ADVERTISEMENT

ಗಣರಾಜ್ಯೋತ್ಸವ ಪರೇಡಿಗೆ ಕಿನ್ನಾಳ ಕಲೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 6:54 IST
Last Updated 5 ಡಿಸೆಂಬರ್ 2012, 6:54 IST

ಕೊಪ್ಪಳ: ನವದೆಹಲಿಯಲ್ಲಿ 2013ರ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಜಿಲ್ಲೆಯ ಕಿನ್ನಾಳ ಕಲೆ ಕುರಿತ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಆಯ್ಕೆಯಾಗಿದೆ.

ರಾಜ್ಯ ವಾರ್ತಾ ಇಲಾಖೆ ಮೂಲಕ ಪ್ರದರ್ಶನಗೊಳ್ಳಲಿರುವ ಸ್ತಬ್ಧಚಿತ್ರವು ರಾಜ್ಯವನ್ನು ಪ್ರತಿನಿಧಿಸಲಿದ್ದು, ಆ ಮೂಲಕ ಈ ವಿಶ್ವವಿಖ್ಯಾತ ಕಲೆಯುವ ಅನಾವರಣಗೊಳ್ಳಲಿದೆ.

ಈಚೆಗೆ ನವದೆಹಲಿಯಲ್ಲಿ ಜರುಗಿದ ಗಣರಾಜ್ಯೋತ್ಸವದ ರಾಷ್ಟ್ರೀಯ ಮಟ್ಟದ ಸ್ತಬ್ಧಚಿತ್ರ ಆಯ್ಕೆ ಸಮಿತಿಯ ಸಭೆಯಲ್ಲಿ ರಾಜ್ಯದಿಂದ ಕಿನ್ನಾಳ ಕಲೆ ಕುರಿತ ಸ್ತಬ್ಧಚಿತ್ರವನ್ನು ಅಂತಿಮಗೊಳಿಸಲಾಗಿದೆ ಎಂದು ವಾರ್ತಾ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್, ಉಪನಿರ್ದೇಶಕ ಲಕ್ಷ್ಮೀನಾರಾಯಣ ಜಂಟಿ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದಾರೆ.

ವಿವಿಧ ಬಗೆಯ ಗೊಂಬೆಗಳ ಮೂಲಕ ಒಂದು ಹೊಸ ಬಣ್ಣದ ಲೋಕವನ್ನೇ ಸೃಷ್ಟಿ ಮಾಡುವ ಕಿನ್ನಾಳ ಗ್ರಾಮದ ಚಿತ್ರಗಾರರಿಗೆ ದೊಡ್ಡ ಇತಿಹಾಸ ಹಾಗೂ ಪರಂಪರೆ ಇದೆ.  ಕಿನ್ನಾಳ ಕಲೆಗೆ ವಿಜಯನಗರ ಸಾಮ್ರೋಜ್ಯವೇ ಮೂಲ ಕೇಂದ್ರವಾಗಿದ್ದು, ಇದರ ರಾಜಧಾನಿಯಾಗಿದ್ದ ಹಂಪಿಯ ಕಲಾ ವೈಭವಕ್ಕೆ ಈ ಕಲೆ ವಿಶೇಷ ಕಾಣಿಕೆ ನೀಡಿದೆ. 

ಬಣ್ಣಬಣ್ಣದ ಗೊಂಬೆಗಳ ಕಲೆಗಳ ನಡುವೆಯೂ ಕಿನ್ನಾಳ ಗೊಂಬೆಗಳ ಬೆಡಗು, ಬಿನ್ನಾಣ, ಗೊಂಬೆಗಳಲ್ಲಿನ ಸಮತೋಲಿತ ವಿನ್ಯಾಸ ಹಾಗೂ ಆಕಾರಗಳು, ಈ ಕಲೆಯ ವೈಶಿಷ್ಟ್ಯಕ್ಕೆ ಬೆರಗಾಗುವಂತೆ ಮಾಡುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.