ADVERTISEMENT

ಕಾಟಾಪುರಕ್ಕೆ ಸಮಸ್ಯೆಗಳ ಕಾಟ...

​ಪ್ರಜಾವಾಣಿ ವಾರ್ತೆ
Published 11 ಜನವರಿ 2012, 9:40 IST
Last Updated 11 ಜನವರಿ 2012, 9:40 IST

ಕನಕಗಿರಿ: ಈ ಗ್ರಾಮದಲ್ಲಿ ಎಲ್ಲಿ ನೋಡಿದರೂ ಗಲೀಜು, ಸ್ವಾತಂತ್ರ್ಯ ಪಡೆದು ಆರು ದಶಕಗಳು ಉರುಳಿದರೂ `ಕಾಟಾಪುರ~ ಸಮಸ್ಯೆಗಳಿಂದ ಮುಕ್ತಿ ಕಂಡಿಲ್ಲ ಎಂದು ಅಲ್ಲಿನ ನಿವಾಸಿಗಳು ದೂರುತ್ತಾರೆ.

ಹಿರೇಖ್ಯಾಡ ಗ್ರಾಮ ಪಂಚಾಯಿತಿ, ಹುಲಿಹೈದರ ಜಿಪಂ ವ್ಯಾಪ್ತಿಯಲ್ಲಿ ಬರುವ ಕೆ. ಕಾಟಾಪುರದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ನಾಯಕ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಉಳಿದವರು ಹಿಂದುಳಿದ ವರ್ಗದವರು. ಗ್ರಾಮ ಕೂಡ ಅಭಿವೃದ್ಧಿಯಲ್ಲಿ ತೀರ ಹಿಂದುಳಿದಿರುವುದು ಭಾನುವಾರ ಭೇಟಿ ನೀಡಿದ `ಪ್ರಜಾವಾಣಿ~ಗೆ ಕಂಡು ಬಂತು.

ಹರಿಜನ ಕಾಲೋನಿಯಲ್ಲಿರುವ ಎರಡು ನೀರಿನ ತೊಟ್ಟಿಗಳಲ್ಲಿ ಒಂದು ನಿರುಪಯುಕ್ತ, ಮತ್ತೊಂದರಲ್ಲಿ ಗಲೀಜು ತುಂಬಿ ಕೊಂಡಿದೆ, ಗ್ರಾಪಂ ಸಿಬ್ಬಂದಿ ಅದನ್ನು ಸ್ವಚ್ಛ ಮಾಡಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.

ಪಕ್ಕದಲ್ಲಿರುವ ಚರಂಡಿ ತುಂಬಿ ಹೋಗಿದ್ದರೂ ಕೇಳುವವರು ಇಲ್ಲವಾಗಿದೆ, ಗೊಲ್ಲರ ಓಣಿಯಿಂದ ಹಾಯ್ದು ಬಂದಿರುವ ಅರ್ಧಕ್ಕೆ ನಿಂತಿರುವ ಇನ್ನೊಂದು ಚರಂಡಿಯ ಗಲೀಜು ನೀರು ರಸ್ತೆಯಲ್ಲಿ ನಿಂತಿವೆ, ಅಲ್ಲಿಯೆ ತಿಪ್ಪೆಗುಂಡಿಗಳ ರಾಶಿ ಇದೆ, ಗಬ್ಬುನಾತ ಸ್ವೀಕರಿಸುತ್ತಾ ಬದುಕು ಸಾಗಿಸುತ್ತಿದ್ದೇವೆ ಎಂದು ಅಲ್ಲಿನ ನಿವಾಸಿ ಸರಸ್ವತಿ ಬಡಿಗೇರ ಜನಪ್ರತಿನಿಧಿಗಳಿಗೆ ಛೀಮಾರಿ ಹಾಕುತ್ತಾ ತಿಳಿಸಿದರು.

ಗೊಲ್ಲರ ಓಣಿಯಲ್ಲಿರುವ ನೀರಿನ ಟ್ಯಾಂಕ್ ನಿರುಪಯುಕ್ತ, ಚರಂಡಿಗೆ ಹಾಸು ಬಂಡೆ ಹಾಕದ ಕಾರಣ ಓಡಾಟಕ್ಕೆ ತೊಂದರೆಯಾಗಿದೆ ಎಂದು ಈಚೆಗೆ ಚರಂಡಿಯಲ್ಲಿ ಬಿದ್ದು ಗಾಯ ಮಾಡಿಕೊಂಡಿರುವ ಮಾಳಮ್ಮ ಹನುಮಂತಪ್ಪ ಗೊಲ್ಲರ ತಿಳಿಸುತ್ತಾರೆ.

ರಸ್ತೆಗಳೆ ಶೌಚಾಲಯ: ಮಲ್ಲಿಗೆವಾಡ ರಸ್ತೆಯಲ್ಲಿ ನಿರ್ಮಿಸಿರುವ ಶೌಚಾಲಯ ಉಪಯೋಗಕ್ಕೆ ಬಾರದಾಗಿದೆ, ಜಾಲಿ ಗಿಡ-ಗಂಟೆಗಳ ಮಧ್ಯೆ ಶೌಚಾಲಯ ಇದ್ದು ನೀರು ಪೊರೈಕೆ ಇಲ್ಲ, ಈ ಪರಿಸರದಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದ ಪರಿಣಾಮ ಅದು ಬಳಕೆಯಾಗುತ್ತಿಲ್ಲ ಹೀಗಾಗಿ ಊರಿನ ನಾಲ್ಕು ದಿಕ್ಕುಗಳಲ್ಲಿರುವ ರಸ್ತೆಗಳೆ ಇಲ್ಲಿ ಶೌಚಾಲಯಗಳಾಗಿವೆ ಎಂದು ಜನ ನೋವಿನಿಂದ ಹೇಳುತ್ತಾರೆ.

