗಿ ತಾಲ್ಲೂಕಿನಿಂದ ಪರೀಕ್ಷೆಗೆ ಹಾಜರಾದ 1,936 ವಿದ್ಯಾರ್ಥಿಗಳ ಪೈಕಿ 1,618 ಮಂದಿ ಪಾಸಾಗಿದ್ದಾರೆ.

ADVERTISEMENT

ನಗರದ ಲಯನ್ಸ್ ಕ್ಲಬ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 97ರಷ್ಟು ಫಲಿತಾಂಶ ಲಭಿಸಿದೆ. ವಿದ್ಯಾರ್ಥಿಗಳಾದ ಸಂಜನಾ ದೇಸಾಯಿ (ಶೇ 98.56) ಪ್ರಥಮ, ಸಂಚಯ್ ಜಾದವ್ 613 ಅಂಕಗಳೊಂದಿಗೆ ದ್ವಿತೀಯ ಮತ್ತು ಶ್ರೀರಾಮ ಭಟ್ 592 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ.

ಭಾಗ್ಯನಗರದ ನ್ಯಾಷನಲ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಸೃಷ್ಟಿ ಅಂಬಾಸಾ ಸಿದ್ದಲಿಂಗ (ಶೇ 96.64) ಪ್ರಥಮ ಸ್ಥಾನ ಪಡೆದಿದ್ದಾರೆ.

ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಶೇ 100 ಫಲಿತಾಂಶ ಬಂದಿದೆ. ಶಾಲೆಗೆ ವಿದ್ಯಾರ್ಥಿಗಳಾದ ಸ್ವಾತಿ ಶಂಕ್ರಪ್ಪ ಜಲ್ಲಿ (ಶೇ 94.88) ಪ್ರಥಮ, ರೇಣುಕಾ ಯಲ್ಲಪ್ಪ ಚೌಡ್ಕಿ ಮತ್ತು ಗೌತಮ್‌ ಹೇಮಂತ್‌ ಬೇಲೂರು (ಶೇ 91.04) ದ್ವಿತೀಯ ಸ್ಥಾನ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.