ADVERTISEMENT

ಖಾತರಿಯಲ್ಲಿ ಅರಾಜಕತೆ!

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2011, 10:10 IST
Last Updated 5 ಮಾರ್ಚ್ 2011, 10:10 IST
ಖಾತರಿಯಲ್ಲಿ ಅರಾಜಕತೆ!
ಖಾತರಿಯಲ್ಲಿ ಅರಾಜಕತೆ!   

ಕುಷ್ಟಗಿ: ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿರುವುದಾಗಿ ಹೇಳುತ್ತಿರುವುದರ ನಡುವೆಯೂ ಉದ್ಯೋಗ ಖಾತರಿ ಯೋಜನೆಯಲ್ಲಿ ಅರಾಜಕತೆ ಮುಂದುವರೆದಿದ್ದು ಭ್ರಷ್ಟಾಚಾರ ತಾಂಡವವಾಡುತ್ತಿರುವುದು ಕಂಡುಬಂದಿದೆ.

ಕೆಲಸಗಳೇ ಇಲ್ಲದಿದ್ದರೂ ಯೋಜನೆಯ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಮಾಹಿತಿ ಭರ್ತಿ ಮಾಡುವ ಕಾರ್ಯ ಯಾವ ಅಡ್ಡಿ ಆತಂಕಗಳಿಲ್ಲದೇ ನಡೆದಿದ್ದು, ಅಜ್ಞಾತ ಸ್ಥಳಗಳಲ್ಲಿ, ತೋಟದ ಮನೆಗಳಲ್ಲಿ ಅಷ್ಟೇ ಏಕೆ ರಸ್ತೆ ಬದಿಯ ಡಾಬಾಗಳಲ್ಲೂ ನಕಲಿ ಕೂಲಿಕಾರರು ಮತ್ತು ಬೋಗಸ್ ಕಾಮಗಾರಿಗಳ ಹೆಸರಿನಲ್ಲಿ ಡಾಟಾ ಎಂಟ್ರಿ ಮಾಡುವ ಕೆಲಸ ಅವ್ಯಾಹತವಾಗಿ ನಡೆಯುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ.

ಯಲಬುರ್ಗಾ ಕುಖ್ಯಾತಿ: ಕಳೆದ ವರ್ಷ ಯೋಜನೆಯಲ್ಲಿ ಕೋಟಿ ಕೋಟಿ ಹಣ ಲೂಟಿ ಹೊಡೆಯುವಲ್ಲಿ ಕುಖ್ಯಾತಿಗೊಳಗಾಗಿದ್ದ ಯಲಬುರ್ಗಾ ತಾಲ್ಲೂಕು ಈ ವರ್ಷವೂ ಆ ‘ಸಾಧನೆ’ಯಲ್ಲಿ ಮುಂಚೂಣಿ ಕಾಯ್ದುಕೊಂಡಿದೆ. ನಕಲಿ ಕೂಲಿಕಾರರ ಸಹಸ್ರ ಹೆಸರುಗಳು ಮತ್ತೆ ಚಾಲ್ತಿಗೆ ಬಂದಿವೆ. ವೆಬ್‌ಸೈಟ್‌ನಲ್ಲಿ ಕಂಡುಬರುವ ಮಾಹಿತಿಯ ಪ್ರಕಾರ ಜಿಲ್ಲೆಯಲ್ಲಿ ಅತಿ ಹೆಚ್ಚು ಮತ್ತು ಅಷ್ಟೇ ಪ್ರಮಾಣದ ಬೋಗಸ್ ಜಾಬ್‌ಕಾರ್ಡ್‌ಗಳು ಈ ತಾಲ್ಲೂಕಿನಲ್ಲಿರುವುದು ಸ್ಪಷ್ಟವಾಗಿದೆ.

ಕೊಪ್ಪಳದಲ್ಲಿ 41469, ಕುಷ್ಟಗಿ-50591, ಗಂಗಾವತಿ-53181 ಹಾಗೂ ಯಲಬುರ್ಗಾದಲ್ಲಿ 60456 ಜಾಬ್‌ಕಾರ್ಡ್‌ಗಳಿವೆ. ಕಳೆದ ಡಿಸೆಂಬರ್ ಈಚೆಗೆ ಯಲಬುರ್ಗಾ ತಾಲ್ಲೂಕಿನಲ್ಲಿ ಸುಮಾರು 20 ಸಾವಿರದಷ್ಟು ಜಾಬ್‌ಕಾರ್ಡ್‌ಗಳು ಏಕಾಏಕಿ ಹೆಚ್ಚಾಗಿರುವುದನ್ನು ತಾಲ್ಲೂಕು ಪಂಚಾಯಿತಿ ಅಧಿಕಾರಿ ಹಂಪಣ್ಣ ತಮ್ಮನ್ನು ಸಂಪರ್ಕಿಸಿದ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪಹಣಿ ಪತ್ರದಲ್ಲಿ ಸರ್ವೆ ನಂ. ಮುಂದೆ ಬಾರ್‌ಗಳು ಇರುವಂತೆಯೇ ಸಹಸ್ರ ಸಂಖ್ಯೆಯಲ್ಲಿ ನಕಲಿ ಜಾಬ್‌ಕಾರ್ಡ್‌ಗಳು ಯಲಬುರ್ಗಾ ತಾಲ್ಲೂಕಿನ ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಇರುವುದು ರಾಜ್ಯದಲ್ಲೇ ಹೊಸದು ಎನ್ನಲಾಗಿದೆ. ಆದರೆ ಈ ರೀತಿ ಬಾರ್ ಸಂಖ್ಯೆಗಳಿಗೆ ಅವಕಾಶವೇ ಇಲ್ಲ ಎಂಬುದನ್ನು ಜಿಲ್ಲಾ ಪಂಚಾಯಿತಿ ಸಿ.ಇ.ಒ ಮೂರ್ತಿ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದ್ದು ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.

