ADVERTISEMENT

ಕುಕನೂರು: ಸಾಂಕೇತಿಕ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 7:35 IST
Last Updated 7 ಅಕ್ಟೋಬರ್ 2012, 7:35 IST

ಕುಕನೂರು: ಕಾವೇರಿ ಜಲವಿವಾದ ಕುರಿತು ಕನ್ನಡ ಪರ ಸಂಘಟನೆಗಳು ಕರೆ ನೀಡಿದ ಕರ್ನಾಟಕ ಬಂದ್‌ಗೆ ಬೆಂಬಲಿಸಿ ತಾಲ್ಲೂಕು ಕನ್ನಡ ಸೇನೆ ಹಾಗೂ ಕರವೇ ಕಾರ್ಯಕರ್ತರು ಶನಿವಾರ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಇಲ್ಲಿಯ ಶಿರೂರ ವೀರಭದ್ರಪ್ಪ ವರ್ತುಳದಲ್ಲಿ ಜಮಾಗೊಂಡ ಕನ್ನಡ ಸೇನೆ ಹಾಗೂ ಕರವೇ ಕಾರ್ಯಕರ್ತರು ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಹಾಗೂ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಿದ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಪ್ರಧಾನಿ ಹಾಗೂ ಮುಖ್ಯಮಂತ್ರಿಗಳು ತಕ್ಷಣವೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಬಿ.ಜೆ.ಪಿ ಯುವ ಮುಖಂಡ ನವೀನಕುಮಾರ ಗುಳಗಣ್ಣವರ, ವೀರಯ್ಯ ದೇವಗಣಮಠ ಹಾಗೂ ಮಂಜುನಾಥ ನಾಡಗೌಡ್ರ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿ, ಕಾವೇರಿ ನೀರಿಗಾಗಿ ತಮಿಳುನಾಡು ಪದೇ ಪದೇ ತಗಾದೆ ತೆಗೆಯುತ್ತಿದೆ. ಕರ್ನಾಟಕದಲ್ಲಿ ಇದುವರೆಗೂ ಆಡಳಿತ ನಡೆಸಿದ ರಾಜ್ಯ ಸರ್ಕಾರಗಳು ಕಾವೇರಿ ಜಲವಿವಾದವನ್ನು ಇತ್ಯರ್ಥಗೊಳಿಸುವಲ್ಲಿ ಸಂಪೂರ್ಣ ವಿಫಲವಾಗಿವೆ. ಅಷ್ಟಾಗಿಯೂ ಜಲಾಶಯದಲ್ಲಿದ್ದ ನೀರನ್ನು ತಮಿಳುನಾಡಿಗೆ ಹರಿಸುವ ಮೂಲಕ ರಾಜ್ಯದ ಜನತೆಗೆ ಮೋಸ ಮಾಡಿದ್ದಾರೆ.
 
ರಾಜಕೀಯ ಪಕ್ಷಗಳು ರಾಜ್ಯದ ಒಳಿತಿಗಾಗಿ ಶ್ರಮಿಸದೇ ಒಬ್ಬರ ಮೇಲೆ ಒಬ್ಬರು ಗೂಬೆ ಕೂರಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಸಮಗ್ರ ಕರ್ನಾಟಕ ನಮ್ಮದು ಎನ್ನುವುದು ನಮ್ಮ ಭಾವನೆ, ಆದರೆ ಮೈಸೂರು ಕರ್ನಾಟಕದ ಜನರು ಉತ್ತರ ಕರ್ನಾಟಕ ಕೃಷ್ಣಾ ಬಿ ಸ್ಕೀಂ, ಹೈದ್ರಾಬಾದ್ ಕರ್ನಾಟಕದ 371ನೇ ವಿಧಿ ಜಾರಿ, ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದ ಯಾವುದೇ ಹೋರಾಟಕ್ಕೆ ಬೆಂಬಲ ನೀಡದೇ ಇರುವುದು ಖೇದದ ಸಂಗತಿ. ಇನ್ನು ಮುಂದಾದರೂ ಎಲ್ಲ ರಾಜಕೀಯ ಪಕ್ಷಗಳು ಹಾಗೂ ಎಲ್ಲ ಭಾಗದ ಜನರು ಪಕ್ಷಭೇದ ಸಮಗ್ರ ಕರ್ನಾಟಕದ ಒಳಿತಿಗಾಗಿ ಶಪಥ ಮಾಡಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಲವಿವಾದ ಕುರಿತು ಕೂಡಲೇ ಮಧ್ಯೆಸ್ತಿಕೆ ವಹಿಸಬೇಕೆಂದು ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ಉಪತಹಸೀಲ್ದಾರರಿಗೆ ಇದೇ ಸಂದರ್ಭದಲ್ಲಿ ಸಲ್ಲಿಸಲಾಯಿತು.

ಕನ್ನಡ ಸೇನೆ ತಾಲ್ಲೂಕು ಅಧ್ಯಕ್ಷ ಅಮರೇಶ ಪಲ್ಲೇದ, ಕರವೇ ತಾಲ್ಲೂಕು ಉಪಾಧ್ಯಕ್ಷ ಶರಣಯ್ಯ ಬಂಡಿ, ರುದ್ರಯ್ಯ ವಿರುಪಣ್ಣವರ, ಅಲ್ಲಾಭಕ್ಷಿ ಕಲ್ಲೂರ, ಮಹೇಶ ಡೊಳ್ಳಿನ, ರಮೇಶ ಗಜಾಕೋಶ, ಕಳಕಪ್ಪ ಕುಂಬಾರ, ವಿಜಯರೆಡ್ಡಿ ಬೀಡನಾಳ, ಪ್ರಕಾಶ ಕಲಾಲ, ರಾಜಾಸಾಬ ಕಲ್ಲೂರ, ನಾಗರಾಜ ವಾಲಿಕಾರ, ಅಬ್ದುಲ್‌ರಜಾಕ್ ಖಾಜಪ್ಪನವರ, ಮರ್ತುಜಾಸಾಬ ಹಣಜಗೇರಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪೊಲೀಸ್ ಇಲಾಖೆ ಸೂಕ್ತ ಭದ್ರತೆ ಒದಗಿಸಿತ್ತು. ಸಾರಿಗೆ ಸಂಸ್ಥೆಯ ಬಸ್ ಸಂಚಾರ ಸ್ಥಗಿತಗೊಳಿಸಿದ್ದನ್ನು ಹೊರತು ಪಡಿಸಿ ಶಾಲಾ-ಕಾಲೇಜುಗಳು, ಅಂಗಡಿ-ಮುಂಗಟ್ಟುಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.