ADVERTISEMENT

ಗೋಶಾಲೆಗಳಿಗೆ ಟ್ಯಾಂಕರ್ ನೀರು

​ಪ್ರಜಾವಾಣಿ ವಾರ್ತೆ
Published 28 ಜೂನ್ 2012, 9:25 IST
Last Updated 28 ಜೂನ್ 2012, 9:25 IST
ಗೋಶಾಲೆಗಳಿಗೆ ಟ್ಯಾಂಕರ್ ನೀರು
ಗೋಶಾಲೆಗಳಿಗೆ ಟ್ಯಾಂಕರ್ ನೀರು   

ಕುಷ್ಟಗಿ:ಮಳೆ ಅಭಾವದಿಂದಾಗಿ ತಾಲ್ಲೂಕಿನಲ್ಲಿರುವ ಗೋಶಾಲೆಗಳಲ್ಲಿ ಕುಡಿಯುವ ನೀರಿನ ಅಭಾವ ಕಾಣಿಸಿಕೊಂಡಿದೆ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಬುಧವಾರ ಇಲ್ಲಿ ಹೇಳಿದರು.

ತಾವರಗೇರಾದಲ್ಲಿನ ಏಪಿಎಂಸಿ ಮೈದಾನದಲ್ಲಿ ಇತ್ತೀಚೆಗಷ್ಟೇ ಹೆಚ್ಚುವರಿ ಗೋಶಾಲೆ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಅಲ್ಲಿಗೆ ಭೇಟಿ ನೀಡಿದ ನಂತರ ಮಾಹಿತಿ ನೀಡಿದ ಅವರು, ಜಾನುವಾರುಗಳಿಗೆ ನೀರಿನ ಕೊರತೆ ನೀಗಿಸುವ ಸಲುವಾಗಿ ಟ್ಯಾಂಕರ್‌ಗಳ ಮೂಲಕ ಸರಬರಾಜು ಮಾಡುವಂತೆ ಸಂಬಂಧಿಸಿದವರಿಗೆ ಸೂಚಿಸಿರುವುದಾಗಿ ತಿಳಿಸಿದರು.

ಅದೇ ರೀತಿ ಹೊಸಳ್ಳಿ, ಕಲಕೇರಿ ಇತರೆ ಗೋಶಾಲೆಗಳಲ್ಲಿನ ಕೊಳವೆಬಾವಿಗಳಲ್ಲಿನ ಅಂತರ್ಜಲ ಮಟ್ಟ ಕುಸಿದಿರುವುದರಿಂದ ಅಲ್ಲಿಯೂ ನೀರಿನ ಸಮಸ್ಯೆ ಉಂಟಾಗಿರುವುದು ಗಮನಕ್ಕೆ ಬಂದಿದ್ದು, ಟ್ಯಾಂಕರ್‌ಗಳ ಮೂಲಕ ಅಗತ್ಯ ಪ್ರಮಾಣದ ನೀರು ಪೂರೈಸುವಂತೆ ತಹಶೀಲ್ದಾರರಿಗೆ ತಿಳಿಸಲಾಗಿದೆ. ಬರಗಾಲದ ಹಿನ್ನೆಲೆಯಲ್ಲಿ ಗೋಶಾಲೆಯಲ್ಲಿ ನೀರು ಮತ್ತು ಮೇವಿನ ವ್ಯವಸ್ಥೆ ಬಗ್ಗೆ ನಿಗಾವಹಿಸುವಂತೆ ತಾಕೀತು ಮಾಡಲಾಗಿದೆ. ನಿರ್ಲಕ್ಷ್ಯ ವಹಿಸುವ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಜರುಗಿಸುವ ಎಚ್ಚರಿಕೆ ನೀಡಲಾಗಿದೆ ಎಂದರು.

ಇನ್ನಷ್ಟು ಗೋಶಾಲೆ: ತಾಲ್ಲೂಕಿನಲ್ಲಿ ಭೀಕರ ಬರ ಆವರಿಸಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಗೋಶಾಲೆಗಳನ್ನು ಆರಂಭಿಸುವ ಅನಿವಾರ್ಯತೆ ಇದ್ದು, ಅದರಲ್ಲೂ ತೀವ್ರ ಸಮಸ್ಯೆ ಎದುರಿಸುತ್ತಿರುವ ಜುಮಲಾಪುರ, ಹಿರೇಮನ್ನಾಪುರ ಗ್ರಾಮಗಳಲ್ಲಿ ಗೋಶಾಲೆಗಳನ್ನು ತೆರೆಯುವಂತೆ ಜಿಲ್ಲಾಧಿಕಾರಿಗೆ ತಿಳಿಸಲಾಗಿದೆ. ಆದರೆ ಮೇವಿನ ಲಭ್ಯತೆ, ಮೇವು ಸಾಗಾಣಿಕೆ ವ್ಯವಸ್ಥೆಯನ್ನು ಪರಿಶೀಲಿಸಿ ಹೆಚ್ಚುವರಿ ಗೋಶಾಲೆಗಳನ್ನು ತೆರೆಯುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿರುವುದಾಗಿ ಜಿಲ್ಲಾಧಿಕಾರಿ ಹೇಳಿದ್ದಾರೆ ಎಂದರು.

ಅಧಿಕ ಸಂಖ್ಯೆ: ತಾವರಗೇರಾದಲ್ಲಿನ ಗೋಶಾಲೆಯಲ್ಲಿ ಅತ್ಯಧಿಕ ಜಾನುವಾರುಗಳು ಬಂದಿರುವುದು ಗೊತ್ತಾಗಿದೆ. ಇತರೆ ಗೋಶಾಲೆಗಳಲ್ಲಿನ ಜಾನುವಾರುಗಳ ಸಂಖ್ಯೆ ಎರಡು ಸಾವಿರ ದಾಟಿಲ್ಲ, ಆದರೆ ತಾವರಗೇರಾದ ಗೋಶಾಲೆಯೊಂದರಲ್ಲೇ ಬುಧವಾರದ ಮಾಹಿತಿಯ ಪ್ರಕಾರ ಸುಮಾರು 4250 ಜಾನುವಾರುಗಳು ಇರುವುದು ಗೊತ್ತಾಗಿದೆ. ಅತ್ಯಧಿಕ ಸಂಖ್ಯೆ ಜಾನುವಾರುಗಳು ಬಂದಿರುವುದರಿಂದ ಅವುಗಳಿಗೆ ಅಗತ್ಯ ಪ್ರಮಾಣದಲ್ಲಿ ಮೇವು, ನೀರು ಒದಗಿಸುವುದಕ್ಕೆ ಸಿಬ್ಬಂದಿ ಪರದಾಡುತ್ತಿರುವುದು ಕಂಡುಬಂದಿದೆ.

ಮಳೆ ಅಭಾವ ಹೀಗೇ ಮುಂದುವರೆದರೆ ಜಾನುವಾರುಗಳ ಸಂಖ್ಯೆ ದುಪ್ಪಟ್ಟಾಗಲಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಕೆಲ ದಿನಗಳಿಂದ ಇದ್ದ ಮಳೆ ವಾತಾವರಣ ಬುಧವಾರ ಇರಲಿಲ್ಲ, ಕಾರ್ಮೋಡಗಳು ದಟೈಸಿದ್ದರೂ ಮಳೆ ಸಿಂಚನವಾಗದೇ ರೈತರು ನಿರಾಶೆಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.