ADVERTISEMENT

ಚೆಕ್‌ಡ್ಯಾಂ: ಭರದಿಂದ ನಡೆದ ನಿಗೂಢ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2012, 9:30 IST
Last Updated 10 ಜೂನ್ 2012, 9:30 IST
ಚೆಕ್‌ಡ್ಯಾಂ: ಭರದಿಂದ ನಡೆದ ನಿಗೂಢ ಕಾಮಗಾರಿ
ಚೆಕ್‌ಡ್ಯಾಂ: ಭರದಿಂದ ನಡೆದ ನಿಗೂಢ ಕಾಮಗಾರಿ   

ಗಂಗಾವತಿ: ಅರಣ್ಯ ಇಲಾಖೆಗೆ ಸಂಬಂಧಿಸಿದ ಸ್ಥಳದಲ್ಲಿ ಸ್ವತಃ ಇಲಾಖೆಯ ಸಿಬ್ಬಂದಿಗೆ ಮಾಹಿತಿಯಿಲ್ಲದಂತೆ ಕೆರೆ ನಿರ್ಮಾಣ ಕಾಮಗಾರಿಯೊಂದು ಸದ್ದಿಲ್ಲದೇ ಸಾಗಿದೆ. ನಿಗೂಢ ಕೆರೆ ನಿರ್ಮಾಣದ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯರು ದೂರು ನೀಡಿದರೂ ಎಗ್ಗಿಲ್ಲದೇ ಸಾಗಿದ ಘಟನೆ ಬೆಳಕಿಗೆ ಬಂದಿದೆ.

ತಾಲ್ಲೂಕಿನ ಮಲ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೀಸಲು ಅರಣ್ಯ ಪ್ರದೇಶವಾದ ಸರ್ವೇ ನಂಬರ್ 4ರ ರಂಗಾಪುರ-ಜಂಗ್ಲಿ ಪ್ರದೇಶದ ಉಪ್ಪಾರ ತಿಮ್ಮನ ಮೂಲೆ ಬೆಟ್ಟದಲ್ಲಿ ಅನಧಿಕೃತ ಕೆರೆ ನಿರ್ಮಾಣ ಕಾಮಗಾರಿ ನಡೆದಿದೆ ಎಂಬ ದೂರು ವ್ಯಕ್ತವಾಗಿದೆ.

ಪಂಚಾಯಿತಿಗೆ ಮಾಹಿತಿಯಿಲ್ಲ:
ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಯ ಬಗ್ಗೆ ಸಂಬಂಧಿತ ಗುತ್ತಿಗೆದಾರ ಅಥವಾ ಇಲಾಖೆ ಯಾವ ಮಾಹಿತಿ ನೀಡಿಲ್ಲ. ಯಾವ ಇಲಾಖೆಯಿಂದ ಯಾವ ಯೋಜನೆಯಡಿ ಕಾಮಗಾರಿ ನಡೆಯುತ್ತಿದೆ ಎಂಬುವುದರ ಬಗ್ಗೆಯೂ ಮಾಹಿತಿ ಇಲ್ಲ ಎಂದು ಸದಸ್ಯರು ತಿಳಿಸಿದ್ದಾರೆ.

ಅನಧಿಕೃತವಾಗಿ ನಡೆಯುತ್ತಿರುವ ಕಾಮಗಾರಿಯನ್ನು ತಡೆ ಹಿಡಿಯುವ ಉದ್ದೇಶಕ್ಕೆ ತಾಲ್ಲೂಕು ಪಂಚಾಯಿತಿಯ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕರಿಗೆ ಗ್ರಾ.ಪಂ. ಸದಸ್ಯರಾದ ಹೇಮಾವತಿ, ವೆಂಕಟಲಕ್ಷ್ಮಿ, ಲಕ್ಷ್ಮಣ ದೂರು ನೀಡಿದ್ದಾರೆ.

