ADVERTISEMENT

ಕಲ್ಲೂರು: ಸೇತುವೆ ನಿರ್ಮಾಣಕ್ಕೆ ಆಗ್ರಹ

ಉಮಾಶಂಕರ ಬ.ಹಿರೇಮಠ
Published 6 ಜೂನ್ 2011, 6:55 IST
Last Updated 6 ಜೂನ್ 2011, 6:55 IST

ಯಲಬುರ್ಗಾ: ತಾಲ್ಲೂಕಿನ ಕಲ್ಲೂರು ಗ್ರಾಮದ ಸಂಪರ್ಕಿಸುವ ರಸ್ತೆಮಧ್ಯದಲ್ಲಿನ ಎರಡು ಹಳ್ಳಗಳಿನ ಪರಸ್(ನೆಲ ಸೇತುವೆ)ಸಂಪೂರ್ಣ ಹಾಳಾಗಿ ವಾಹನಗಳ ಸಂಚಾರ ತೀರಾ ಅಸ್ತವ್ಯಸ್ತಗೊಂಡಿದ್ದರ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಶಾಶ್ವತ ಪರಿಹಾರ ಕಲ್ಪಿಸುವಂತೆ ಗ್ರಾಮಸ್ಥರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
 
ತಾಲ್ಲೂಕು ಕೇಂದ್ರ ಯಲಬುರ್ಗಾದಿಂದ ಕೇವಲ 7ಕಿ.ಮೀ ಅಂತರದಲ್ಲಿರುವ ಕಲ್ಲೂರು ಗ್ರಾಮದ ರಸ್ತೆ ತೀರಾ ಹದೆಗೆಟ್ಟಿದೆ. ಸಂಗನಾಳ ಕ್ರಾಸ್‌ದಿಂದ ಗ್ರಾಮಕ್ಕೆ ಇರುವ ಅಂತರ ಕೇವಲ 3ಕಿ.ಮೀ ಅಷ್ಟರಲ್ಲಿಯೇ ಎರಡು ಹಳ್ಳಗಳು ಎದುರಾಗುತ್ತವೆ ಆದರೆ ಅವುಗಳಿಗೆ ಯಾವುದೇ ರೀತಿಯ ಸೇತುವೆಗಳನ್ನು ನಿರ್ಮಿಸದೇ ಇರುವ ಕಾರಣ ಮಳೆ ಬಂದಾಗಲೆಲ್ಲಾ ಗ್ರಾಮದ ಜನರು ತೀವ್ರ ತೊಂದರೆಗೆ ಸಿಲುಕಬೇಕಾಗುತ್ತದೆ.

ಯಲಬುರ್ಗಾದಿಂದ ಕಲ್ಲೂರು ಗ್ರಾಮಕ್ಕೆ ಹೋಗುವಾಗ ಮೊದಲಿಗೆ ಬರುವ ಹಳ್ಳಕ್ಕೆ ಜೋಡಿಸಿದ ಕಲ್ಲುಗಳು ಸಂಪೂರ್ಣ ಕಿತ್ತುಹೋಗಿದ್ದರಿಂದ ವಾಹನಗಳು ಸಿಕ್ಕಿಕೊಳ್ಳುತ್ತಿವೆ. ಅಲ್ಲದೇ ಸ್ವಲ್ಪ ಮಳೆ ಬಂದರೂ ವಾಹನ ಮುಳುಗುವಷ್ಟು ಎತ್ತರದಲ್ಲಿ ನೀರು ಹರಿದುಬರುವುದರಿಂದ ವಾಹನಗಳ ಸಂಚಾರ ಸ್ಥಗಿತಗೊಳ್ಳುತ್ತದೆ.

ಇದರಿಂದ ರಾಜೂರು, ಸಂಗನಾಳ ಮಾರ್ಗವಾಗಿ ಯಲಬುರ್ಗಾ ಪಟ್ಟಣಕ್ಕೆ ಬರಬೇಕಾದ ಅನಿವಾರ್ಯತೆ ಗ್ರಾಮಸ್ಥರಿಗಿದೆ. ಹಾಗೆಯೇ ಕಲ್ಲೂರು ಗ್ರಾಮಕ್ಕೆ ಹೊಂದಿಕೊಂಡಿರುವ ಮತ್ತೊಂದು ಹಳ್ಳಕ್ಕೆ ನಿರ್ಮಿಸಿದ್ದ ಪರಸ್ ಕೂಡಾ ಮಳೆಗೆ ಕಿತ್ತು ಹೋಗಿದೆ. ಆಗಾಗ ನಿರ್ಮಿಸುತ್ತಲೇ ಇರುವ ಈ ಸೇತುವೆ ಕಾಮಗಾರಿಯು ಉತ್ತಮ ಗುಣಮಟ್ಟದಲ್ಲಿ ಆಗದೇ ಇರುವ ಕಾರಣ ಮಳೆಬಂದಾಗಲೆಲ್ಲ ಕಿತ್ತುಹೋಗುತ್ತಲೇ ಇರುತ್ತದೆ.

ಚುನಾವಣೆ ಸಂದರ್ಭದಲ್ಲಿ ಭರವಸೆ ಕೊಟ್ಟು ಆಯ್ಕೆಯಾದ ಕ್ಷೇತ್ರದ ಶಾಸಕ ಈಶಣ್ಣ ಗುಳಗಣ್ಣವರಾಗಲಿ, ಸಂಸದ ಶಿವರಾಮೆಗೌಡರಾಗಲಿ ಈ ಬಗ್ಗೆ ಕಾಳಜಿ ತೋರುತ್ತಿಲ್ಲ, ಜಿಪಂ ಸದಸ್ಯರು ಕೂಡಾ ಆಯ್ಕೆಯಾದ ಮೇಲೆ ಒಮ್ಮೆಯೂ ಗ್ರಾಮಕ್ಕೆ ಕಾಲಿಟ್ಟಿಲ್ಲ.  ಜಿಲ್ಲಾಧಿಕಾರಿ ಬೇಡಿಕೆಗಳನ್ನು ತ್ವರಿತಗತಿಯಲ್ಲಿ ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ.        

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.