ADVERTISEMENT

ಕುಂದು-ಕೊರತೆ ನೀಗಿಸಲು ಶ್ರಮಿಸುವೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 8:40 IST
Last Updated 11 ಅಕ್ಟೋಬರ್ 2011, 8:40 IST

ಕೊಪ್ಪಳ: ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನನಗೆ ಮತ ಚಲಾಯಿಸಿ, ಅಧಿಕ ಮತಗಳಿಂದ ಜಯಾಶಾಲಿಯಾಗುಂತೆ ಮಾಡಿರುವ ಕ್ಷೇತ್ರದ ಮತದಾರರ ಬೇಡಿಕೆಗಳನ್ನು ಈಡೇರಿಸಲು, ಕುಂದು-ಕೊರತೆಗಳನ್ನು ನೀಗಿಸಲು ಶ್ರಮಿಸುವುದಾಗಿ ಶಾಸಕ ಸಂಗಣ್ಣ ಕರಡಿ ಹೇಳಿದರು.

ಅವರು ತಾಲ್ಲೂಕಿನ ಓಜನಹಳ್ಳಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮತದಾರರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಿಜೆಪಿ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಉಪಚುನಾವಣೆಯಲ್ಲಿ ನನಗೆ ಆಶೀರ್ವಾದ ಮಾಡಿದ್ದೀರಿ. ಹೀಗಾಗಿ ಆ ಋಣವನ್ನು ತೀರಿಸಲು ನಾನು ಬದ್ಧ ಎಂದು ಹೇಳಿದರು.

ಗ್ರಾಮದಲ್ಲಿ 74 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವ ಸಿ.ಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಅಲ್ಲದೇ ಮುಜರಾಯಿ ಇಲಾಖೆಯಿಂದ ವಿವಿಧ ದೇವಸ್ಥಾನಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಸಮುದಾಯ ಭವನ ಸಹ ಮಂಜೂರು ಮಾಡಲಾಗಿದೆ ಎಂದು ಹೇಳಿದರು.

ತಾಲ್ಲೂಕಿನಲ್ಲಿ ಈಗಾಗಲೇ ಹಲವಾರು ಕಾಮಗಾರಿಗಳು ಪ್ರಗತಿಯಲ್ಲಿದ್ದು, ಆದ್ಯತೆ ಮೇರೆಗೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.

ಮರಳಿ ಕ್ಷೇತ್ರದ ಶಿವಯೋಗಿ ಶ್ರೀಗಳು ಸಾನಿಧ್ಯ ವಹಿಸಿದ್ದರು. ಕಾಡಾ ಮಾಜಿ ಅಧ್ಯಕ್ಷ ಅಂದಪ್ಪ ಅಗಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪ್ರಸನ್ನ ಗಡಾದ, ಗುತ್ತಿಗೆದಾರ ಎಸ್.ಆರ್.ನವಲಿಹಿರೇಮಠ, ಬಿಜೆಪಿ ಮುಖಂಡರಾದ ಅಪ್ಪಣ್ಣ ಪದಕಿ, ಮಹೇಂದ್ರ ಛೋಪ್ರಾ, ಡಿ.ಮಲ್ಲಣ್ಣ, ದೇವಪ್ಪ ಕುಟಗನಳ್ಳಿ, ಶ್ರೀನಿವಾಸ್ ಹ್ಯಾಟಿ, ರಮೇಶ ಚೌಡ್ಕಿ, ಗುರುಬಸವ ಹೊಳಗುಂದಿ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.