ಗಂಗಾವತಿ: ನಗರ ಸೇರಿದಂತೆ ತಾಲ್ಲೂಕಿನ ಗ್ರಾಮೀಣಭಾಗದ 19 ಪರೀಕ್ಷಾ ಕೇಂದ್ರಗಳಲ್ಲಿ ಹತ್ತನೇ ವರ್ಗದ ವಾರ್ಷಿಕ ಪರೀಕ್ಷೆ ಆರಂಭವಾಗಿದ್ದು, ಸೋಮವಾರ ನಡೆದ ಮಾತೃಭಾಷೆ ಕನ್ನಡ/ಉರ್ದು/ಇಂಗ್ಲಿಷ್ ಪರೀಕ್ಷೆ ಬಹುತೇಕ ಅಚ್ಚುಕಟ್ಟಾಗಿ ನಡೆಯಿತು.
ಸಮಯ ಮೀರಿ ಬಂದ ಮಕ್ಕಳಿಗೆ ಪರೀಕ್ಷಾಕೇಂದ್ರಕ್ಕೆ ಪ್ರವೇಶ ಕಲ್ಪಿಸದ್ದರಿಂದ ಒಂದೆರಡು ಕೇಂದ್ರದಲ್ಲಿ ಮೇಲ್ವಿಚಾರಕರೊಂದಿಗೆ ವಿದ್ಯಾರ್ಥಿ ಮತ್ತು ಪಾಲಕರ ಮಾತಿನ ಚಕಮಕಿ, ಪ್ರವೇಶಪತ್ರ ಬಂದಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳು ಬಿಇಒ ಕಚೇರಿ ಎದುರು ಪ್ರತಿಭಟನೆ ನಡೆಸಿದ ಘಟನೆಯೂ ನಡೆಯಿತು.
ಇದರ ಹೊರತಾಗಿ ಸೋಮವಾರದ ಪರೀಕ್ಷೆಗೆ ಕುಳಿತುಕೊಳ್ಳಬೇಕಿದ್ದ ಒಟ್ಟು 5249 ವಿದ್ಯಾರ್ಥಿಗಳಲ್ಲಿ
ಗಂಡು 2499, ಹೆಣ್ಣು 2550 ಸೇರಿ ಒಟ್ಟು 5049 ಮಕ್ಕಳು ಹಾಜರಾಗಿದ್ದರು. 200 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದರು.
ಮಾತಿನ ಚಕಮಕಿ: ನಗರದ ಜನತಾ ಸೇವಾ ಶಿಕ್ಷಣ ಸಂಸ್ಥೆ ಮತ್ತು ನವಲಿಯ ಸರ್ಕಾರಿ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಕೊಠಡಿ ಮೇಲ್ವಿಚಾರಕರು ಮತ್ತು ಪಾಲಕರ ಮಧ್ಯೆ ಮಾತಿನ ಚಕಮಕಿ ನಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಪರೀಕ್ಷೆ 10.30ಕ್ಕೆ ಆರಂಭವಾಗಿದ ಬಳಿಕ ಸುಮಾರು 15 ನಿಮಿಷ ತಡವಾಗಿ ಆಗಮಿಸಿದ ಒಂದೆರಡು ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲು ಮೇಲ್ವಿಚಾರಕರು ನಿರಾಕರಿಸಿದ್ದರಿಂದ ಮಾತಿನಚಕಮಕಿ ನಡೆಯಿತು. ಸ್ಥಳೀಯರ ಮಧ್ಯಸ್ಥಿಕೆಯಿಂದ ಸಮಸ್ಯೆ ಪರಿಹಾರವಾಯಿತು ಎಂದು ತಿಳಿದು ಬಂದಿದೆ.
ವಿದ್ಯಾರ್ಥಿಗಳಿಂದ ಧರಣಿ: ಪ್ರವೇಶಪತ್ರ ರವಾನೆಯಾಗದ್ದರಿಂದ ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜಿನ ಒಂಬತ್ತು ವಿದ್ಯಾರ್ಥಿಗಳು ಸೋಮವಾರ ನಡೆದ ಕನ್ನಡ ಪರೀಕ್ಷೆಯಿಂದ ವಂಚಿತರಾದರು. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಬಿಇಒ ಕಚೇರಿ ಎದುರು ಧರಣಿ ನಡೆಸಿದರು. `ಶಾಲೆಯ ಮುಖ್ಯಸ್ಥರು ನಮ್ಮನ್ನು ಉದ್ದೇಶ ಪೂರ್ವಕ ಪರೀಕ್ಷೆಯಿಂದ ವಂಚಿತಗೊಳಿಸಿದ್ದಾರೆ~ ಎಂದು ಮಹೆಬೂಬ ಪಾಶ, ರವಿ, ಶರಣಪ್ಪ, ಮಹೆಬೂಬ, ನಬೀಸಾಬ, ಸೈಯದ್, ನಾಗರಾಜ, ಕಲಂದರ್ ಮತ್ತು ಸೈಯದ್ ಶಕ್ಷಾವಲಿ ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಲೆಯ ಉಪ ಪ್ರಾಚಾರ್ಯ ಬಸವರಾಜ ಪಾಟೀಲ್, `ಶೇ, 75ಕ್ಕಿಂತ ಕಡಿಮೆ ಹಾಜರಾತಿ ಇರುವ ಮಕ್ಕಳಿಗೆ ಪರೀಕ್ಷೆಗೆ ಅವಕಾಶ ಮಾಡದಂತೆ ಸರ್ಕಾರದ ಆದೇಶವಿದೆ. ಮಕ್ಕಳ ಹಾಜರಾತಿಯ ಬಗ್ಗೆ ಅವರ ಪಾಲಕರ ಗಮನಕ್ಕೂ ಮಾಹಿತಿ ಇದೆ~ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.