ADVERTISEMENT

ಕೆಡಿಪಿ ಸಭೆ:ಕರ್ತವ್ಯಲೋಪ- ಅಧಿಕಾರಿ ವಿರುದ್ಧ ಕ್ರಮ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2012, 8:55 IST
Last Updated 6 ಮಾರ್ಚ್ 2012, 8:55 IST

ಯಲಬುರ್ಗಾ:  ಜಾನುವಾರುಗಳ ಚಿಕಿತ್ಸೆಗೆ ಅಗತ್ಯ ಔಷಧಿ ಖರೀದಿಗಾಗಿ ಲಭ್ಯವಿರುವ ಅನುದಾನವನ್ನು ಬಳಕೆ ಮಾಡುವಲ್ಲಿ ವಿಫಲವಾಗಿದ್ದಲ್ಲದೇ ಆ ಬಗ್ಗೆ ಕಚೇರಿಗೆ ಸರಿಯಾದ ಮಾಹಿತಿ ನೀಡದೇ ಬೇಜವಾಬ್ದಾರಿತನ ಪ್ರದರ್ಶಿಸುತ್ತಿರುವ ಬಗ್ಗೆ ಆಯುಕ್ತರಿಗೆ ಸೂಕ್ತ ಕ್ರಮಕ್ಕಾಗಿ ದೂರು ನೀಡುವುದಾಗಿ ಪಶು ವೈದ್ಯಾಧಿಕಾರಿಗಳ ವಿರುದ್ಧ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಬಿ. ಅಕ್ಕೋಜಿ ಹೇಳಿದರು.

ತಾಪಂ ಸಭಾಂಗಣದಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಧಿಕಾರಿಯಾಗಿ ಸರ್ಕಾರ ವಹಿಸಿರುವ ಜವಾಬ್ದಾರಿ, ಕರ್ತವ್ಯಗಳನ್ನು ನಿಬಾಯಿಸುವಲ್ಲಿ ಉದಾಸೀನ ತೋರುವ ಮೂಲಕ ಜಾನುವಾರುಗಳ ಆರೋಗ್ಯಕ್ಕೆ ಸಂಚಕಾರ ತರುತ್ತಿದ್ದೀರಿ, ವೈಯಕ್ತಿಕ ಲಾಭ ತರುವಂತಹ ಕೆಲಸಗಳನ್ನು ಬೆಂಗಳೂರಿಗೆ ಹೋಗಿ ಮಾಡಿಕೊಂಡು ಬರುವಲ್ಲಿ ಮನಸ್ಸು ಮಾಡುವ ತಾವು ಔಷಧಿ ಖರೀದಿಗೆ ಮುಂದಾಗದೇ ಹಣವನ್ನು ವಾಪಸ್ಸು ಕಳಿಸಲು ಇಚ್ಛೆ ವ್ಯಕ್ತಪಡಿಸಿದ್ದು ಬೇಸರದ ಸಂಗತಿಯಾಗಿದೆ ಎಂದು ಅಧಿಕಾರಿಯನ್ನು ತರಾಟೆಗೆ ತಗೆದುಕೊಂಡರು.

ಜಿಲ್ಲಾಧಿಕಾರಿಗಳ ಸೂಚನೆ ಹಾಗೂ ಅಗತ್ಯಕ್ಕೆ ಅನುಗುಣವಾಗಿ ತಾಲ್ಲೂಕಿನಲ್ಲಿ ನಾಲ್ಕು ಕಡೆ ಗೋಶಾಲೆಗಳನ್ನು ತೆರೆಯಬೇಕಾಗಿದೆ. ಈಗಾಗಲೇ ಚಿಕ್ಕೊಪ್ಪದಲ್ಲಿ ತೆರೆದಿದ್ದು, ಉಳಿದಂತೆ ತಿಪ್ಪರಸನಾಳ, ಚಿಕ್ಕವಂಕಲಕುಂಟಾ ಹಾಗೂ ಕುಕನೂರು ಹತ್ತಿರ ಸ್ಥಾಪಿಸಲು ಕ್ರಮ ಕೈಗೊಳ್ಳುವಂತೆ ಪಶುವೈದ್ಯಾಧಿಕಾರಿಗೆ ಇಒ ತಿಳಿಸಿದರು. ಯರೀ ಭಾಗದ ಜನತೆ ಕುಡಿಯುವ ನೀರಿಗಾಗಿ ಕೆರೆಗಳನ್ನು ನೆಚ್ಚಿಕೊಂಡಿದ್ದು,
 
