ಗಂಗಾವತಿ: ಅಧುನಿಕತೆ ಮತ್ತು ತಾಂತ್ರಿಕತೆಯ ಪಥದಲ್ಲಿ ಅಭಿವೃದ್ಧಿಯಾದಂತೆಲ್ಲಾ ಕನ್ನಡ ಭಾಷೆಗೆ ಧಕ್ಕೆ ಎದುರಾಗಲಿದೆ. ಭಾಷೆ ಅವನತಿಯ ಹಾದಿ ಹಿಡಿಯತ್ತದೆ ಎಂದು ಹಲವರು ವಾದಿಸುತ್ತಾರೆ. ಆದರೆ ಅದೃಷ್ಟವಶಾತ್ ಕನ್ನಡಕ್ಕೆ ಅವನತಿ ಎಂಬ ಪದ ಅನ್ವಯಿಸದು ಎಂದು ಸಾಹಿತಿ ಕುಂ. ವೀರಭದ್ರಪ್ಪ ಅಭಿಪ್ರಾಯಪಟ್ಟರು.
ಗಂಗಾವತಿ ತಾಲ್ಲೂಕು ಮಟ್ಟದ 3ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಇಲ್ಲಿನ ನಗರದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ನಿರ್ಮಿಸಿದ್ದ ಕಾಯಕಯೋಗಿ ಚನ್ನಬಸವ ಸ್ವಾಮಿ ಮುಖ್ಯ ವೇದಿಕೆಯಲ್ಲಿ ಎರಡು ದಿನಗಳ ಸಾಹಿತ್ಯ ಸಮ್ಮೇಳನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಟಿ.ವಿ. ಕಂಪ್ಯೂಟರ್ ಇನ್ನಿತರ ತಾಂತ್ರಿಕ ಸಾಧನ–ಸಲಕರಣೆಗಳು ಬಂದ ಬಳಿಕ ಪರಸ್ಪರ ಮಾತನಾಡುವ ಅವಕಾಶ ತಗ್ಗಿವೆ. ಇವೇ ಭಾಷಾ ಬೆಳವಣಿಗೆಗೆ ಕೊಂಚ ತೊಡಕಾಗಿವೆ. ಆದರೆ ಕನ್ನಡಕ್ಕೆ ಮಾತ್ರ ಗ್ರಾಮೀಣ, ಹಳ್ಳಿಗಾಡಿನ ಸೊಗಡಿನ ಸಂಸ್ಕೃತಿ ಇರುವವರೆಗೂ ಯಾವ ಆತಂಕವಿಲ್ಲ ಎಂದರು.
ಸಂಸ್ಕೃತಿ ಮತ್ತು ಭಾಷೆಯ ಜೀವಾಳ ಹಳ್ಳಿಗಾಡಿನಲ್ಲಿ ಬೇರು ಬಿಟ್ಟಿರುತ್ತದೆ. ಗ್ರಾಮೀಣ ಮಹಿಳೆಯರು ತಮ್ಮ ಮಕ್ಕಳನ್ನು ಜೋಗುಳ, ಲಾಲಿ ಹಾಡುಗಳ ಮೂಲಕ ಮಲಗಿಸುವ ಸಂಸ್ಕೃತಿ ಇರುವವರೆಗೂ ಕನ್ನಡ ಭಾಷೆಗೆ ಎಂದಿಗೂ ಧಕ್ಕೆ ಎದುರಾಗದು ಎಂದು ಅಭಿಪ್ರಾಯಪಟ್ಟರು.
ದಕ್ಷಣ ಭಾರತದ ಭಾಷೆಗಳನ್ನೇ ತೆಗೆದುಕೊಂಡರೆ ತಮಿಳು, ತೆಲುಗು, ಮಲಯಾಳಂ ಪರವಾಲಂಬಿ ಭಾಷೆ, ಸಂಸ್ಕೃತದಿಂದ ಸಾಕಷ್ಟು ಪದಗಳನ್ನು ಎರವಲು ಪಡೆದುಕೊಂಡಿದೆ. ಆದರೆ ಕನ್ನಡ ಸ್ವಾತಂತ್ರ ಭಾಷೆಯಾಗಿ ಇಂದಿಗೂ ಬೆಳೆಯುತ್ತಿದೆ ಎನ್ನುವುದನ್ನು ವಿದ್ವಾಂಸರು ಗುರುತಿಸುತ್ತಿದ್ದಾರೆ.
ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಅಥವಾ ಹೈದರಾಬಾದ್ ಕರ್ನಾಟಕದಲ್ಲಿ ಮಾತೃ ಭಾಷೆಯೊಂದಿಗೆ ಮತ್ತೊಂದೆರಡು ಭಾಷೆಗಳನ್ನು ಕಲಿಯುವ ಸದವಕಾಶ ಜನರಿಗಿದೆ. ಕನ್ನಡ ಉರ್ದು ಮತ್ತು ತೆಲುಗು ಸೇರಿದಂತೆ ಇತರ ಭಾಷೆಗೆ ಆವಾಸ ಸ್ಥಾನ ಕಲ್ಪಿಸಿದೆ ಎಂದರು.
ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ನಿವೃತ್ತ ಪ್ರಾಧ್ಯಾಪಕ ವಿ.ಎಚ್. ನಾಯಕ ಮಾತನಾಡಿ, ಕೇವಲ ಕನ್ನಡ ಕನ್ನಡ ಎಂದು ಮಾತನಾಡಿದರೆ ಸಾಲದು. ಕನ್ನಡದ ಕೈಗೆ ಕೆಲಸ, ಹೊಟ್ಟೆಗೆ ಊಟ ನೀಡುವ ಕೆಸಲಕ್ಕೆ ಸರ್ಕಾರ ಗಮನಹರಿಸಬೇಕು.
ಕನ್ನಡ ಪ್ರಾಧ್ಯಾಪಕನಾಗಿದ್ದ ತಾನು, ಕಾನ್ವೆಂಟ್ ಶಾಲೆಗೆ ಹೋಗುತ್ತಿದ್ದ ತನ್ನ ಇಬ್ಬರು ಮಕ್ಕಳನ್ನು ಎರಡನೇ ತರಗತಿಯಲ್ಲಿ ಶಾಲೆ ಬಿಡಿಸಿ ಕನ್ನಡ ಶಾಲೆಗೆ ಹಾಕಿದೆ. ಪರಿಣಾಮ ಇಂದು ಅವರಿಬ್ಬರಿಗೂ ಉದ್ಯೋಗವಿಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಸಂಸದ ಶಿವರಾಮಗೌಡ ಮಾತನಾಡಿ, ಕನ್ನಡಕ್ಕೆ ಆತಂಕ ಎದುರಾದಾಗ ಸರ್ಕಾರ ಎಚ್ಚೆತ್ತುಕೊಳ್ಳಬೇಕು, ರಂಗಭೂಮಿ, ಚಿತ್ರರಂಗ ಉಳಿವಿಗೆ ಡಬ್ಬಿಂಗ್ ನಿಷೇಧವಾಗಬೇಕು. ಈ ತೀರ್ಮಾನ ಈ ಸಮ್ಮೇಳನದ ಮೂಲಕ ಆಗಬೇಕೆಂದು ಒತ್ತಾಯಿಸಿದರು.
ಶಾಸಕ ಇಕ್ಬಾಲ್ ಅನ್ಸಾರಿ ಮಾತನಾಡಿ, ಸಾಹಿತ್ಯ ಎಂದರೆ ಕೇವಲ ಓದುವುದು, ಬರೆಯುವುದು ಅಲ್ಲ. ಸಾಹಿತ್ಯ ಎಂದರೇನು ಅನ್ನುವುದು ಅರ್ಥವಾಗಬೇಕಾದರೆ ಸಹನೆ, ಅಗತ್ಯ. ಈ ವೇದಿಕೆ ರಾಜಕೀಯ ಉದ್ದೇಶಕ್ಕೆ ಅಲ್ಲ, ಕವಿ, ಸಾಹಿತಿ, ಲೇಖಕರಿಗಾಗಿ ನಿರ್ಮಿಸಿದ್ದು ಎಂದರು.
