ADVERTISEMENT

ಗವಿಮಠ ಜಾತ್ರೆಗೆ ಹೊಸ ಜಾಗೆ

​ಪ್ರಜಾವಾಣಿ ವಾರ್ತೆ
Published 28 ಮೇ 2012, 9:30 IST
Last Updated 28 ಮೇ 2012, 9:30 IST
ಗವಿಮಠ ಜಾತ್ರೆಗೆ ಹೊಸ ಜಾಗೆ
ಗವಿಮಠ ಜಾತ್ರೆಗೆ ಹೊಸ ಜಾಗೆ   

ಕೊಪ್ಪಳ: ನಗರದ ಪ್ರತಿಷ್ಠಿತ ಧಾರ್ಮಿಕ ಮತ್ತು ಶ್ರದ್ಧಾ ಕೇಂದ್ರವಾದ ಗವಿಸಿದ್ಧೇಶ್ವರ ಮಠದಲ್ಲಿ ಜಾತ್ರಾ ಮಹೋತ್ಸವ ಮುಕ್ತಾಯಗೊಂಡು ಐದು ತಿಂಗಳು ಕಳೆದಿವೆ. ಜಾತ್ರೆಯ ಸಂಭ್ರಮ-ಸಡಗರ ಇನ್ನೂ ಹಸಿರಾಗಿದೆ. ಆದರೆ, ಮತ್ತೊಂದು ಜಾತ್ರೆಗಾಗಿ ಶ್ರೀಮಠದಲ್ಲಿ ಸಿದ್ಧತೆಗಳು ಸದ್ದಿಲ್ಲದೇ ಸಾಗಿವೆ.

ಶ್ರೀಮಠದ ಆಡಳಿತ ಮಂಡಳಿ ಹಾಗೂ ಬಹುತೇಕ ಭಕ್ತರು ಅಂದುಕೊಂಡಂತೆ ನಡೆದರೆ ಬರುವ ಜಾತ್ರಾ ಮಹೋತ್ಸವದ ಸಂಭ್ರಮಕ್ಕಾಗಿ, ಅಂಗಡಿ-ಮುಂಗಟ್ಟುಗಳನ್ನು ಅಳವಡಿಸಲು ನೂತನ ಜಾಗೆ ಸಿದ್ಧಗೊಳ್ಳಲಿದೆ.

ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಗವಿಸಿದ್ಧೇಶ್ವರ ಮೈದಾನದಲ್ಲಿ ರಥ ಸಾಗಿ ಪುನಃ ತನ್ನ ಸ್ಥಾನ ತಲುಪುತ್ತದೆ. ಈ ರಥ ಸಾಗುವ ಮಾರ್ಗದ ಅನತಿ ದೂರದಲ್ಲಿ ಅಂಗಡಿಗಳು, ತಳ್ಳುವ ಗಾಡಿಗಳು, ಹೋಟೆಲ್‌ಗಳನ್ನು ಹಾಕಲಾಗುತ್ತದೆ.

ಒಂದೆಡೆ ರಥೋತ್ಸವಕ್ಕಾಗಿ ಜಮಾವಣೆಗೊಂಡ ಜನ. ಇನ್ನೊಂದೆಡೆ, ವಿವಿಧ ವಸ್ತುಗಳ ಖರೀದಿಗೆ, ಮೋಜಿಗಾಗಿ ಹಂಬಲಿಸುವ ಜನ. ಹೀಗಾಗಿ ವಿಪರೀತ ನೂಕು-ನುಗ್ಗಲು ಉಂಟಾಗುತ್ತದೆ.

ಇದರಿಂದ ವಾಹನಗಳ ಸಂಚಾರಕ್ಕು ತೊಂದರೆ. ಭದ್ರತಾ ವ್ಯವಸ್ಥೆ ಕಲ್ಪಿಸಲು ಪೊಲೀಸ್ ಇಲಾಖೆ ಸಹ ಹರಸಾಹಸ ಮಾಡಬೇಕು.

ಈ ನೂಕು-ನುಗ್ಗಲು ತಪ್ಪಿಸಬೇಕು. ವ್ಯಾಪಾರ-ವಹಿವಾಟು, ಮನರಂಜನೆಗಾಗಿ ಸಾಧನಗಳನ್ನು ಅಳವಡಿಸಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎಂಬುದು ಶ್ರೀಮಠದ ಬಹುದಿನಗಳ ಕನಸು. ರಥೋತ್ಸವ, ಅದಕ್ಕೂ ಮೊದಲು ಹಾಗೂ ನಂತರ ನಡೆಯುವ ಧಾರ್ಮಿಕ ವಿಧಿಗಳಿಗೆ ಅಡೆತಡೆಯಾಗದಂತೆ ಜನರ ಓಡಾಟ ನಡೆಯಬೇಕು.

