ADVERTISEMENT

ಕಾನೂನು ಅರಿವು ಶೋಷಣೆ ವಿರುದ್ಧ ಅಸ್ತ್ರ

​ಪ್ರಜಾವಾಣಿ ವಾರ್ತೆ
Published 9 ಜನವರಿ 2011, 11:10 IST
Last Updated 9 ಜನವರಿ 2011, 11:10 IST

ಕೊಪ್ಪಳ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಶನಿವಾರ ಸರಸ್ವತಿ ವಿದ್ಯಾಮಂದಿರ ಶಾಲೆಯಲ್ಲಿ ಮಹಿಳೆ ಮತ್ತು ಮಕ್ಕಳ ರಕ್ಷಣೆ ಹಾಗೂ ಹಕ್ಕುಗಳ ಬಗ್ಗೆ ಕಾನೂನು ತಿಳಿವಳಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರೂ ಆಗಿರುವ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಮಾಳಗಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕಾನೂನಿನ ಅರಿವಿನಿಂದ ಶೋಷಣೆ ವಿರುದ್ಧ ಹೋರಾಡಲು ದೊಡ್ಡ ಅಸ್ತ್ರ ಎಂದು ಹೇಳಿದರು.

ವಿದ್ಯಾರ್ಥಿ ಜೀವನದಲ್ಲಿಯೇ ಉತ್ತಮ ನಡವಳಿಕೆ ಅಳವಡಿಸಿಕೊಂಡರೆ ಮುಂದೆ ಜವಾಬ್ದಾರಿ ಇರುವ ನಾಗರಿಕರಾಗುವ ಜೊತೆಗೆ ಕಾನೂನು ಬಾಹಿರ ಕೆಲಸಗಳನ್ನು ಮಾಡುವುದರಿಂದ ದೂರ ಇರುತ್ತೀರಿ ಎಂದು ಅವರು ಕಿವಿಮಾತು ಹೇಳಿದರು.ನಮ್ಮ ಹಕ್ಕುಗಳು ಏನು ಹಾಗೂ ಕರ್ತವ್ಯಗಳು ಯಾವುವು ಎಂಬುದನ್ನು ತಿಳಿದು, ಸಂವಿಧಾನದ ಚೌಕಟ್ಟಿನಲ್ಲಿಯೇ ಬದುಕಬೇಕು ಎಂದು 1ನೇ ತ್ವರಿತ ನ್ಯಾಯಾಲಯದ ನ್ಯಾಯಾಧೀಶ ಬಿ.ಸಿ.ಬಿರಾದಾರ ಹೇಳಿದರು.

ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಸ ಶಿವರಾಮ ಕೆ., ಜೆ.ಎಂ.ಎಫ್.ಸಿ ನ್ಯಾಯಾಧೀಶ ಲಕ್ಷ್ಮೀನಾರಾಯಣ ಭಟ್, ಪೊಲೀಸ್ ತರಬೇತಿದಾರ ಜಿ.ಎಸ್.ಸೋಮಶೇಖರ್, ಬಾಲ ನ್ಯಾಯ ಮಂಡಳಿ ಸದಸ್ಯೆ ಸಾವಿತ್ರಿ ಮುಜುಂದಾರ ಹಾಗೂ ಶಾಲಾ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಆರ್.ಎಚ್.ಅತ್ತನೂರು ಮಾತನಾಡಿದರು.ಪ್ಯಾಟಿ ಈಶ್ವರ ದೇವಸ್ಥಾನದ ಅಧ್ಯಕ್ಷ ಪತ್ರೆಪ್ಪ ಪಲ್ಲೇದ ಅಧ್ಯಕ್ಷತೆ ವಹಿಸಿದ್ದರು. ರೇಣುಕಾ ಅತ್ತನೂರು, ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮೇಘನಾ ಹಾಗೂ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ಕೊಟ್ರಯ್ಯ ಗುಡ್ಲಾನೂರ ಸ್ವಾಗತಿಸಿದರು. ಎಸ್.ಲಕ್ಷ್ಮಣ ನಿರೂಪಣೆ ಹಾಗೂ ಪರಶುರಾಮ ಬೆಳವಿನಾಳ ವಂದನಾರ್ಪಣೆ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.