ADVERTISEMENT

ಕುಷ್ಟಗಿಯಲ್ಲಿ ಸರ್ಕಾರಿ `ಮತದಾನ'

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 10:25 IST
Last Updated 24 ಏಪ್ರಿಲ್ 2013, 10:25 IST
ಕುಷ್ಟಗಿಯ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ತೆರೆಯಲಾಗಿದ್ದ ತಾತ್ಕಾಲಿಕ ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನೇಮಕಗೊಂಡ ನೌಕರರು ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಮತ ಚಲಾಯಿಸಿದರು
ಕುಷ್ಟಗಿಯ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ತೆರೆಯಲಾಗಿದ್ದ ತಾತ್ಕಾಲಿಕ ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನೇಮಕಗೊಂಡ ನೌಕರರು ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಮತ ಚಲಾಯಿಸಿದರು   

ಕುಷ್ಟಗಿ: ಚುನಾವಣಾ ಕರ್ತವ್ಯಕ್ಕೆ ನೇಮಕಗೊಂಡು ಬೇರೆ ಕ್ಷೇತ್ರಗಳಿಗೆ ತೆರಳಲಿರುವ ಈ ವಿಧಾನಸಭಾ ಕ್ಷೇತ್ರದ ಸರ್ಕಾರಿ ಸಿಬ್ಬಂದಿ ಚುನಾವಣೆಗೆ ಮೊದಲೇ ಮತದಾನ ಮಾಡಿದ ಅಪರೂಪದ ದೃಶ್ಯ ಮಂಗಳವಾರ ಇಲ್ಲಿಯ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ಕಂಡುಬಂದಿತು.

ಈ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು ಬಳಸಲಾಗುತ್ತಿದ್ದರೂ ನೌಕರ ಮತದಾರರಿಗೆ ಮಾತ್ರ ಕ್ಷೇತ್ರದ ಅಭ್ಯರ್ಥಿಗಳ ಮುದ್ರಿತ ಮತಪತ್ರಗಳನ್ನು ನೀಡಿದ್ದು ವಿಶೇಷವಾಗಿತ್ತು. 125 ನೌಕರರು ಸಾಲುಗಟ್ಟಿ ನಿಂತು ಮುಚ್ಚಿದ ಲಕೋಟೆಯೊಳಗೆ ಭದ್ರಪಡಿಸಿದ ಮತಪತ್ರವನ್ನು ಅಲ್ಲಿಯೇ ಸೀಲ್ ಮಾಡಿ ಇಡಲಾಗಿದ್ದ ಪೆಟ್ಟಿಗೆಯಲ್ಲಿ ಹಾಕಿದರು.

ಕರ್ತವ್ಯ ನಿರತ ಸಿಬ್ಬಂದಿಗೆ ಇ.ಡಿ.ಸಿ ಸೌಲಭ್ಯ ಪ್ರತಿ ಚುನಾವಣೆಯಲ್ಲಿಯೂ ಇರುತ್ತದೆ, ಆದರೆ ಅದಕ್ಕಾಗಿ 12ನೇ ನಮೂನೆ ಅರ್ಜಿ ಪಡೆಯುವುದು, ಬ್ಯಾಲೆಟ್ ಪೇಪರ್ ಪಡೆದು ಅದನ್ನು ಕವರ್‌ನಲ್ಲಿಟ್ಟು ಅಂಚೆ ಮೂಲಕ ಕಳಿಸಬೇಕು. ಆದರೆ ಇಲ್ಲದ ರಗಳೆ ನಮಗ್ಯಾಕೆ ಎಂಬ ಉದಾಸೀನ ಭಾವನೆಯುಳ್ಳ ನೌಕರರು ಇ.ಡಿ.ಸಿ ಸೌಲಭ್ಯ ಬಳಸಿಕೊಳ್ಳದ ಕಾರಣ ಪ್ರತಿಬಾರಿಯೂ ನೂರಾರು ನೌಕರರು ಮತದಾನ ವಂಚಿತರಾಗುವುದು ಸಾಮಾನ್ಯವಾಗಿತ್ತು.

