ಕುಷ್ಟಗಿ: ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ನೀಡದಿರುವುದು ಹಾಗೂ ನಿಜವಾಗಿಯೂ ದುಡಿದ ಅರ್ಹರಿಗೆ ಹಣ ಪಾವತಿ ಮಾಡದ ಅಧಿಕಾರಿಗಳ ಕ್ರಮವನ್ನು ಖಂಡಿಸಿ ತಾಲ್ಲೂಕಿನ ತಳುವಗೇರಾ, ಜಾಗೀರಗುಡದೂರು, ಬಿಜಕಲ್, ಕೊರಡಕೇರಾ, ಕಂದಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳ ಜನರು ಸೋಮವಾರ ಇಲ್ಲಿ ಪ್ರತಿಭಟನೆ ನಡೆಸಿದರು.
ಮಹಿಳೆಯರು ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿದ್ದ ಕೃಷಿಕೂಲಿಕಾರ್ಮಿಕರು ಸಿ.ಪಿ.ಎಂ ಕಚೇರಿಯಿಂದ ಪ್ರಮುಖ ಬೀದಿಗಳ ಮೂಲಕ ತಾಲ್ಲೂಕು ಪಂಚಾಯಿತಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಅಲ್ಲಿಯೇ ಧರಣಿ ನಡೆಸಿದರು.ಕೂಲಿಕಾರರು ಕೆಲಸವನ್ನೇ ಮಾಡಿಲ್ಲ. ಎಲ್ಲವನ್ನೂ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಮತ್ತು ಗ್ರಾಮದ ಕೆಲ ಪಟ್ಟಭದ್ರರು ಸೇರಿ ಯಂತ್ರಗಳಿಂದ ಅಲ್ಪಸ್ವಲ್ಪ ಕೆಲಸ ಮಾಡಿಸಿದ್ದಾರೆ. ಆದರೂ ಈವರೆಗೆ ತಾಲ್ಲೂಕಿನಲ್ಲಿ ಸುಮಾರು ರೂ. 15.8 ಕೋಟಿ ಖರ್ಚಾಗಿದ್ದು ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನ ತುಮರಿಕೊಪ್ಪ, ಕಂದಕೂರು, ಕೊರಡಕೇರಾ, ಹನಮಸಾಗರ, ಬಿಜಕಲ್ ಮೊದಲಾದ ಗ್ರಾಮಗಳಲ್ಲಿ ಸಹಸ್ರ ಸಂಖ್ಯೆ ಬೇನಾಮಿ ಜಾಬ್‌ಕಾರ್ಡ್‌ಗಳನ್ನು ಸೃಷ್ಟಿಸಿ ಲಕ್ಷಗಟ್ಟಲೇ ಹಣ ಖರ್ಚು ತೋರಿಸಲಾಗಿದೆ. ದುಡಿಯಲು ಹಳ್ಳಿಯಲ್ಲಿ ಜನರೇ ಬರುತ್ತಿಲ್ಲ ಎಂಬ ನೆಪವನ್ನು ಅಧಿಕಾರಿಗಳು ಮುಂದಿಡುತ್ತಾರೆ. ಕೆಲಸ ಆರಂಭಿಸುವ ಬಗ್ಗೆ ಯಾವ ಗ್ರಾಮದಲ್ಲಿ ಗ್ರಾಮಸಭೆ ನಡೆಸಿ ವ್ಯಾಪಕ ಪ್ರಚಾರ ಮಾಡಲಾಗಿದೆ ಎಂಬ ಒಂದಾದರೂ ಉದಾಹರಣೆ ನೀಡಲಿ ಎಂದು ರೈತ ಮುಖಂಡ ಆರ್.ಕೆ.ದೇಸಾಯಿ ಸವಾಲು ಹಾಕಿದರು.
ದೊಡ್ಡ ಗ್ರಾಮವಾಗಿರುವ ಹನಮಸಾಗರದಲ್ಲಿ ಕೆಲಸವೇ ಆಗಿಲ್ಲ. ಆದರೂ ರೂ. 83 ಲಕ್ಷ ಖರ್ಚು ತೋರಿಸಲಾಗಿದೆ. ಕಟ್ಟುನಿಟ್ಟಿನ ಕ್ರಮಕ್ಕೆ ಹೆಸರಾಗಿದ್ದ ಪಿ.ಡಿ.ಒ ಅವರನ್ನು ಎತ್ತಂಗಡಿ ಮಾಡಲು ಚಳವಳಿ ನಡೆಸಿದ ಅಲ್ಲಿನ ಸದಸ್ಯರು ತಾವು ಹೇಳಿದಂತೆ ಗೋಣು ಹಾಕುವ ವ್ಯಕ್ತಿಯನ್ನು ತಂದು ಕೂಡ್ರಿಸಿದ್ದಾರೆ ಎಂದು ಆರೋಪಿಸಿದರು.ಸ್ವತಃ ಇ.ಒ ಅವರೇ ಯಂತ್ರಗಳಿಂದ ಕೆಲಸ ಮಾಡಿಸಿ ಹಣ ಖರ್ಚು ಮಾಡಲಾಗಿದೆ ಎಂದು ಹೇಳುತ್ತಾರೆಂದರೆ ಈ ಯೋಜನೆ ಉದ್ದೇಶವಾದರೂ ಏನು ಎಂದು ಪ್ರತಿಭಟನ ಕಾರರು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.