ಆದರೆ ಮಳೆಯ ಅಭಾವದಿಂದ ಕೆರೆಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗುತ್ತಿದೆ ಈ ನಿಟ್ಟಿನಲ್ಲಿ ಯರೇಹಂಚಿನಾಳ, ತೊಂಡಿಹಾಳ, ಬಂಡಿಹಾಳ, ಮುಧೋಳ, ಹಿರೇಮ್ಯಾಗೇರಿ, ಬನ್ನಿಕೊಪ್ಪ, ಸೊಂಪೂರ ಸೇರಿದಂತೆ ಅನೇಕ ಗ್ರಾಮಗಳಿಗೆ ನೀರಿನ ಪೂರೈಕೆಗೆ ತುರ್ತುಕ್ರಮ ಕೈಗೊಳ್ಳುವಂತೆ ಜಿಪಂ ಎಂಜಿನಿಯರಿಂಗ್ ಉಪ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದ ಇಒ, 13ನೇ ಹಣಕಾಸು ಯೋಜನೆ ಅಡಿಯಲ್ಲಿನ ಅನುದಾನವನ್ನು ಕೇವಲ ನೀರು ಪೂರೈಕೆಗೆ ಮಾತ್ರ ಬಳಸುವಂತೆ ಪಿಡಿಒ ಹಾಗೂ ಕಾರ್ಯದರ್ಶಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ಇದನ್ನು ಉಲ್ಲಂಘಿ ಸಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ತರಾಟೆ: ಚಿಕ್ಕಮ್ಯಾಗೇರಿ ಗ್ರಾಮ ಪಂಚಾಯಿತಿ ಪಿಡಿಒ ಒಮ್ಮೆಯೂ ಪಂಚಾಯಿತಿಗೆ ಬರುವುದಿಲ್ಲ, ಊರಲ್ಲಿ ವಿವಿಧ ಕಡೆಗಳಲ್ಲಿ ಅಳವಡಿಸಿದ ಪೈಪುಗಳು ಹತ್ತು ಹಲವು ಕಡೆ ಒಡೆದ ಪರಿಣಾಮ ಜನರು ಕೊಳೆಯ ನೀರನ್ನೆ ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಅಲ್ಲಿಯ ಮಕ್ಕಳಿಗೆ ವಾಂತಿ ಬೇಧಿ ಶುರುವಾಗಿದ್ದು ಈ ಬಗ್ಗೆ ಸ್ವಲ್ಪವೂ ಕಾಳಜಿ ತೋರದ ಪಿಡಿಒ ಬಡಿಗೇರ ಇದ್ದು ಇಲ್ಲದಂತಿದ್ದಾರೆ.

ಈ ಬಗ್ಗೆ ಮುಂದಿನ ಎರಡು ದಿನಗಳಲ್ಲಿ ಸಮಸ್ಯೆಯನ್ನು ಬಗೆಹರಿಸದೇ ಹೋದರೆ ಪಂಚಾಯತ್ ರಾಜ್ ಇಲಾಖೆಗೆ ದೂರು ನೀಡಬೇಕಾಗುತ್ತದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಪರಸಪ್ಪ ನಾಯಕ ಹಾಗೂ ಇಒ ಅಕ್ಕೋಜಿ ಪಿಡಿಒ ಅನ್ನು ತರಾಟೆಗೆ ತಗೆದುಕೊಂಡರು.

ತೋಟಗಾರಿಕೆ, ಕೃಷಿ, ರೇಷ್ಮೆ ಇಲಾಖೆಗಳಿಂದ ರೈತರಿಗೆ ವಿವಿಧ ಯೋಜನೆಗಳ ಕುರಿತ ಸರಿಯಾದ ಮಾಹಿತಿ ಸಿಗುತ್ತಿಲ್ಲ, ಕೇವಲ ಜಾತ್ರೆಗಳಲ್ಲಿ ವಸ್ತು ಪ್ರದರ್ಶನ ಮಾಡುತ್ತಾರೆ ಹೊರೆತು ವಿವಿಧ ಯೋಜನೆಗಳ ಕುರಿತಂತೆ ಸಮಗ್ರ ಮಾಹಿತಿ ನೀಡುತ್ತಿಲ್ಲ, ಈ ಬಗ್ಗೆ ಸಂಬಂಧಪಟ್ಟವರು ಎಚ್ಚರವಹಿಸಬೇಕು ಎಂದು ಜಿಪಂ ಸದಸ್ಯರಾದ ಈರಪ್ಪ ಕುಡಗುಂಟಿ, ರಾಮಣ್ಣ ಸಾಲಭಾವಿ ಅಭಿಪ್ರಾಯಪಟ್ಟರು.

ತಾಪಂ ಅಧ್ಯಕ್ಷೆ ನೀಲಮ್ಮ ಜವಳಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಹೊಳೆಗೌಡ ಪಾಟೀಲ, ಜಿಪಂ ಸದಸ್ಯರಾದ ಹೇಮಲತಾ ಪೊಲೀಸ್‌ಪಾಟೀಲ, ಉಮಾ ಮುತ್ತಾಳ ಇದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.