25 ಲಕ್ಷ ಮೊತ್ತ: ಮೀಸಲು ಅರಣ್ಯ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿರುವ ಚೆಕ್ ಡ್ಯಾಂ ನಿರ್ಮಾಣ ಮತ್ತು ಕೆರೆ ಕಾಮಗಾರಿಯನ್ನು ಉದ್ಯೋಗ ಖಾತ್ರಿಯ ಹೆಚ್ಚುವರಿ ಕ್ರೀಯಾ ಯೋಜನೆಯಲ್ಲಿ ಸೇರಿಸಿದ್ದು 25ಲಕ್ಷ ಮೊತ್ತದಲ್ಲಿ ನಿರ್ಮಾಣ ಕಾಮಗಾರಿ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಆದರೆ ಈ ಬಗ್ಗೆ ಸದಸ್ಯರ ದೂರಿನ ಮೇರೆಗೆ ಸ್ಥಳ ಪರಿಶೀಲನೆ ಮಾಡಿದ ಎನ್‌ಆರ್‌ಇಜಿಯ ಸಹಾಯಕ ನಿರ್ದೇಶಕ ಮಹಾಬಳೇಶಪ್ಪ, ಮಲ್ಲಾಪುರ ಗ್ರಾಮ ಪಂಚಾಯಿತಿಗೆ ಯಾವ ಹೆಚ್ಚುವರಿ ಕ್ರೀಯಾ ಯೋಜನೆಗೆ ಅನುಮೋದನೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತಮಗೇನು ಗೊತ್ತಿಲ್ಲ: ತಮ್ಮ ಇಲಾಖೆಗೆ ಸೇರಿದ ಸ್ಥಳದಲ್ಲಿ ಚೆಕ್ ಡ್ಯಾಂ ಮತ್ತು ಕೆರೆ ಕಾಮಗಾರಿ ನಡೆಯುತ್ತಿದ್ದರೂ `ತಮಗೇನು ಮಾಹಿತಿಯಿಲ್ಲ. ಯಾರು ತಮ್ಮನ್ನು ಸಂಪರ್ಕಿಸಿಲ್ಲ~ ಎಂದು ಅರಣ್ಯ ಇಲಾಖೆಯ ಅರಣ್ಯ ಸಂರಕ್ಷಣಾ ಅಧಿಕಾರಿ ಹನುಮಂತಯ್ಯ ತಿಳಿಸಿದ್ದಾರೆ.  

`ಪಂಚಾಯಿತಿಯಲ್ಲಿ ಠರಾವು ಆಗಿಲ್ಲ. ಹೆಚ್ಚುವರಿ ಕಾಮಗಾರಿಗೆ ಕ್ರೀಯಾ ಯೋಜನೆ ಸಿದ್ದಪಡಿಸಿಲ್ಲ. ಹಣವೂ ಬಿಡುಗಡೆಯಾಗಿಲ್ಲ. ಅತ್ತ ಅರಣ್ಯ ಇಲಾಖೆಗೂ ಮಾಹಿತಿಯಿಲ್ಲದೇ ಕಾಮಗಾರಿಯನ್ನು ಮಾಡಿ ಹಣ ಎತ್ತುವ ಸಂಚು ರೂಪಿಸಲಾಗಿದೆ ಎಂದು ಮಲ್ಲಾಪುರ ಪಂಚಾಯಿತಿ ಸದಸ್ಯರು ದೂರಿದ್ದಾರೆ.

ಇದೇ ಸರ್ವೇ ನಂಬರ್ 4ರಲ್ಲಿ ಕೆಲವರಿಂದ ಹಣ ಪಡೆದ ಹಿಂದಿನ ತಹಸೀಲ್ದಾರ ಎಲ್. ಭೀಮಾನಾಯ್ಕ ಮತ್ತು ಕಂದಾಯ ನಿರೀಕ್ಷಕ ನಾಗೇಶ ಅನಧಿಕೃತವಾಗಿ ಪಹಣಿ ವಿತರಿಸಿದ್ದ ಪ್ರಕರಣ `ಪ್ರಜಾವಾಣಿ~ಯ ವರದಿಯಿಂದ ಬಯಲಾಗಿ ಅಧಿಕಾರಿಗಳು ಅಮಾನತು ಗೊಂಡಿದ್ದರು.     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.