ADVERTISEMENT

ಕೂಲಿ ಹಣ ಪಾವತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2011, 8:15 IST
Last Updated 16 ಮಾರ್ಚ್ 2011, 8:15 IST

ಕೊಪ್ಪಳ: ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಿರ್ವಹಿಸಿದ ಕಾಮಗಾರಿಯ ಕೂಲಿ ಹಣವನ್ನು ಪಾವತಿ ಮಾಡದೇ ಇರುವ ಧೋರಣೆಯನ್ನು ಖಂಡಿಸಿ ತಾಲ್ಲೂಕಿನ ಓಜನಹಳ್ಳಿ, ನರೇಗಲ್ಲ ಹಾಗೂ ಚಿಲವಾಡಗಿ ಗ್ರಾಮಗಳ ಜನರು ಮಂಗಳವಾರ ಕಿನ್ನಾಳ ಗ್ರಾಮದಲ್ಲಿರುವ ಹಿರೇಹಳ್ಳ ಯೋಜನೆಯ ಉಪವಿಭಾಗ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಒಂದು ಹಂತದಲ್ಲಿ ಟೈರ್‌ವೊಂದಕ್ಕೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ವೃದ್ಧನೊಬ್ಬ ಈ ಬೆಂಕಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆದ ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತು.ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಭಟನಾಕಾರರು, ಹಿರೇಹಳ್ಳ ಜಲಾಶಯಕ್ಕೆ ನಿರ್ಮಿಸಿರುವ ಕಾಲುವೆಯಲ್ಲಿದ್ದ ಹೂಳನ್ನು ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತೆಗೆದು ಹಾಕಲಾಗಿದೆ. ಕಾಮಗಾರಿ ಪೂರೈಸಿ ಒಂದು ವರ್ಷ ಕಳೆದರೂ ಕೂಲಿ ಹಣ ಪಾವತಿಸಿಲ್ಲ ಎಂದು ಗವಿಸಿದ್ಧಪ್ಪ ಜಂತ್ಲಿ ದೂರಿದರು.

ಸುಮಾರು 100ಕ್ಕೂ ಅಧಿಕ ಜನ ಕೂಲಿಕಾರರಿಗೆ 4 ಲಕ್ಷಕ್ಕೂ ಅಧಿಕ ಮೊತ್ತದ ಕೂಲಿ ಹಣ ಬರಬೇಕಿದೆ. ಈ ಕುರಿತು ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಪ್ರತಿಭಟನೆಗೆ ಮುಂದಾಗಿದ್ದಾಗಿ ಅವರು ಹೇಳಿದರು.2 ಗಂಟೆಗೂ ಅಧಿಕ ಕಾಲ ಪ್ರತಿಭಟನೆ ನಡೆದ ನಂತರ ಸ್ಥಳಕ್ಕೆ ಧಾವಿಸಿದ ಹಿರೇಹಳ್ಳ ಯೋಜನೆಯ ಅಧಿಕಾರಿಗಳು, 2-3 ದಿನಗಳಲ್ಲಿ ಕೂಲಿ ಹಣ ಪಾವತಿಸುವುದಾಗಿ ಭರವಸೆ ನೀಡಿದ ನಂತರ ಗ್ರಾಮಸ್ಥರು ಪ್ರತಿಭಟನೆ ಹಿಂತೆಗೆದುಕೊಂಡರು.ಚಿಲವಾಡಗಿ ಗ್ರಾಮದ ಹನುಮಂತಪ್ಪ ಕಲಾಲ, ಶಂಕ್ರಪ್ಪ ಅಂಡಗಿ, ನರೆಗಲ್ಲ ಗ್ರಾಮದ ಈರನಗೌಡ, ಚೆನ್ನಪ್ಪ, ಪ್ರಭುರಾಜ ಜಂತ್ಲಿ, ಬಸವರಾಜ ಮೇಟಿ ಹಾಗೂ ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.