ADVERTISEMENT

ಕೊಪ್ಪಳ: ಕೆಲವೆಡೆ ಮಳೆ, ಸಂಭ್ರಮ

​ಪ್ರಜಾವಾಣಿ ವಾರ್ತೆ
Published 17 ಜುಲೈ 2012, 10:20 IST
Last Updated 17 ಜುಲೈ 2012, 10:20 IST
ಕೊಪ್ಪಳ: ಕೆಲವೆಡೆ ಮಳೆ, ಸಂಭ್ರಮ
ಕೊಪ್ಪಳ: ಕೆಲವೆಡೆ ಮಳೆ, ಸಂಭ್ರಮ   

ಕೊಪ್ಪಳ: ನಗರ ಹಾಗೂ ತಾಲ್ಲೂಕಿನ ಕೆಲವೆಡೆ ಸೋಮವಾರ ಮಧ್ಯಾಹ್ನ ಉತ್ತಮ ಮಳೆ ಬಿದ್ದಿದೆ. ತಾಲ್ಲೂಕಿನ ಅಳವಂಡಿ, ಹಿರೇಸಿಂದೋಗಿ ಹಾಗೂ ಬೆಟಗೇರಿ ಗ್ರಾಮಗಳ ವ್ಯಾಪ್ತಿಯಲ್ಲಿ ಉತ್ತಮ ಮಳೆ ಬಿದ್ದಿದ್ದು ರೈತರಲ್ಲಿ ಸಂತಸ ಮೂಡಿಸಿದೆ.

ಮಧ್ಯಾಹ್ನ 2.30 ಗಂಟೆ ಹೊತ್ತಿಗೆ ಆರಂಭಗೊಂಡ ಮಳೆ ಅರ್ಧ ತಾಸಿಗೂ ಹೆಚ್ಚು ಕಾಲ ಸುರಿದಿದೆ. ಆದರೆ, ಮಳೆಯಿಂದ ಯಾವುದೇ ಆಸ್ತಿ ಹಾಗೂ ಜೀವ ಹಾನಿ ಆಗಿರುವ ಬಗ್ಗೆ ವರದಿಯಾಗಿಲ್ಲ.

ನಗರದಲ್ಲಿ ಬಿದ್ದ ಮಳೆಯ ಪರಿಣಾಮ ಗಟಾರುಗಳೆಲ್ಲ ತುಂಬಿ ಹರಿದಿವೆ. ಚರಂಡಿಗಳಲ್ಲಿನ ಹೊಲಸು, ತ್ಯಾಜ್ಯ ವಸ್ತುಗಳೆಲ್ಲಾ ರಸ್ತೆ ಬಂದಿದ್ದು ನಗರಸಭೆ ತನ್ನ ಕರ್ತವ್ಯ ನಿಭಾಯಿಸುವಲ್ಲಿ ವಿಫಲವಾಗಿದೆ ಎಂಬುದನ್ನು ತೋರುವಂತಿತ್ತು.

ಕೇಂದ್ರೀಯ ಬಸ್ ನಿಲ್ದಾಣ ಬಳಿ ಇರುವ ದೊಡ್ಡ ಚರಂಡಿ ತುಂಬಿ, ಹೊಲಸು ನೀರೆಲ್ಲಾ ರಸ್ತೆ ಮೇಲೆ ನಿಂತು ಸಂಚಾರಕ್ಕೆ ತೊಂದರೆಯಾಗಿದ್ದು ಇದಕ್ಕೆ ನಿದರ್ಶನ ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು. ಅರ್ಧ ಗಂಟೆಗೂ ಹೆಚ್ಚು ಕಾಲ ಸಂಚಾರಕ್ಕೆ ಅಡಚಣೆಯಾಗಿದ್ದರಿಂದ ಜನರು ಹಾಗೂ ವಾಹನಗಳ ಸವಾರರು ತೊಂದರೆ ಅನುಭವಿಸಿದರು. ರಸ್ತೆ ಕಾಣದ ರೀತಿಯಲ್ಲಿ ಚರಂಡಿಯೊಳಗಿನ ಹೊಲಸು ನೀರಿನೊಂದಿಗೆ ಹರಿದು ಹೋಗುತ್ತಿದ್ದ ದೃಶ್ಯ ಜಿಲ್ಲಾ ಆಸ್ಪತ್ರೆಯ ಮುಂದೆಯೂ ಇತ್ತು. ವಾಹನಗಳ ಎಂಜಿನ್‌ಯೊಳಗೆ ನೀರು ನುಗ್ಗಿ ಎಂಜಿನ್ ಬಂದ್ ಆದ ಪರಿಣಾಮ ಬೈಕ್ ಸವಾರರು ಹೊಲಸು ನೀರಿನಲ್ಲಿ ವಾಹನಗಳನ್ನು ತಳ್ಳಿಕೊಂಡು ಹೋಗುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.