ಮತದಾನದ ಪ್ರಮಾಣ ಹೆಚ್ಚಿಸುವುದಕ್ಕೆ ಅನೇಕ ಸುಧಾರಣೆ ಕ್ರಮಗಳನ್ನು ಅನುಸರಿಸಿರುವ ಚುನಾವಣಾ ಆಯೋಗ ತರಬೇತಿ ಪಡೆಯಲು ಬರುವ ಸಿಬ್ಬಂದಿಗೆ ಸ್ಥಳದಲ್ಲೇ ಮತದಾನ ಮಾಡುವುದಕ್ಕೆ ಅವಕಾಶ ಕಲ್ಪಿಸುವ ಹೊಸ ವ್ಯವಸ್ಥೆಗೆ ನೌಕರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಎಲ್ಲ ಚುನಾವಣೆಗಳಲ್ಲೂ ಕರ್ತವ್ಯಕ್ಕೆ ನೇಮಕಗೊಳ್ಳುತ್ತ ಬಂದ್ದೇವೆ, ಆದರೆ ಮತದಾನ ಮಾಡಿ ಎಷ್ಟೋ ವರ್ಷಗಳಾಗಿದ್ದವು ಎಂದು ಅನೇಕ ನೌಕರರು ಹರ್ಷ ವ್ಯಕ್ತಪಡಿಸಿದರು. ಸಿಬ್ಬಂದಿ ಕರೆದೊಯ್ಯಲು ಬರುವ ನಮ್ಮ ಬಸ್‌ಗಳ ಚಾಲಕರು ಮತದಾನ ವಂಚಿತರಾಗುತ್ತಿದ್ದರು ಸರ್ಕಾರದ ಈ ವ್ಯವಸ್ಥೆಯಿಂದ ಅನುಕೂಲವಾಯಿತು ಎಂದು ಸಾರಿಗೆ ಇಲಾಖೆ ಕಂಟ್ರೋಲರ್ ಕಾಸೀಮ್‌ಸಾಬ್ ಕಾಯಿಗಡ್ಡಿ ಹೇಳಿದರೆ, ಚುನಾವಣಾ ಆಯೋಗದ ವಿನೂತನ ಮಾದರಿಗೆ ಶಿಕ್ಷಕ ಕುಮಾರಸ್ವಾಮಿ ಹಿರೇಮಠ ಮೆಚ್ಚುಗೆ ವ್ಯಕ್ತಪಡಿಸಿದರು. ಮತದಾನ ಮಾಡಿದವರಲ್ಲಿ ನಾವೇ ಮೊದಲಿಗರಾಗಿರುವುದು ಸಂತಸ ತಂದಿದೆ ಎಂದು ಅನೇಕ ಶಿಕ್ಷಕಿಯರು ಹೇಳಿದರು.

ಮತದಾನ ಪ್ರಕ್ರಿಯೆ ಸಂದರ್ಭದಲ್ಲಿ ಕೇಂದ್ರದ ವೀಕ್ಷಕ ಎ.ಎಸ್.ಕೆ.ಸಿನ್ಹಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಚುನಾವಣಾಧಿಕಾರಿ ಎಂ.ಸುಜ್ಞಾನಮೂರ್ತಿ, ಉಪ ಚುನಾವಣಾಧಿಕಾರಿ ವೀರೇಶ ಬಿರಾದಾರ ಹಾಜರಿದ್ದರು.
ಶಾಸಕರ ಗೊಣಗಾಟ: ಮತದಾನ ನಡೆಯುವ ಜ್ಯೂನಿಯರ್ ಕಾಲೇಜಿಗೆ ದಿಢಿರನೆ ಆಗಮಿಸಿದ ಶಾಸಕ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಮರೇಗೌಡ ಬಯ್ಯಾಪುರ, `ಇದು ನಮಗೆ ಗೊತ್ತೇ ಇಲ್ಲವಲ್ಲ' ಎಂದು ಗೊಣಗಿದರು. ಮತದಾನ ವೀಕ್ಷಿಸಿ ನಂತರ ಕೇಂದ್ರ ವೀಕ್ಷಕ ಸಿನ್ಹಾ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.