ಅವರ ಸಂಭ್ರಮಕ್ಕಾಗಿ ಶ್ರೀಮಠದ ಹಿಂಭಾಗದಲ್ಲಿರುವ 30 ಎಕರೆಗೂ ಹೆಚ್ಚು ವಿಶಾಲವಾಗಿರುವ ಜಾಗೆಯಲ್ಲಿ ಲೇಔಟ್ ಮಾದರಿಯಲ್ಲಿ ನಿವೇಶನಗಳನ್ನು ರಚಿಸಬೇಕು ಎಂಬ ಯೋಜನೆಯನ್ನು ಸಿದ್ಧಪಡಿಸಲಾಗಿದೆ.

30 ಅಡಿ ಅಗಲದ ರಸ್ತೆಗಳು, 50 ಅಡಿ ಅಗಲದ ಮುಖ್ಯ ರಸ್ತೆಯನ್ನು ನಿರ್ಮಿಸಬೇಕು. ಇದರಿಂದ ಜನರ ಮತ್ತು ವಾಹನಗಳ ಓಡಾಟಕ್ಕೆ ತೊಂದರೆ ಆಗುವುದಿಲ್ಲ. ಒಂದೆಡೆ ವಾಹನಗಳ ನಿಲುಗಡೆ ವಿಶಾಲ ಜಾಗೆ ಒದಗಿಸುವುದು.
 
ಗವಿಸಿದ್ಧೇಶ್ವರ ಪದವಿ ಕಾಲೇಜು ಪಕ್ಕದಲ್ಲಿನ ರಸ್ತೆ ಮೂಲಕ ಈ ನೂತನ ಜಾತ್ರಾ ಮಹೋತ್ಸವದ ಜಾಗೆಯ ಪ್ರವೇಶ. ಜಾತ್ರೆಯಲ್ಲಿ ಸುತ್ತಾಡಿ, ಸಂಭ್ರಮಿಸಿದ ಜನ ಶ್ರೀಮಠದ ಕೆರೆಯ ಪಕ್ಕ ಸಾಗಿ ಪಾಂಡುರಂಗ ದೇವಸ್ಥಾನದ ಮುಂಭಾಗದಿಂದ ಬರುವ ರಸ್ತೆ ಮೂಲಕ ನಿರ್ಗಮಿಸಲು ಅವಕಾಶ ಕಲ್ಪಿಸಲು ಸಹ ಯೋಜಿಸಲಾಗಿದೆ.

ಇದರ ಜೊತೆಗೆ, ಅಶೋಖ ಶಿಲಾ ಶಾಸನ ಇರುವ ಗುಡ್ಡದ ಕೆಳಗಡೆ ಬಯಲು ರಂಗ ಮಂದಿರ ನಿರ್ಮಾಣ ಮಾಡುವುದು. ಇಕ್ಕೆಲಗಳಲ್ಲಿ ಗುಡ್ಡ, ಮಧ್ಯದಲ್ಲಿ ವಿಶಾಲ ಜಾಗೆ ಇರುವುದರಿಂದ ಸಾಕಷ್ಟು ಜನ ಕುಳಿತುಕೊಂಡು ಕಾರ್ಯಕ್ರಮ ಆಸ್ವಾದಿಸಲು ಸಾಧ್ಯವಾಗಲಿದೆ. ಅಲ್ಲದೇ, ಅಶೋಕನ ಶಾಸನ ಇದ್ದರೂ ಪುರಾತತ್ವ ಇಲಾಖೆಯ ನಿಮಯಗಳ ಉಲ್ಲಂಘನೆಯಾಗದಂತೆ ಕಟ್ಟಡ ನಿರ್ಮಾಣಕ್ಕೂ ಅವಕಾಶವಿದೆ ಎಂಬುದು ಗವಿಸಿದ್ಧೇಶ್ವರ ಸ್ವಾಮೀಜಿ ಅವರ ವಿಶ್ವಾಸ.

ಎಲ್ಲ ದೃಷ್ಟಿಯಿಂದಲೂ ಈ ನೂತನ ಜಾಗೆಯಲ್ಲಿ ಜಾತ್ರಾ ಮಹೋತ್ಸವದ ಕಾರ್ಯಗಳನ್ನು ನೆರವೇರಿಸುವುದು ಸೂಕ್ತ ಎಂಬ ಅಭಿಪ್ರಾಯ ಈಗಾಗಲೇ ವ್ಯಕ್ತವಾಗಿದೆ. ಶ್ರೀಮಠದ ಈ ನೂತನ ಕೈಂಕರ್ಯಕ್ಕೆ ಭಕ್ತರ ಸಹಕಾರ-ಬೆಂಬಲ ಬೇಕಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.