ADVERTISEMENT

ಕುಷ್ಟಗಿ: ತಾಲ್ಲೂಕಿನಾದ್ಯಂತ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 9:35 IST
Last Updated 8 ಅಕ್ಟೋಬರ್ 2012, 9:35 IST

ಕುಷ್ಟಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಭಾನುವಾರ ಸಂಜೆ ಮತ್ತು ಶನಿವಾರ ರಾತ್ರಿ ಉತ್ತಮ ಮಳೆ ಸುರಿದಿದ್ದು ಕಿಲಾರಟ್ಟಿ, ತಾವರಗೇರಾ ಮಳೆ ಮಾಪನ ಕೇಂದ್ರಗಳಲ್ಲಿ ವ್ಯಾಪ್ತಿಯಲ್ಲಿ ಈ ವರ್ಷದಲ್ಲೇ ಅತ್ಯಧಿಕ ಮಳೆ ಸುರಿದಿದೆ.

ರಾತ್ರಿ ಸುರಿದ ಮಳೆಯಿಂದ ಹಳ್ಳಕೊಳ್ಳಗಳು ತುಂಬಿ ಹರಿದಿವೆ, ಹೊಲಗದ್ದೆಗಳ ಬದುಗಳಲ್ಲಿ ಸಾಕಷ್ಟು ಪ್ರಮಾಣದ ನೀರು ಭರ್ತಿಯಾಗಿದ್ದು ಗ್ರಾಮದ ಸುತ್ತಲಿನ ಒಡ್ಡುಗಳು ಒಡೆದು ಹೋಗಿವೆ. ವಿಶೇಷವೆಂದರೆ ತಾಲ್ಲೂಕಿನ ಎಲ್ಲಕಡೆ ಉತ್ತಮ ಮಳೆಯಾಗಿದ್ದರೂ ಈ ಭಾಗದಲ್ಲಿ ಮಾತ್ರ ತೀವ್ರ ಕೊರತೆ ಇತ್ತು.
 
ಆದರೆ ಶನಿವಾರ ಇತರ ಕಡೆಗಿಂತಲೂ ಹೆಚ್ಚು ಅಂದರೆ 70 ಮಿ.ಮೀಮಳೆ ಅಲ್ಲಿನ ಮಾಪನ ಕೇಂದ್ರದಲ್ಲಿ ದಾಖಲಾಗಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.

ಉಳಿದ ಮಳೆ ಮಾಪನ ಕೇಂದ್ರಗಳಲ್ಲಿ ಶನಿವಾರ ದಾಖಲಾಗಿರುವ ಮಳೆ ಪ್ರಮಾಣ ಈ ರೀತಿ ಇದೆ, ತಾವರಗೇರಾ 45 ಮಿ.ಮೀ. ದೋಟಿಹಾಳ 12, ಹನಮನಾಳ 20, ಹನಮಸಾಗರ 15 ಮತ್ತು ಕುಷ್ಟಗಿಯಲ್ಲಿ 7 ಮಿ.ಮೀ. ಮಳೆಯಾಗಿರುವ ಮಾಹಿತಿ ದೊರೆತಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಇನ್ನೆರಡು ದಿನಗಳಲ್ಲಿ ಸಾಕಷ್ಟು ಮಳೆ ಬೀಳುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ.

ಅಲ್ಲದೇ ಭಾನುವಾರ ತಾಲ್ಲೂಕಿನ ಬಹುತೇಕ ಕಡೆ ಮಳೆ ಬಂದಿದೆ, ಪಟ್ಟಣದಲ್ಲಿ ಕಳೆದ ಭಾನುವಾರ ಮಧ್ಯಾಹ್ನ ಉತ್ತಮ ಮಳೆ ಸುರಿದು ವಾರದ ಸಂತೆಗೆ ಬಂದಿದ್ದ ಗ್ರಾಮಾಂತರ ಪ್ರದೇಶದ ಜನ ದಿಕ್ಕಾಪಾಲಾಗುವಂತೆ ಮಾಡಿತ್ತು. ಅಲ್ಲದೇ ಸಂತೆ ಬಯಲಿನಲ್ಲಿ ನೀರು ಹೊಕ್ಕು ತರಕಾರಿ ಇತರೆ ಮಾರಾಟಗಾರರು ಸಂಕಷ್ಟ ಅನುಭವಿಸಿದ್ದರು.

ಅದೇ ರೀತಿ ಭಾನುವಾರ ಸಂಜೆ ತಾವರಗೇರಾ, ಕಿಲಾರಟ್ಟಿ ಗ್ರಾಮಗಳ ವ್ಯಾಪ್ತಿಯಲ್ಲಿ ಮತ್ತೆ ಉತ್ತಮ ಮಳೆ ಸುರಿದಿದೆ ಎಂದು ಅಲ್ಲಿಯ ಜನ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.