ADVERTISEMENT

ಚುನಾವಣಾ ಭೂಮಿಯಲ್ಲಿ ನಾಟಿಯಾಗುವವರು ಯಾರು?

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2017, 8:55 IST
Last Updated 28 ಅಕ್ಟೋಬರ್ 2017, 8:55 IST

ಕೊಪ್ಪಳ: ಜಿಲ್ಲೆಯಲ್ಲಿ ಮತಫಸಲು ಪಡೆಯಲು ತೆನೆ ಹೊತ್ತ ಮಹಿಳೆ ಸಿದ್ಧಳಾಗಿದ್ದಾಳೆ. ಫಸಲು ಹೆಚ್ಚಲು ಬೇಕಾದ ಗಟ್ಟಿ ಕಾಳುಗಳ ಹುಡುಕಾಟ ನಡೆದಿದೆ. ಚುನಾವಣಾ ಭೂಮಿಯಲ್ಲಿ ನಾಟಿಯಾಗುವವರು ಯಾರು ಎಂಬುದಕ್ಕೆ ಡಿಸೆಂಬರ್‌ವರೆಗೆ ಕಾದು ನೋಡಬೇಕಿದೆ. ಇದು ಜಿಲ್ಲಾ ಜೆಡಿಎಸ್‌ನೊಳಗೆ ನಡೆದಿರುವ ಚುನಾವಣಾ ಸಿದ್ಧತೆ.

ಕಾಂಗ್ರೆಸ್‌ - ಬಿಜೆಪಿಗಳ ಅಬ್ಬರದ ನಡುವೆ ತನ್ನದೇ ಅಸ್ತಿತ್ವ ಸ್ಥಾಪಿಸಿಕೊಳ್ಳಲು ಜೆಡಿಎಸ್‌ ಪ್ರಯತ್ನಿಸುತ್ತಿದೆ. ಜೋರಾಗಿ ಅಲ್ಲದಿದ್ದರೂ ಸಣ್ಣ ಅಲೆಗಳನ್ನು ಸೃಷ್ಟಿಸುತ್ತಿದೆ.
ಕೊಪ್ಪಳ ಕ್ಷೇತ್ರದಲ್ಲಿ ಮಾತ್ರ ಚಿರಪರಿಚಿತ ಮುಖಗಳು ಆಕಾಂಕ್ಷಿಗಳ ಪಟ್ಟಿಯಲ್ಲಿ ಕಾಣುತ್ತಿದೆ. ಉಳಿದ ಕ್ಷೇತ್ರಗಳಲ್ಲಿ ತಾವು ಆಕಾಂಕ್ಷಿಗಳು ಎಂದು ಹಲವರು ಹೇಳಿಕೊಳ್ಳುತ್ತಿದ್ದಾರಾದರೂ ಅವರ ಸಿದ್ಧತೆ ಬಗ್ಗೆ ಜಿಲ್ಲಾಮಟ್ಟದ ಮುಖಂಡರಿಗೆ ಪೂರ್ಣ ವಿಶ್ವಾಸ ಮೂಡಿದಂತಿಲ್ಲ. ಹೀಗಾಗಿ ಬೇರೆ ಕಡೆ ಬದಲಾವಣೆಗಳ ಸಾಧ್ಯತೆಗಳು ಇವೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇತ್ತೀಚೆಗೆ ನಗರದಲ್ಲಿ ಆಕಾಂಕ್ಷಿಗಳ ಸಭೆ ನಡೆದಿದೆ. ಗೆಲ್ಲುವ ಸಾಧ್ಯತೆ, ಜನಪ್ರಿಯತೆ, ಮತಪಡೆಯಲು ಬೇಕಾದ ಸಂಪನ್ಮೂಲ ಇತ್ಯಾದಿ ಬಗ್ಗೆ ಮುಖಂಡರು ಸೂಕ್ಷ್ಮವಾಗಿ ಅವಲೋಕಿಸಿದ್ದಾರೆ. ಈ ಸಭೆಯಲ್ಲಿ ಕೆಲವರ ಹೆಸರುಗಳು ಕೇಳಿಬಂದಿವೆ. ಕೊಪ್ಪಳದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಪ್ರದೀಪ್‌ಗೌಡ ಮಾಲಿಪಾಟೀಲ, ಕೆ.ಎಂ.ಸೈಯದ್‌ ಮತ್ತು ಜಿಲ್ಲಾ ಕಾರ್ಯಾಧ್ಯಕ್ಷ ವೀರೇಶ್‌ ಮಹಾಂತಯ್ಯನಮಠ. ಇವರ ಪೈಕಿ ಪ್ರದೀಪ್‌ಗೌಡ ಮತ್ತು ಸೈಯದ್‌ ರೇಸ್‌ನಲ್ಲಿದ್ದಾರೆ.

