ಕುಷ್ಟಗಿ: ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಹಿಟ್ನಾಳ ಅವರನ್ನು ಬೆಂಬಲಿಸುವಂತೆ ಸ್ಥಳೀಯ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ ಅವರ ಹೆಸರಿನಲ್ಲಿ ಕುರುಬ ಜನಾಂಗದವರಿಗೆ ಮನವಿ ಮಾಡಿರುವ ಫೇಸ್‌ಬುಕ್ ಸಂದೇಶ ತಾಲ್ಲೂಕು ಸೇರಿದಂತೆ ಜಿಲ್ಲೆಯಲ್ಲಿ ಸಂಚಲನ ಸೃಷ್ಟಿಸಿದೆ.
ಅಲ್ಲದೇ ಈ ಫೇಸ್‌ಬುಕ್ ಪುಟದಲ್ಲಿ ದೊಡ್ಡನಗೌಡ ಪಾಟೀಲರೊಂದಿಗೆ ಮಾಜಿ ಶಾಸಕ ಕಾಂಗ್ರೆಸ್‌ನ ಹಸನ್ಸಾಬ್ ದೋಟಿಹಾಳ ಅವರ ಚಿತ್ರವೂ ಸಹ ಇರುವುದು ಅಚ್ಚರಿ ಮೂಡಿಸಿದೆ. ಬಸವರಾಜ ಹಿಟ್ನಾಳ ಮತ್ತು ದೊಡ್ಡನಗೌಡ ಪಾಟೀಲ ಇಬ್ಬರೂ ಕುರುಬ ಜನಾಂಗಕ್ಕೆ ಸೇರಿರುವುದರಿಂದ ಚರ್ಚೆಗೆ ಗ್ರಾಸ ವಾಗಿದೆ. ಈ ಸಂದೇಶ ಮೊಬೈಲ್ಗಳ ಮೂಲಕವೂ ಹರಿದಾಡುತ್ತಿರುವುದು ಶಾಸಕ ಪಾಟೀಲರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಇದನ್ನು ಅಲ್ಲಗಳೆದ ಶಾಸಕ ದೊಡ್ಡನಗೌಡ, ಫೇಸ್‌ಬುಕ್ ಸಂದೇಶಕ್ಕೂ ನನಗೂ ಸಂಬಂಧವಿಲ್ಲ. ಇದೊಂದು ವ್ಯವಸ್ಥಿತ ಪಿತೂರಿಯಾಗಿದೆ. ಚುನಾವಣೆ ಸಂದರ್ಭದಲ್ಲಿ ಸಾಮಾಜಿಕ ಜಾಲ ತಾಣವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದ್ದು, ಕುರುಬ ಸಮಾಜ ಮತ್ತು ಬಿಜೆಪಿ ಬೆಂಬಲಿಗರನ್ನು ದಾರಿತಪ್ಪಿಸುವ ತಂತ್ರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೇ ಈ ಫೇಸ್‌ಬುಕ್ ಖಾತೆ ನಕಲಿಯಾಗಿದ್ದು ಅದನ್ನು ಸೃಷ್ಟಿಸಿದವರ ವಿರುದ್ಧ ಕ್ರಮ ಜರುಗಿಸುವಂತೆ ಕೋರಿ ಇಲ್ಲಿಯ ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್ ಮೂಲಕ ಸೈಬರ್ ಕ್ರೈಂ ವಿಭಾಗಕ್ಕೆ ದೂರು ಸಲ್ಲಿಸಿರುವುದಾಗಿ ಪಾಟೀಲ ತಿಳಿಸಿದರು.
ಸಾಮಾಜಿಕ ಜಾಲತಾಣದ ಮೂಲಕ ಈ ರೀತಿ ವದಂತಿ ಹಬ್ಬಿಸಿರುವುದರಿಂದ ನಾನು ಮುಜುಗರ ಅನುಭವಿಸುವಂತಾಗಿದೆ. ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ. ಹಾಗಾಗಿ ನಕಲಿ ಫೇಸ್‌ಬುಕ್‌ನ ವದಂತಿಗೆ ಕಿವಿಗೊಡಬಾರದು ಎಂದು ಜನರಲ್ಲಿ ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ನಾನು ಬಿಜೆಪಿಗೆ ನಿಷ್ಠನಾಗಿದ್ದು, ಪಕ್ಷಕ್ಕೆ ಎಂದೂ ದ್ರೋಹ ಬಗೆಯುವುದಿಲ್ಲ. ಆದರೂ ನನ್ನ ಹೆಸರಿಗೆ ಮಸಿ ಬಳಿಯುವ ಕುತಂತ್ರ ನಡೆಯುತ್ತಿದೆ. ಈ ಕೃತ್ಯದಲ್ಲಿ ಯಾರ ಕೈವಾಡ ಇದೆ ಎಂಬುದು ತನಿಖೆ ನಂತರ ತಿಳಿದುಬರಲಿದೆ ಎಂದರು.
ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಶಶಿಧರ ಕವಲಿ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.