ADVERTISEMENT

ಜಾರ್ಜ್‌ರ ರಾಜೀನಾಮೆ ಅಗತ್ಯವಿಲ್ಲ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2017, 7:08 IST
Last Updated 30 ಅಕ್ಟೋಬರ್ 2017, 7:08 IST

ಕೋಲಾರ: ‘ಸಚಿವ ಕೆ.ಜೆ.ಜಾರ್ಜ್‌ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದ ಮಾತ್ರಕ್ಕೆ ಅವರು ರಾಜೀನಾಮೆ ಕೊಡುವ ಅಗತ್ಯವಿಲ್ಲ. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವಿರುದ್ಧ ಕೊಲೆ ಪ್ರಕರಣವೇ ದಾಖಲಾಗಿದ್ದು, ಅವರು ರಾಜೀನಾಮೆ ಕೊಟ್ಟಿದ್ದಾರೆಯೆ’ ಎಂದು ಆರೋಗ್ಯ ಸಚಿವ ಕೆ.ಆರ್‌.ರಮೇಶ್‌ಕುಮಾರ್‌ ಪ್ರಶ್ನಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಡಿವೈಎಸ್ಪಿ ಗಣಪತಿ ಸಾವಿನ ಸಂಬಂಧ ಸುಪ್ರೀಂ ಕೋರ್ಟ್‌ ತನ್ನ ಆದೇಶದಲ್ಲಿ ಜಾರ್ಜ್‌ರ ವಿಚಾರವನ್ನಾಗಲಿ ಅಥವಾ ಸಿಐಡಿ ತನಿಖೆಯ ವಿಷಯವನ್ನಾಗಲಿ ಪ್ರಸ್ತಾಪಿಸಿಲ್ಲ. ಆದರೆ, ಸಿಬಿಐನವರು ಪ್ರಥಮ ಆರೋಪಿಯಾಗಿ ಮಾಡಿದ್ದಾರೆ’ ಎಂದು ದೂರಿದರು.

‘ಸಿಐಡಿ ತನಿಖೆ ಆರಂಭ ವಾದಾಗ ಪಕ್ಷದ ಮುಖಂಡರು ಬೇಡವೆಂದರೂ ಜಾರ್ಜ್‌ ಸ್ವಇಚ್ಛೆಯಿಂದ ರಾಜೀನಾಮೆ ಕೊಟ್ಟಿದ್ದರು. ಸಿಐಡಿ ಅಧಿಕಾರಿಗಳು ಜಾರ್ಜ್‌ರ ವಿಚಾರಣೆ ನಡೆಸಿ ದೋಷಮುಕ್ತರೆಂದು ವರದಿ ನೀಡಿದ ನಂತರವಷ್ಟೇ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿ ಕೊಳ್ಳಲಾಯಿತು’ ಎಂದರು.

ADVERTISEMENT

‘ಜಾರ್ಜ್‌ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪವಿದೆ. ಆದರೆ, ಆದಿತ್ಯನಾಥ್‌ ವಿರುದ್ಧ ಕೊಲೆಯಂತಹ ಗಂಭೀರ ಆರೋಪವಿದೆ. ಜಾರ್ಜ್‌ ರಾಜೀನಾಮೆ ನೀಡಬಾರದು ಎಂದು ಸಂಪುಟ ಸಹೋದ್ಯೋಗಿಗಳು ತೀರ್ಮಾ ನಿಸಿದ್ದೇವೆ. ಮುಖ್ಯಮಂತ್ರಿ ಸಹ ಬೆಂಬಲ ಸೂಚಿಸಿದ್ದಾರೆ’ ಎಂದರು.

ಸಚಿವ ಡಿ.ಕೆ.ಶಿವಕುಮಾರ್ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಗ್ಯ ವಿಚಾರಿಸಲು ಅವರ ಮನೆಗೆ ಹೋಗಿದ್ದರು. ಇದರಲ್ಲಿ ರಾಜಕೀಯವೇನಿಲ್ಲ. ಕಾಂಗ್ರೆಸ್ ಕಾಂಗ್ರೆಸ್ಸೇ, ಜೆಡಿಎಸ್ ಜೆಡಿಎಸ್ಸೇ. ಮುಂದಿನ ಚುನಾವಣೆಯಲ್ಲೂ ಕಾಂಗ್ರೆಸ್‌ ಗೆಲುವು ಸಾಧಿಸುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.