ವಿಜಯಕುಮಾರ ಸ್ವಾಗತಿಸಿದರು. ಅಜಮೀರ ನಂದಾಪುರ ಪ್ರಾಸ್ತಾವಿಕ ಮಾತನಾಡಿದರು. ವೀರಣ್ಣ ನಿಂಗೋಜಿ, ಅಯೋಧ್ಯ ರಾಮಾಚಾರ, ಸಿ.ಎಚ್. ನಾರಿನಾಳ, ಶಾಮಿದ್ ಮನಿಯಾರ, ಜಿ. ಶ್ರೀಧರ, ದೊಡ್ಡಪ್ಪ ದೇಸಾಯಿ, ತಿಪ್ಪೇರುದ್ರಸ್ವಾಮಿ, ನಾರಾಯಣಪ್ಪ ನಾಯಕ್, ಎಸ್.ಎನ್. ಮಠ, ಅಲ್ಲಮಪ್ರಭು ಬೆಟ್ಟದೂರು ಇತರರಿದ್ದರು.
‘ಪವಿತ್ರ ಸ್ಥಾನ ಬೇಕು’
ಗಂಗಾವತಿ: ನಾವು ನಿತ್ಯ ಪರಸ್ಪರ ವ್ಯವಹರಿಸುವುದಕ್ಕೆ ಸಂವಹನ ಸಂಪರ್ಕವಾಗಿ ಬಳಸುವ ಮಾತೃಭಾಷೆಗೆ ಪವಿತ್ರ ಸ್ಥಾನಮಾನ ನೀಡಿದರೆ ಮಾತ್ರ ಭಾಷೆಗೆ ಗೌರವ ನೀಡಿ ಉಳಿಸಲು ಸಾಧ್ಯ ಎಂದು 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ನಿಜಲಿಂಗಪ್ಪ ಮೆಣಸಗಿ ಅಭಿಪ್ರಾಯಪಟ್ಟರು.
ಸಮ್ಮೇಳನದ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ಮಾನವೀಯತೆ ಮತ್ತು ವಾಸ್ತವಿಕತೆಯ ತಳಹದಿಯ ಮೇಲೆ ಸಾಹಿತ್ಯ ಬೆಳೆದು ಬಂದಾಗ ಮಾತ್ರ ಅದೊಂದುಉತ್ಕೃಷ್ಟ ಸಾಹಿತ್ಯವಾಗಲು ಸಾಧ್ಯ. ಒಂದು ಜನಾಂಗದ ಸಂಸ್ಕೃತಿಯ ಸಾಧನೆ ಅಲ್ಲಿನ ಸಾಹಿತ್ಯದ ಮೂಲಕ ಸ್ಪಷ್ಟವಾಗಿ ಗೋಚರಿಸುತ್ತದೆ.
ತಿರುಳ್ಗನ್ನಡ ನಾಡೆಂದು ಖ್ಯಾತವಾದ ಕೊಪ್ಪಳ ಜಿಲ್ಲೆಯ ಮಾನವ ಪರಂಪರೆಗೆ ಐದು ಸಾವಿರ ವರ್ಷದ ಇತಿಹಾಸವಿದೆ ಇಲ್ಲಿನ ಜನರಲ್ಲಿ ಸಹೋದರತೆ, ಸಮಾನತೆ, ಸಹಿಷ್ಣುತೆ ಹಾಸುಹೊಕ್ಕಾಗಿದೆ. ಸಾಹಿತ್ಯದೊಂದಿಗೆ ಭಾಷೆಯ ಬೆಳವಣಿಗೆಗೆ ಪರಸ್ಪರ ಕೈಜೋಡಿಸಿದರೆ ಮಾತ್ರ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.