ADVERTISEMENT

ಯಲಬುರ್ಗಾದಲ್ಲಿ ಶ್ರೀಪಾದಪ್ಪ ಅಧಿಕಾರಿ ಮತ್ತು ಶಿವಶಂಕರರಾವ್‌ ದೇಸಾಯಿ ಹೆಸರು ಕೇಳಿಬಂದಿದೆ. ಆದರೆ, ಇದರಲ್ಲಿ ಯಾರು ಸ್ಪರ್ಧಿಗಳಾಗುತ್ತಾರೆ ಎಂಬ ಬಗ್ಗೆ ಜಿಲ್ಲಾಮಟ್ಟದ ಮುಖಂಡರಲ್ಲಿ ಸ್ಪಷ್ಟತೆ ಇಲ್ಲ.

ಗಂಗಾವತಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ವಿರೂಪಾಕ್ಷಪ್ಪ ಹೇರೂರು, ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ರಾಘವೇಂದ್ರ ಗಂಗಾವತಿ ಆಕಾಂಕ್ಷಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ. ಜೆಡಿಎಸ್‌ನಿಂದ ಆಯ್ಕೆಯಾಗಿ ಶಾಸಕರಾಗಿ ಈಗ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಮುಂದಾಗಿರುವ ಇಕ್ಬಾಲ್‌ ಅನ್ಸಾರಿ ಅವರ ಮುಂದೆ ಶಕ್ತಿ ಪ್ರದರ್ಶನ ಮಾಡಬೇಕಾದ ಸನ್ನಿವೇಶ ಇಲ್ಲಿನ ಸ್ಪರ್ಧಾಳುಗಳದ್ದು.

ಕುಷ್ಟಗಿಯಲ್ಲಿ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಸಿ.ಎನ್‌.ಹಿರೇಮಠ, ಶಿವಪ್ಪ ನೀರಾವರಿ ಆಕಾಂಕ್ಷಿಗಳ ಸಾಲಿನಲ್ಲಿದ್ದಾರೆ. ಕನಕಗಿರಿಯಲ್ಲಿ ಅಶೋಕ ಉಮಲೂಟಿ ಮತ್ತು ಬಾಲಪ್ಪ ಆಕಾಂಕ್ಷಿಗಳಾಗಿದ್ದಾರೆ ಎಂದು ಪಕ್ಷದ ಜಿಲ್ಲಾಮಟ್ಟದ ಮುಖಂಡರು ತಿಳಿಸಿದ್ದಾರೆ.

ಚುನಾವಣಾ ಸಿದ್ಧತೆ ಇನ್ನೂ ಬಲವಾಗಬೇಕಿದೆ. ಸ್ಥಿರವಾದ ಸ್ಥಳೀಯ ನಾಯಕತ್ವ, ಜವಾಬ್ದಾರಿ ನಿಭಾಯಿಸುವಿಕೆಯ ಕೊರತೆ ಇಲ್ಲಿದೆ. ಯಾವುದೇ ಸ್ಪಷ್ಟ ನಿರ್ಧಾರ ಕೈಗೊಳ್ಳಲು ವರಿಷ್ಠರ ದಾರಿ ಕಾಯಬೇಕಾಗಿರುವುದರಿಂದ ಜಿಲ್ಲಾಮಟ್ಟದ ಮುಖಂಡರು ಪೂರ್ಣ ಪ್ರಮಾಣದಲ್ಲಿ ತೊಡಗಿಕೊಳ್ಳಲು ಆಗದ ಸನ್ನಿವೇಶವೂ ಪಕ್ಷ ಸಂಘಟನೆಯಲ್ಲಿ ಇದೆ ಎನ್ನುತ್ತಾರೆ ಕಾರ್ಯಕರ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.