ADVERTISEMENT

ಕನಕಾಚಲಪತಿ ಜಾತ್ರೆಗೆ ಜನಸಾಗರ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 6:40 IST
Last Updated 3 ಏಪ್ರಿಲ್ 2013, 6:40 IST

ಕನಕಗಿರಿ: ಇಲ್ಲಿನ ಕನಕಾಚಲಪತಿ ಮಹಾರಥೋತ್ಸವಕ್ಕೆ ಮಂಗಳವಾರ ಜನತೆ ಪ್ರವಾಹದ ರೀತಿಯಲ್ಲಿ  ಹರಿದು ಬಂತು. 
ನೆರೆಯ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಮಾತ್ರವಲ್ಲದೆ ರಾಜ್ಯದ ಬೆಂಗಳೂರ, ಬಾಗಲಕೋಟಿ, ಹಾವೇರಿ, ಹುಬ್ಬಳ್ಳಿ, ದಾವಣಗೆರೆ, ಬೆಳಗಾವಿ, ಬಳ್ಳಾರಿ, ಗದಗ, ಗುಲ್ಬರ್ಗ ಸೇರಿದಂತೆ ಇತರೆ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.

ಎಪಿಎಂಸಿ ಆವರಣ, ಚಿದಾನಂದ ಮಠ ಸಮುದಾಯ ಭವನ, ಪೊಲೀಸರ ವಸತಿ ಗೃಹ, ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರವಾಸಿ ಮಂದಿರ ಸೇರಿದಂತೆ ಇತರೆ ಖಾಲಿ ಜಾಗೆಯಲ್ಲಿ ಭಕ್ತರು ವಾಸ್ತವ್ಯ  ಹೂಡಿದ್ದರು.

ಎರಡು ವರ್ಷಗಳ ಹಿಂದೆ ನಿರ್ಮಾಣವಾದ ಯಾತ್ರಿ ನಿವಾಸ ಉದ್ಘಾಟನೆಯಾಗದ ಕಾರಣ ಭಕ್ತರು ಪರದಾಟ ನಡೆಸಬೇಕಾಗಿ ಬಂತು.
ತಾವು ನಿರ್ಮಿಸಿಕೊಂಡ ತಾತ್ಕಾಲಿಕ ಟೆಂಟ್‌ನಿಂದ ಭಕ್ತರು ಕನಕಾಚಲಪತಿ ದೇವಸ್ಥಾನದವರೆಗೂ ದೀಡ ನಮಸ್ಕಾರ ಹಾಕಿ, ತಾವು ಬೇಡಿಕೊಂಡ ಸಾಮಾಗ್ರಿಗಳನ್ನು ಸಮರ್ಪಿಸುತ್ತಿರುವುದು ಕಾಣಿಸಿತು.

ಕಲ್ಲುಗಳಿಂದ ನಿರ್ಮಾಣವಾದ ಹೊಲೆಗಳಲ್ಲಿ ನೈವೇದ್ಯ ಮಾಡಿ `ದಾಸಪ್ಪ'ನವರಿಗೆ ಗೋಪಾಳ ತುಂಬಿಸಿ ಊಟ ಮಾಡಿಸಿ ಕಾಣಿಕೆ ನೀಡುತ್ತಿದ್ದ ದೃಶ್ಯಗಳು ಈ ಪರಿಸರದಲ್ಲಿ ಕಂಡು ಬಂದವು.  

ಸುಮಂಗಲೆಯರು ಕಳಸ,  ಭಾಜಾ ಭಜಂತ್ರಿಯೊಂದಿಗೆ ಮೆರವಣಿಗೆಯೊಂದಿಗೆ ಕನಕಾಚಲಪತಿ ರಥಕ್ಕೆ ಬಾವುಟ, ಬೃಹತ್ ಪ್ರಮಾಣದ ಹೂವಿನ ಹಾರ, ಕಾಣಿಕೆಗಳನ್ನು  ನೀಡಿದರು.

ಹೂವು, ಬಾಳೇ ಹಣ್ಣು, ಟೆಂಗಿನಕಾಯಿ, ದವನ್, ಕರ್ಪೂರ ವ್ಯಾಪಾರ ಭರ್ಜರಿಯಾಗಿತ್ತು. ಬಿಸಿಲಿನ ಪ್ರಖರತೆಯಲ್ಲಿ ಉತ್ಸಾಹ ಕಳೆದು ಕೊಳ್ಳದ ಯುವ ಜನತೆ ಮೆರವಣಿಗೆಯಲ್ಲಿ ತಾಷ, ಹಲಗೆ ನಾದಕ್ಕೆ ಕುಣಿದು ಕುಪ್ಪಳಿಸಿದರು.  

ಚಿದಾನಂದ ಮಠದಲ್ಲಿ ಕನಕಾಚಲ ದಾಸೋಹ ಸಮಿತಿಯವರು 14ನೇ ವರ್ಷದ ಅನ್ನ ದಾಸೋಹ ಕಾರ್ಯಕ್ರಮ ಆಯೋಜಿಸಿದ್ದರು.
ರೊಟ್ಟಿ, ಕಾಳು ಮೆರಗು: ದಾಸೋಹದಲ್ಲಿ ಅನ್ನ ಸಾರು ಹುಗ್ಗಿ, ಬದನೆ ಕಾಯಿ ಪಲ್ಲೆ ಅಲ್ಲದೆ ಈ ಸಲ ಸಾವಿರಾರು ರೊಟ್ಟಿಗಳನ್ನು ಸಂಗ್ರಹ ಮಾಡಲಾಗಿತ್ತು.
ಅಲಸಂಧಿ, ಹೆಸರು, ಕಡ್ಲೆ, ಮಡಿಕಿ ಕಾಳು, ಅನ್ನ ಸಾಂಬರು, ಗೋಧಿ ಹುಗ್ಗಿಯ ವ್ಯವಸ್ಥೆ  ಮಾಡಲಾಗಿತ್ತು.

ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದರು. ಅಡುಗೆ ಕೋಣೆ, ಊಟದ ಹಾಲ್, ನೀರಿನ ಟ್ಯಾಂಕ್ ಇಲ್ಲಿ ಅವಶ್ಯಕತೆ ಇದೆ ಎಂದು ಸಮಿತಿಯ ವೀರಭದ್ರಪ್ಪ ಚಕ್ರಸಾಲಿ, ಹನುಮೇಶ ಮಹಿಪತಿ, ಎಂ. ಮಹಾಬಳೇಶ್ವರ ತಿಳಿಸಿದರು.

ದಲಾಲಿ ವರ್ತಕರು ಕೆಲಸ ಸ್ಥಗಿತಗೊಳಿಸಿ ಸೇವೆಯಲ್ಲಿ ಪಾಲ್ಗೊಂಡಿದ್ದರು. ಜಾತ್ರೆಯಲ್ಲಿ ವೀರಬಸನಗೌಡ ಪಾಟೀಲ ಮತ್ತು ಸ್ನೇಹಿತರು, ಮಂಜುನಾಥ ಕಾಂತೆಪ್ಪ ಸಜ್ಜನ್, ರಾಘವೇಂದ್ರ ಪತ್ತಾರ ಮತ್ತು ಸಂಗಡಿಗರು ಭಕ್ತರಿಗೆ ಉಚಿತ ಶರಬತ್, ಮಜ್ಜಿಗೆ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.