ADVERTISEMENT

ಕುಷ್ಟಗಿ: ತಾ.ಪಂ ಕಚೇರಿಗೆ ಹೈಟೆಕ್ ಸ್ಪರ್ಶ

ಸಭಾಂಗಣಕ್ಕೆ ಧ್ವನಿಮುದ್ರಣ ಯಂತ್ರ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2013, 11:19 IST
Last Updated 21 ಜೂನ್ 2013, 11:19 IST

ಕುಷ್ಟಗಿ: ಹಿಂದಿನಂತೆ ಈ ಬಾರಿ ತಾಲ್ಲೂಕು ಪಂಚಾಯಿತಿ ಸದಸ್ಯರು ಮನಸ್ಸಿಗೆ ತೋಚಿದಂತೆ ಅಧಿಕಾರಿಗಳನ್ನು ಅಸಂವಿಧಾನಿಕ ಪದಗಳಿಂದ ನಿಂದಿಸುವುದು, ಅಧಿಕಾರಿಗಳು ಸಭೆಗೆ ತಪ್ಪು ಮಾಹಿತಿ ನೀಡಿ ಸಭೆ ದಾರಿತಪ್ಪಿಸುವುದಕ್ಕೆ ಯತ್ನಿಸಿದರೆ ಪೇಚಿಗೆ ಸಿಲುಕುವುದು ಖಾತರಿ.

ಕಾರಣ ಇಷ್ಟೆ, ಇದೇ ಮೊದಲ ಬಾರಿಗೆ ತಾಲ್ಲೂಕು ಪಂಚಾಯಿತಿಯ ಮುಖ್ಯ ಸಭಾಂಗಣದಲ್ಲಿ ಸ್ವಯಂ ಚಾಲಿತ ಧ್ವನಿಮುದ್ರಣಯಂತ್ರವನ್ನು ಅಳವಡಿಸಿರುವುದು.

ಇನ್ನು ಮುಂದೆ ಸಭಾಂಗಣದಲ್ಲಿ ನಡೆಯುವ ಸಭೆಯಲ್ಲಿ ಚರ್ಚೆಗೊಳಗಾಗುವ ಎಲ್ಲ ಮಾತುಗಳು ದಾಖಲಾಗುವಂಥ ಯಂತ್ರವನ್ನು ಅಳವಡಿಸಿ ಸಭಾಂಗಣಕ್ಕೆ ಹೈಟೆಕ್ ಸ್ಪರ್ಶ ನೀಡಲಾಗಿದೆ. ಇಡಿ ಸಭಾಂಗಣದಲ್ಲಿ ಎಲ್ಲ ಸದಸ್ಯರಿಗೆ ಟೇಬಲ್ ಮೈಕ್‌ಗಳ ವ್ಯವಸ್ಥೆ ಕಲ್ಪಿಸಲಾಗಿದ್ದು, ಮಾಸ್ಟರ್ ಕಂಟ್ರೋಲ್ ಸಾಧನ ಅಧ್ಯಕ್ಷರ ಬಳಿ ಇರುತ್ತದೆ.

ಧ್ವನಿಮುದ್ರಣಗೊಂಡ ಎಲೆಕ್ಟ್ರಾನಿಕ್ ದತ್ತಾಂಶವನ್ನು ನಂತರ ಪಂಚಾಯಿತಿ ಕಚೇರಿಯಲ್ಲಿರುವ ಕಂಪ್ಯೂಟರ್‌ಗಳಲ್ಲಿ ಸಂಗ್ರಹಿಸಿಡಲಾಗುತ್ತದೆ. ಅಗತ್ಯ ಸಂದರ್ಭಗಳಲ್ಲಿ ಅದು ಪ್ರಮುಖ ದಾಖಲೆಯಾಗುತ್ತದೆ. ಹಾಗಾಗಿ ತಾವೂ ಸೇರಿದಂತೆ ಸಭೆಯಲ್ಲಿ ಭಾಗವಹಿಸುವ ಯಾರೇ ಆದರೂ ತಮ್ಮ ನಾಲಿಗೆ ಮೇಲೆ ಹಿಡಿತ ಸಾಧಿಸುವುದು ಅನಿವಾರ್ಯವಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕಾಗುತ್ತದೆ ಎನ್ನುತ್ತಾರೆ ಈ ಯಂತ್ರ ಅಳವಡಿಕೆಗೆ ಆಸಕ್ತಿ ವಹಿಸಿರುವ ಅಧ್ಯಕ್ಷ ಶರಣು ತಳ್ಳಿಕೇರಿ.

ಸಭೆ ಕಾಟಾಚಾರಕ್ಕೆ ನಡೆಯಬಾರದು. ಪ್ರತಿನಿಧಿಗಳು, ಅಧಿಕಾರಿಗಳ ನಡುವಿನ ಚರ್ಚೆ ಅರ್ಥಪೂರ್ಣವಾಗಿರಬೇಕು. ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಮಾತನಾಡಲು ಈ ಧ್ವನಿ ಮುದ್ರಣಯಂತ್ರದಿಂದ ಅನುಕೂಲವಾಗುತ್ತದೆ. ಇಂಥ ವ್ಯವಸ್ಥೆ ವಿಧಾನಸೌಧದಲ್ಲಿ ಮಾತ್ರ ಇದೆ. ಆರ್ಥಿಕ ಹೊರೆಯಾದರೂ ಯಂತ್ರ ಅಳವಡಿಸಿರುವುದರ ಹಿಂದೆ ಜನಹಿತ ಇದೆ ಎಂದು ಅವರು ತಿಳಿಸಿದರು.

ಉಗುಳುವುದಕ್ಕೆ ಪ್ರಶಸ್ತ ತಾಣವಾಗಿದ್ದ ಕಚೇರಿಯ ನಡುವಿನ ಖಾಲಿ ಜಾಗದ ಸುತ್ತಲೂ ಫೆನ್ಸ್ ಅಳವಡಿಸಿ ಅಲಂಕಾರಿಕ ಗಿಡಗಳು ಮತ್ತು ಸುಧಾರಿಸಿದ ಗರಿಕೆಯನ್ನು ಬೆಳೆಸಲಾಗಿದ್ದು ಮನಸ್ಸಿಗೆ ಮುದ ನೀಡುವಂತಿದೆ ಎಂದು ಅಧ್ಯಕ್ಷ ಶರಣು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.