ಕುಷ್ಟಗಿ ತಾಲ್ಲೂಕಿನ ಉದಾಹರಣೆ ನೀಡುವುದಾದರೆ ಕಂದಕೂರು ಗ್ರಾಮದಲ್ಲಿ ಸುಮಾರು ಎರಡು ತಿಂಗಳ ಹಿಂದೆ ಕೇವಲ 1530 ಇದ್ದ ಜಾಬ್‌ಕಾರ್ಡ್‌ಗಳ ಸಂಖ್ಯೆ ಸದ್ಯ 2645ಕ್ಕೆ ತಲುಪಿದೆ. ಕುಷ್ಟಗಿ ಹಾಗೂ ಯಲಬುರ್ಗಾ ತಾಲ್ಲೂಕುಗಳ ಅನೇಕ ಗ್ರಾಮ ಪಂಚಾಯಿತಿಗಳ ಎಂ.ಐ.ಎಸ್‌ಗಳು ಮನೆ, ಮಠ, ಡಾಬಾ ಹೀಗೆ ಎಲ್ಲೆಂದರಲ್ಲಿ ನಡೆಯುತ್ತಿವೆ. ಗುಪ್ತ ಪಾಸ್‌ವರ್ಡ್‌ಗಳು ಪಟ್ಟಭದ್ರರ ಕೈಯಲ್ಲಿರುವುದು ಸ್ಪಷ್ಟವಾಗಿದೆ. ಆದರೆ ಮೇಲ್ನೋಟಕ್ಕೆ ಡಾಟಾ ಎಂಟ್ರಿ ಕೇಂದ್ರಗಳು ಕೀಲಿ ಹಾಕಿದ್ದರೂ ಪ್ರತಿದಿನ ಆಯಾ ಗ್ರಾಮ ಪಂಚಾಯಿತಿಗಳ ಹೆಸರಿನಲ್ಲಿ ಲಕ್ಷ ಲಕ್ಷ ಹಣ ಖರ್ಚು ಏರಿರುವುದು ವೆಬ್‌ಸೈಟ್ ಕೆದಕಿ ನೋಡಿದಾಗ ಕಂಡುಬಂದಿದೆ.

ಈ ಬಗ್ಗೆ ಶುಕ್ರವಾರ ತಾಲ್ಲೂಕು ಪಂಚಾಯಿತಿ ಕಚೇರಿಗೆ ಬಂದು ಆಕ್ರೋಶ ವ್ಯಕ್ತಪಡಿಸಿದ ಕಂದಕೂರು ರೈತರು, ಪಿ.ಡಿ.ಒ, ಆಪರೇಟರ್‌ಗಳು ಪಾಸ್‌ವರ್ಡ್‌ನೊಂದಿಗೆ ನಾಪತ್ತೆಯಾಗಿ ಅಜ್ಞಾತ ಸ್ಥಳದಿಂದ ವೆಬ್‌ಸೈಟ್ ಆಪರೇಟ್ ಮಾಡುತ್ತಿದ್ದಾರೆ. ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ವಜಾಗೊಂಡ ಕರವಸೂಲಿಗಾರನ ಕೈಯಲ್ಲಿ ದಾಖಲೆಗಳಿವೆ ಎಂಬುದನ್ನು ಕಾರ್ಯ ನಿರ್ವಹಣಾಧಿಕಾರಿಗೆ ವಿವರಿಸಿದರು.

ಹಳೆಯ ಜಾಬ್‌ಕಾರ್ಡ್‌ಗಳಿಗೆ ಹಣ ಪಾವತಿ ಮಾಡದಂತೆ ಕ್ರಮ ಕೈಗೊಳ್ಳುತ್ತೇವೆ. ಅಲ್ಲದೆ ಪಿ.ಡಿ.ಒ ಮತ್ತು ಆಪರೇಟರ್ ಮೇಲೆ ಕ್ರಮ ಜರುಗಿಸಲು ಜಿಲ್ಲಾ ಪಂಚಾಯಿತಿಗೆ ಶಿಫಾರಸು ಮಾಡುವುದಾಗಿ ಇ.ಒ ಜಯರಾಮ ಚವ್ಹಾಣ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.