ADVERTISEMENT

ಖಾತರಿಯಿಂದಲೂ ಹಣಕಾಸು ನೆರವು

​ಪ್ರಜಾವಾಣಿ ವಾರ್ತೆ
Published 17 ಜುಲೈ 2012, 10:20 IST
Last Updated 17 ಜುಲೈ 2012, 10:20 IST

ಕೊಪ್ಪಳ: ಇನ್ನು ಮುಂದೆ ಸಂಪೂರ್ಣ ಸ್ವಚ್ಛತಾ ಆಂದೋಲನದಡಿ ಕೈಗೆತ್ತಿಕೊಳ್ಳುವ ಶೌಚಾಲಯ ನಿರ್ಮಾಣ ಕಾರ್ಯಕ್ಕೂ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹಣಕಾಸಿನ ಸೌಲಭ್ಯ ಸಿಗಲಿದೆ.

ಸದರಿ ಯೋಜನೆಯಡಿ ಒಂದು ಶೌಚಾಲಯ ನಿರ್ಮಾಣಕ್ಕೆ ನೀಡಲಾಗುವ ಮೊತ್ತವನ್ನು 4,500 ರೂಪಾಯಿಗೆ ನಿಗದಿಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಆದೇಶ ಹೊರಡಿಸಿದೆ.

ಸದ್ಯ ಜಾರಿಯಲ್ಲಿರುವ ಸಂಪೂರ್ಣ ಸ್ವಚ್ಛತಾ ಆಂದೋಲನದಡಿ ಕೈಗೆತ್ತಿಕೊಳ್ಳುವ ಶೌಚಾಲಯದ ನಿರ್ಮಾಣ ಕಾಮಗಾರಿಯನ್ನು ಉದ್ಯೋಗ ಖಾತರಿ ಯೋಜನೆಯಡಿ ಒಗ್ಗೂಡಿಸುವ ಮೂಲಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸಂಪೂರ್ಣ ಸ್ಚಚ್ಛತಾ ಆಂದೋಲನದಡಿ ನಿರ್ಮಿಸಲಾಗುವ ವೈಯಕ್ತಿಕ, ಶಾಲಾ ಮತ್ತು ಸಮುದಾಯ, ಅಂಗನವಾಡಿ ಶೌಚಾಲಯಗಳ ನಿರ್ಮಾಣಕ್ಕೆ ಇದು ಅನ್ವಯವಾಗಲಿದೆ.

ಸಂಪೂರ್ಣ ಸ್ವಚ್ಛತಾ ಆಂದೋಲನದಡಿ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಳ್ಳುವವರಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ನಿರ್ಮಾಣಕ್ಕೆ ತಗಲುವ ಎಲ್ಲ ವೆಚ್ಚವನ್ನು ಶೌಚಾಲಯ ನಿರ್ಮಿಸಿಕೊಳ್ಳುವ ಕುಟುಂಬವೇ ಭರಿಸಬೇಕು. ಆದರೆ, ಈ ಒಗ್ಗೂಡಿಸುವಿಕೆಯಿಂದಾಗಿ ನಿರ್ಮಾಣ ಕಾಮಗಾರಿಗೆ ತಗಲುವ ವೆಚ್ಚದ ಪೈಕಿ 4,500 ರೂಪಾಯಿಯನ್ನು ಉದ್ಯೋಗ ಖಾತರಿ ಯೋಜನೆಯಡಿ ಸಂಬಂಧಪಟ್ಟ ಕುಟುಂಬಕ್ಕೆ ನೀಡಲಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ರಾಜಾರಾಂ ಹೇಳುತ್ತಾರೆ.

ಅಲ್ಲದೇ, ಕೃಷಿ, ಹೈನುಗಾರಿಕೆ, ಮೀನುಗಾರಿಕೆ, ಕಡಲ ತೀರದ ಕಾಮಗಾರಿಗಳು, ಕುಡಿಯುವ ನೀರಿನ ಕಾಮಗಾರಿಗಳು, ಕೊಳವೆ ಬಾವಿ ಮರುಪೂರಣ ಸೇರಿದಂತೆ ಒಟ್ಟು 16 ವಿವಿಧ ಕಾಮಗಾರಿಗಳನ್ನು ಸಹ ಉದ್ಯೋಗ ಖಾತರಿ ಯೋಜನೆಯಡಿ ಕೈಗೆತ್ತಿಕೊಳ್ಳಬಹುದಾಗಿದೆ ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

` ಶೌಚಾಲಯ ನಿರ್ಮಿಸುವ ಸಂಬಂಧ ಪಾಯ ತೋಡುವ ಇಲ್ಲವೇ ಇತರ ಕಾಮಗಾರಿಗೆ ಸಂಬಂಧಿಸಿದಂತೆ 4,500 ರೂಪಾಯಿಗಳನ್ನು ಒದಗಿಸಲಾಗುತ್ತದೆ. ಅಲ್ಲದೇ, ಉದ್ಯೋಗ ಖಾತರಿ ಯೋಜನೆಯಡಿ ನೋಂದಣಿ ಮಾಡಿಸಿದ ಕೂಲಿಕಾರರೇ ಕಾಮಗಾರಿಯನ್ನು ನಿರ್ವಹಿಸಬೇಕು. ಈ ಹಣವನ್ನು ಕೂಲಿಕಾರರಿಗೆ ಕೂಲಿ ರೂಪದಲ್ಲಿ ನೀಡಲಾಗುತ್ತದೆ~ ಎಂದು ರಾಜಾರಾಂ ಸ್ಪಷ್ಟಪಡಿಸುತ್ತಾರೆ.

ಶೌಚಾಲಯ ನಿರ್ಮಿಸಿಕೊಳ್ಳುವ ವ್ಯಕ್ತಿ ಹಾಗೂ ಆ ಕುಟುಂಬದ ಸದಸ್ಯರು ಒಂದು ವೇಳೆ ನೋಂದಾಯಿತ ಕೂಲಿಕಾರರಿದ್ದಲ್ಲಿ ಅವರೇ ಕಾಮಗಾರಿಯನ್ನು ಕೈಗೊಂಡು ಈ 4,500 ರೂಪಾಯಿ ಪಡೆಯಲು ಅರ್ಹರಿರುತ್ತಾರೆ ಎಂದೂ ಹೇಳುತ್ತಾರೆ.

ನಿರ್ಮಾಣ ಕಾರ್ಯಕ್ಕಾಗಿ ಒಂದು ದಿನಕ್ಕೆ ಗರಿಷ್ಠ 20 ಜನ ಕೌಶಲ ಹೊಂದಿರದ ಕಾರ್ಮಿಕರನ್ನು ನಿಯೋಜಿಸಬಹುದು. ಕೌಶಲ ಹೊಂದಿರುವ ಕಾರ್ಮಿಕರನ್ನಾದರೆ ಒಂದು ದಿನಕ್ಕೆ ಗರಿಷ್ಠ 6 ಜನರನ್ನು ಕೆಲಸಕ್ಕೆ ನಿಯೋಜಿಸಬಹುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.