ADVERTISEMENT

ದುರಸ್ತಿ ಕಾಣದ ತುಗ್ಗಲಡೋಣಿ ಕೆರೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 9:54 IST
Last Updated 16 ಜೂನ್ 2018, 9:54 IST
ಹನುಮಸಾಗರ ಸಮೀಪದ ತುಗ್ಗಲಡೋಣಿ ಕೆರೆ ದುರಸ್ತಿಯಾಗುದಿರುವುದರಿಂದ ಅಪಾರ ಪ್ರಮಾಣದ ನೀರು ಹರಿದು ಹೋಗಿದೆ
ಹನುಮಸಾಗರ ಸಮೀಪದ ತುಗ್ಗಲಡೋಣಿ ಕೆರೆ ದುರಸ್ತಿಯಾಗುದಿರುವುದರಿಂದ ಅಪಾರ ಪ್ರಮಾಣದ ನೀರು ಹರಿದು ಹೋಗಿದೆ   

ಹನುಮಸಾಗರ: ಗ್ರಾಮದ ಜನ ಜಾನುವಾರುಗಳಿಗೆ ನೀರು ಪೂರೈಸುತ್ತಿದ್ದ ಸಮೀಪದ ತುಗ್ಗಲಡೋಣಿ ಕೆರೆ ದುರಸ್ತಿ ಕಾಣದ ಕಾರಣ ಕೆರೆಯಲ್ಲಿ ನೀರು ನಿಲ್ಲದೆ ವ್ಯರ್ಥವಾಗಿ ಹರಿದು ಹೋಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಸುಮಾರು 9 ಎಕರೆ ವಿಸ್ತೀರ್ಣ ಹೊಂದಿರುವ ಈ ಕೆರೆಗೆ ಹತ್ತಾರು ಗ್ರಾಮಗಳಿಂದ ನೀರು ಸೇರುತ್ತದೆ. ಸುತ್ತಲಿನ ಹಳ್ಳಿಗಳಿಗೆ ದೊಡ್ಡ ಕೆರೆಯಾಗಿದ್ದು ಅಂತರ್ಜಲ ಅಭಿವೃದ್ಧಿಗೂ ಪೂರಕವಾಗಿದೆ.

ಆದರೆ, ಇಲ್ಲಿನ ಗ್ರಾಮ ಪಂಚಾಯಿತಿ ಕೆರೆ ಕಾಮಗಾರಿ, ಹೂಳೆತ್ತುವುದು ಅಥವಾ ಬೋಂಗಾ ಬಿದ್ದಿರುವ ಭಾಗಗಳನ್ನು ದುರಸ್ತಿಗೊಳಿಸುವಂತಹ ಕೆಲಸ ನಿರ್ವಹಿಸಲು ಆಸಕ್ತಿ ತೋರದಿ ರುವ ಕಾರಣ ದೊಡ್ಡ ಪ್ರಮಾಣದ ಮಳೆಯಾದರೂ ಕೆರೆಯಲ್ಲಿ ಹನಿ ನೀರು ನಿಲ್ಲದಂತಾಗಿದೆ ಎಂದು ಜನ ದೂರುತ್ತಾರೆ.

ADVERTISEMENT

ಹಿಂದಿನ ವರ್ಷ ಕೆರೆಯಲ್ಲಿ ಸಾಕಷ್ಟು ನೀರು ಸಂಗ್ರಹವಾಗಿತ್ತು. ಆದರೆ ಕೆರೆ ಒಡೆದ ಕಾರಣವಾಗಿ ನೀರು ವ್ಯರ್ಥವಾಗಿ ಹರಿದು ಹೋಗಿತ್ತು. ಆ ಸಮಯದಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಕಾರಣವಾಗಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ದುರಸ್ತಿ ಮಾಡುವ ಭರವಸೆ ನೀಡಿದ್ದರು. ಅಲ್ಲದೆ ತಾಲ್ಲೂಕು ಆಡಳಿತ ಕೆರೆಯ ಅಭಿವೃದ್ಧಿಗಾಗಿ ₹ 28 ಲಕ್ಷ ಅನುದಾನ ನೀಡುವುದಾಗಿ ಭರವಸೆಯನ್ನು ನೀಡಿತ್ತು. ಆದರೆ, ಮತ್ತೊಂದು ಮಳೆಗಾಲ ಬಂದರೂ ಒಂದು ಪೈಸೆ ಅನುದಾನ ಬರಲಿಲ್ಲ, ಸ್ಥಳಿಯ ಗ್ರಾಮ ಪಂಚಾಯಿತಿ ಕೆರೆ ಕಾಮಗಾರಿಗೆ ತಲೆಕೆಡಿಸಿಕೊಳ್ಳದಿರುವುದರಿಂದ ಕೆರೆಯ ಕಾಮಗಾರಿ ಮರೀಚಿಕೆಯಾದಂತಾಗಿದೆ ಎಂದು ಜನ ಹೇಳುತ್ತಾರೆ.

ಕೆರೆಯಲ್ಲಿ ಕಸ, ಗಿಡಮರ, ಹೂಳು, ತುಂಬಿಕೊಂಡಿದೆ. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ಬಸವರಾಜ, ನಿಂಗಪ್ಪ, ಶರಣಪ್ಪ ತುಗ್ಗಲಡೋಣಿ ವಿಷಾದ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.