ಕಾಟಾಪುರದಿಂದ-ಕಲಕೇರಿ, ಮಲ್ಲಿಗೆವಾಡ, ಕನಕಗಿರಿ ಗ್ರಾಮಕ್ಕೆ ತೆರಳುವ ರಸ್ತೆಗಳು ಇಲ್ಲಿ ವರೆಗೂ ಡಾಂಬರೀಕರಣ ಕಂಡಿಲ್ಲ, ಸುತ್ತಲಿನ ಸ್ಥಳದಲ್ಲಿ ಜಾಲಿ ಗಿಡಗಳು ಬೆಳೆದು ನಿಂತು ಪಾದಚಾರಿ, ದ್ವಿಚಕ್ರ ವಾಹನ ಸವಾರರ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಗ್ರಾಮದ ಮಂಜುನಾಥ, ಪಂಪಾಪತಿ ಪಚ್ಚೇರ ದೂರಿದರು.

ಗುಳೆಯತ್ತ ಜನ: ಈ ಗ್ರಾಮದಲ್ಲಿ ಬಹುತೇಕರು ಉದ್ಯೋಗ ಇಲ್ಲದೆ ಯಾದಗಿರಿ ಜಿಲ್ಲೆಯ ಸುರಪುರ, ಇತರೆ ಮಾಗಣಿ ಪ್ರದೇಶಕ್ಕೆ ಗುಳೆ ಹೋಗುತ್ತಾರೆ, `ಉದ್ಯೋಗ ಖಾತರಿ~ ಕಾರ್ಯಕ್ರಮ ಮರೀಚಿಕೆ ಎಂದು ಜನ ಹೇಳುತ್ತಾರೆ.

ಓಟಿಗೆ ಮಾತ್ರ ಶಾಸಕ: ವಿಧಾನಸಭಾ ಚುನಾವಣೆಯಲ್ಲಿ ಓಟು ಕೇಳಲು ಬಂದು ನಂತರ ಶಾಸಕ, ಸಚಿವರಾಗಿ ಆಯ್ಕೆಯಾದ ಶಿವರಾಜ ತಂಗಡಗಿ ಈ ಗ್ರಾಮದತ್ತ ಒಮ್ಮೆಯೂ ಮುಖ ತಿರುಗಿಸಿಲ್ಲ ಎಂದು ಜನತೆ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಅಪೂರ್ಣಗೊಂಡಿರುವ ಬಸ್ ನಿಲ್ದಾಣ, ಅಗಸಿಕಟ್ಟಿ, ಮಹಿಳಾ ಸ್ವ ಸಂಘದ ಕಟ್ಟಡ ಕಾಮಗಾರಿ ಸೇರಿ ಇತರೆ ಕೆಲಸಗಳಿಗೆ ಶಾಸಕ ನಯಾಪೈಸೆ ಹಣ ನೀಡಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.

ಅಧ್ಯಕ್ಷರ ತಿರುಗಾಟ: ಗ್ರಾಪಂ ಅಧ್ಯಕ್ಷ ಕೆ. ವಿರೂಪಾಕ್ಷಿ ಗ್ರಾಮದ ಸಮಸ್ಯೆಗಳಿಗೆ ಪರಿಹಾರ ನೀಡುವ ಬದಲು ಶಾಸಕ, ಜಿಪಂ ಸದಸ್ಯರ ಹಿಂದೆ ತಿರುಗುತ್ತಾರೆ, ಕನಕಗಿರಿ ಮತ್ತು ಗಂಗಾವತಿಯನ್ನು ಗ್ರಾಪಂ ಕಾರ್ಯಾಲಯ ಮಾಡಿಕೊಂಡಿರುವ ಅವರು ಕನಕಗಿರಿಯಲ್ಲಿ ವಾಸಿಸುತ್ತಾರೆ, ಗ್ರಾಮಕ್ಕೆ ಭೇಟಿ ನೀಡುವುದು ಅಪರೂಪ ಎಂದು ಜನ ಆರೋಪಿಸುತ್ತಾರೆ. ಗ್ರಾಮಕ್ಕೆ ಒಂದು ಆಶ್ರಯ ಮನೆ ಮಂಜೂರಾಗಿಲ್ಲ ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ ಎಂದು ಮಂಜುನಾಥ ನಾಯಕ ಆರೋಪಿಸುತ್ತಾರೆ.

ಶಾಲೆ, ಅಂಗನವಾಡಿ ಕೇಂದ್ರದ ಪರಿಸರದಲ್ಲಿರುವ ಬೋರವೆಲ್ ಮುಂದಿನ ಗಲೀಜು ನೋಡಿದರೆ ಸಾಂಕ್ರಮಿಕ ರೋಗಗಳು ಹರಡುವ ಸಾಧ್ಯತೆ ಇದೆ ಎಂದು ಜನತೆ ಆತಂಕ ವ್ಯಕ್ತಪಡಿಸುತ್ತಾರೆ.
- ಮೆಹಬೂಬ ಹುಸೇನ ಕನಕಗಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.