ADVERTISEMENT

ಗುರಿ ಸಾಧಿಸದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2011, 7:05 IST
Last Updated 22 ಫೆಬ್ರುವರಿ 2011, 7:05 IST

ಕೊಪ್ಪಳ:  ಜಿಲ್ಲೆಗೆ ವಿಶೇಷ ಅಭಿವೃದ್ಧಿ ಯೋಜನೆಯಡಿ ಬಿಡುಗಡೆಯಾದ ಅನುದಾನವನ್ನು ಮಾರ್ಚ್ ಅಂತ್ಯದೊಳಗೆ ಬಳಸಿಕೊಳ್ಳಬೇಕು.  ಅಲಕ್ಷ್ಯ ತೋರುವ ಅಥವಾ ಗುರಿ ಸಾಧಿಸದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ  ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್. ಮೂರ್ತಿ ಸೂಚಿಸಿದ್ದಾರೆ.ಜಿಲ್ಲಾ  ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಬಹಳಷ್ಟು ಇಲಾಖೆಗಳು ತಮಗೆ ಬಿಡುಗಡೆ ಮಾಡಿರುವ ಅನುದಾನವನ್ನು ಉಪಯೋಗಿಸಿಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸದಿರುವುದು ಕಂಡುಬಂದಿದೆ.  ವರ್ಷ ಪೂರ್ತಿಗೊಳ್ಳಲು ಒಂದು ತಿಂಗಳು ಮಾತ್ರ ಬಾಕಿ ಉಳಿದಿದ್ದು, ಮಾರ್ಚ್ ಅಂತ್ಯಕ್ಕೆ ನಿಗದಿಪಡಿಸಿದ ಗುರಿ ಸಾಧಿಸುವುದರೊಂದಿಗೆ ಸಂಪೂರ್ಣ ಅನುದಾನ ಬಳಸಿ ಇಲಾಖೆಯ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು.  ಗುರಿ ಸಾಧಿಸದ ಹಾಗೂ ಅಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಸರ್ಕಾರ ಮಹಿಳೆಯರ ಸಮಾನತೆಗಾಗಿ ವಿವಿಧ ಇಲಾಖೆಗಳಲ್ಲಿ  ಕಾರ್ಯಕ್ರಮಗಳನ್ನು ಕೈಗೊಳ್ಳಲು ಅನುದಾನ ಬಿಡುಗಡೆ ಮಾಡಿದೆ.  ಆದರೆ ಬಹಳಷ್ಟು ಇಲಾಖೆಗಳು ಮಹಿಳೆಯರಿಗೆ ಸೌಲಭ್ಯ ಒದಗಿಸುವ ಗುರಿ ಸಾಧಿಸದಿರುವುದು ಕಂಡುಬಂದಿದೆ.  ಮಾರ್ಚ್ ಅಂತ್ಯದೊಳಗೆ ಮಹಿಳಾ ಸಮಾನತೆಗಾಗಿ ನಿಗದಿಪಡಿಸಿದ ಕಾರ್ಯಕ್ರಮಗಳನ್ನು ಸಂಪೂರ್ಣ ಯಶಸ್ವಿಗೊಳಿಸುವಂತೆ ಜಿಲ್ಲಾ  ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ನಾಗರಾಜ್ ಬಿಲ್ಗಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಜಿಲ್ಲೆಯಲ್ಲಿ  ಬಹಳಷ್ಟು ಪ್ರದೇಶಗಳಲ್ಲಿ  ಫ್ಲೋರೈಡ್‌ಯುಕ್ತ ನೀರು ಸೇವನೆಯಿಂದ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ.  ಇದನ್ನು ತಪ್ಪಿಸಲು ಕೊಳವೆ ಬಾವಿಗಳನ್ನು ಕೊರೆದ ತಕ್ಷಣವೆ, ನೀರನ್ನು ಪರೀಕ್ಷೆಗೊಳಪಡಿಸಿ, ಫ್ಲೋರೈಡ್ ರಹಿತ ನೀರನ್ನು ಜನರಿಗೆ ಕುಡಿಯಲು ಒದಗಿಸುವಂತಾಗಬೇಕು ಎಂದು ಜಿಪಂ ಉಪಾಧ್ಯಕ್ಷೆ ಡಾ. ಸೀತಾ ಹಲಗೇರಿ  ಕಾರ್ಯನಿರ್ವಾಹಕ ಎಂಜಿನಿಯರ್ ಅವರಿಗೆ ಸೂಚಿಸಿದರು.

ಸಭೆಯಲ್ಲಿ  ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.  ಜಿ.ಪಂ. ಮುಖ್ಯ ಯೋಜನಾಧಿಕಾರಿ ಟಿ.ಪಿ. ದಂಡಿಗದಾಸರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ  ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.