ADVERTISEMENT

ಗುತ್ತಿಗೆ ರದ್ದು: ವರ್ತಕರ ದೂರು

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2011, 7:00 IST
Last Updated 17 ಮಾರ್ಚ್ 2011, 7:00 IST

ಕೊಪ್ಪಳ: ಸಮಾಜ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುವ ವಸತಿ ನಿಲಯಗಳಿಗೆ ಮೂಲಭೂತ ಸಾಮಗ್ರಿ ಪೂರೈಕೆಗಾಗಿ ತಮಗೆ ನೀಡಿರುವ ಟೆಂಡರ್ ಅನ್ನು ರಾತ್ರೋರಾತ್ರಿ ರದ್ದುಗೊಳಿಸಿ, ಬೇರೆಯವರಿಗೆ ನೀಡುವ ಹುನ್ನಾರ ನಡೆದಿದೆ ಎಂದು ಆರೋಪಿಸಿ ವರ್ತಕರೊಬ್ಬರು ಮಾತಿನ ಚಕಮಕಿ ನಡೆಸಿದ ಘಟನೆ ಬುಧವಾರ ನಡೆದಿದೆ.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎನ್.ಬಿಲ್ಗಾರ್ ಅವರಿಗೆ ದೂರು ಸಲ್ಲಿಸಿದ ಇಲ್ಲಿನ ಅಶ್ವಿನಿ ಟ್ರೇಡಿಂಗ್ ಕಂಪನಿಯ ಸಾಗರ್ ಚಿಂದೆ ಎಂಬುವವರು, ಸಾಮಗ್ರಿ ಪೂರೈಸುವ ಗುತ್ತಿಗೆಯನ್ನು ತಮಗೆ ನೀಡಿರುವ ಕುರಿತಾದ ದಾಖಲೆಗಳನ್ನು ಹಾಜರು ಪಡಿಸುವಂತೆ ಪಟ್ಟು ಹಿಡಿದರು.

ಮಾ. 9ರಂದು ಜರುಗಿದ ಸಾಮಾನ್ಯ ಸಭೆಯಲ್ಲಿ ಈ ತಮಗೇ ಈ ಗುತ್ತಿಗೆ ನೀಡಬೇಕು ಎಂಬ ಬಗ್ಗೆ ಸರ್ವಾನುಮತದ ತೀರ್ಮಾನವಾಗಿದೆ. ಆದರೆ, ಈಗ ಸಂಬಂಧಪಟ್ಟ ಕಡತ ಸಿಗುತ್ತಿಲ್ಲ ಎಂಬ ನೆಪ ಹೇಳಲಾಗುತ್ತಿದೆ. ತಮಗಾಗಿರುವ ಈ ಟೆಂಡರನ್ನು ತಿದ್ದಿ, ಬೇರೆಯವರಿಗೆ ನೀಡುವ ಸಂಚು ಈ ಎಲ್ಲಾ ಬೆಳವಣಿಗೆ ಹಿಂದಡಗಿದೆ ಎಂದು ಅವರು ನಂತರ ಮಾಧ್ಯಮ ಪ್ರತಿನಿಧಿಗಳ ಮುಂದೆ ದೂರಿದರು.

ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಮೂರ್ತಿ ಅವರು ಆನೆಗೊಂದಿ ಉತ್ಸವ ತಯಾರಿ ಹಿನ್ನೆಲೆಯಲ್ಲಿ ಆನೆಗೊಂದಿಗೆ ತೆರಳಿದ್ದು, ಅವರು ಬಂದ ನಂತರ ಕಡತ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್ ಭರವಸೆ ನೀಡಿದರು.

ಸ್ಪಷ್ಟನೆ: ಈ ಪ್ರಕರಣ ಕುರಿತು ‘ಪ್ರಜಾವಾಣಿ’ ಯೊಂದಿಗೆ ಮಾತನಾಡಿದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಮೂರ್ತಿ, ಅಶ್ವಿನಿ ಟ್ರೇಡಿಂಗ್ ಕಂಪೆನಿಗೆ ಈ ಸಂಬಂಧ ಯಾವುದೇ ಗುತ್ತಿಗೆ ನೀಡಿಲ್ಲ ಹಾಗೂ ಇಡೀ ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕ ಪಾರದರ್ಶಕತೆ ಕಾಯ್ದೆ ಅನ್ವಯ ಇ-ಪ್ರೊಕ್ಯೂರ್‌ಮೆಂಟ್ ಗಾಗಿ ಟೆಂಡರ್ ಕರೆದಾಗ ಮೂರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಟೆಂಡರ್ ಅರ್ಜಿಗಳು ಸಲ್ಲಿಕೆಯಾಗಿರಬೇಕು. ಈ ಪ್ರಕರಣದಲ್ಲಿ ಕೇವಲ ಎರಡೇ ಅರ್ಜಿಗಳು ಬಂದಿದ್ದವು. ಇಂತಹ ಸಂದರ್ಭದಲ್ಲಿ ಸ್ಪರ್ಧಾತ್ಮಕ ಬೆಲೆ ನಿರ್ಧರಿಸಿವುದು ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಸದರಿ ಟೆಂಡರ್‌ಅನ್ನು ರದ್ದುಗೊಳಿಸಲಾಗಿದೆ ಎಂದು ಅವರು ಹೇಳಿದರು.

ಅಲ್ಲದೇ, ಯಾವುದೇ ನಿರ್ದಿಷ್ಟ ಕಾರಣವನ್ನು ನೀಡದೆಯೇ ಯಾವುದೇ ಟೆಂಡರ್ ಅರ್ಜಿಯನ್ನು ತಿರಸ್ಕರಿಸುವ ಅಧಿಕಾರ ತಮಗೆ ಇದೆ ಎಂದೂ ಅವರು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.