ADVERTISEMENT

ನಾಡು ನುಂಗುವ ಗ್ರಾನೈಟ್ ಗಣಿಗಾರಿಕೆ!

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2011, 11:00 IST
Last Updated 21 ಅಕ್ಟೋಬರ್ 2011, 11:00 IST

ಕುಷ್ಟಗಿ: ಗಣಿ ಭೂಗರ್ಭ ಇಲಾಖೆ ನಿಯಮಗಳನ್ನು ಉಲ್ಲಂಘಿಸಿ ತಾಲ್ಲೂಕಿನ ಕಡೂರು, ಅಂಟರಠಾಣಾ ಪುರ್ತಗೇರಿ ಬಳಿ ಕಾರ್ಯನಿರ್ವಹಿಸುತ್ತಿರುವ ಗ್ರಾನೈಟ್ ಗಣಿಗಳಿಂದ ಸರ್ಕಾರಿ ಜಾಗ ಒತ್ತುವರಿಯಾಗಿದ್ದು ಊರು ಕೇರಿ ಕೆರೆ ರಸ್ತೆ, ದೇವಸ್ಥಾನಗಳನ್ನು ಲೆಕ್ಕಿಸದೇ ಮನಬಂದಂತೆ ಕಲ್ಲು ಗಣಿಗಾರಿಕೆ ನಡೆಸಿರುವುದು ಕಂಡುಬಂದಿದೆ.

ಗ್ರಾನೈಟ್ ಗಣಿಗಾರಿಕೆಯಿಂದ ಈ ಭಾಗದಲ್ಲಿನ ಎಲ್ಲ ರಸ್ತೆಗಳು ಹಾಳಾಗಿದ್ದು ಇನ್ನೂ ಕೆಲವೇ ವರ್ಷಗಳಲ್ಲಿ ರಸ್ತೆಗಳೇ ಮಾಯವಾದರೂ ಅಚ್ಚರಿ ಇಲ್ಲ ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ. ಆದರೆ ನಿಯಮಗಳನ್ನು ಉಲ್ಲಂಘಿಸಿ ಸರ್ಕಾರದ ಜಮೀನು ಮತ್ತು ಪ್ರಾಚೀನ ದೇವಸ್ಥಾನಗಳನ್ನು ಕಬಳಿಸುತ್ತಿರುವ ಗಣಿ ಮಾಲೀಕರ ವಿರುದ್ಧ ಕಠಿಣ ಕ್ರಮ ಜರುಗಿಸದೆ ಕೈಕಟ್ಟಿ ಕುಳಿತಿರುವ ಜಿಲ್ಲಾಡಳಿತದ ಕ್ರಮಕ್ಕೆ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಅಧಿಕಾರಿಗಳು ಅಕ್ರಮ ಗಣಿಗಾರಿಕೆ ನಡೆಸುವವರೊಂದಿಗೆ ಶಾಮೀಲಾಗಿರದಿದ್ದರೆ ಭಾರಿ ಪ್ರಮಾಣದಲ್ಲಿ ಅಕ್ರಮ ನಡೆಯುತ್ತಿತ್ತೆ? ಎಂಬ ಪ್ರಶ್ನೆ ಜನರದ್ದಾಗಿದೆ.

ಗಣಿಗಾರಿಕೆಯಿಂದ ಈ ಮೂರು ಗ್ರಾಮಗಳ ಜನ ರೋಸಿಹೋಗಿದ್ದಾರೆ, ಬೃಹತ್‌ಗುಂಡಿಗಳಲ್ಲಿನ ನೀರು ಮಲಿನಗೊಂಡು ಸೊಳ್ಳೆಗಳ ಸಂತತಿ ವೃದ್ಧಿಸಿದ್ದರಿಂದ ಅತಿ ಹೆಚ್ಚು ಜನ ಮಲೇರಿಯಾ ಪೀಡಿತರಾಗುತ್ತಿದ್ದಾರೆ. ಊರು, ರಸ್ತೆ ಪಕ್ಕದಲ್ಲೇ ಭಾರಿ ಪ್ರಮಾಣದಲ್ಲಿ ಸ್ಫೋಟಕಗಳನ್ನು ಸಿಡಿಸುತ್ತಿರುವುದರಿಂದ ಮನೆಗಳು ನಡುಗುತ್ತಿವೆ. ಕಲ್ಲುಗಳು ಮನೆ ಮುಂದೆ ಬಂದು ಬೀಳುತ್ತಿವೆ ಎಂದು ಹೆಸರು ಹೇಳಲು ಇಚ್ಛಿಸದ ಜನ ಭಯದಿಂದಲೇ ಅಳಲು ತೋಡಿಕೊಂಡರು.

ಕಡೂರು ಗ್ರಾಮದ ಪಕ್ಕದಲ್ಲಿ ನೀರಾವರಿ ಕೆರೆ ಇದ್ದು ಕೆರೆಯಂಗಳದಲ್ಲೇ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಮೇಲೆ ನಿಂತು ಇಣುಕಿದರೆ ತಲೆ ತಿರುವ ರೀತಿಯಲ್ಲಿ ಬೃಹತ್ ಪ್ರಮಾಣದ ಸಾಕಷ್ಟು ಆಳದ ಗುಂಡಿಗಳು ನಿರ್ಮಾಣವಾಗಿದ್ದು ಕೆರೆ ಮತ್ತು ಕಾಲುವೆ ಅಪಾಯದ ಅಂಚಿನಲ್ಲಿವೆ. ಇನ್ನೊಂದೆಡೆ ಕೆರೆ ಅಂಗಳದಲ್ಲೇ ಗಣಿಗಾರಿಕೆ ನಡೆಯುತ್ತಿರುವುದರಿಂದ ಕೆರೆಯಲ್ಲಿ ಭಾರಿಪ್ರಮಾಣದ ಹೂಳು ಸಂಗ್ರಹವಾಗುತ್ತಿದೆ.

ಈ ಭಾಗದಲ್ಲಿನ ಅನೇಕ ರಸ್ತೆಗಳ ಪಕ್ಕದಲ್ಲಿನ ಗ್ರಾನೈಟ್ ಗಣಿ ಗುಂಡಿಗಳನ್ನು ನೋಡಿದರೆ ಎದೆ ಝಲ್ ಎನಿಸುವಷ್ಟು ಅಪಾಯ ಸೂಚಿಸುತ್ತಿದ್ದು `ರಸ್ತೆಯಲ್ಲಿ ಗಣಿಗಾರಿಕೆಯೊ ಅಥವಾ ಗಣಿಗಳಲ್ಲೇ ರಸ್ತೆಗಳೊ~ ಎನ್ನುವಂತಾಗಿದೆ. ಅನೇಕ ತಿರುವುಗಳಿದ್ದು ಇಲ್ಲಿ ವಾಹನ ಚಲಾಯಿಸುವುದಕ್ಕೆ ಹೆದರಿಕೆಯಾಗುತ್ತದೆ ಎಂದು ವಾಹನ ಚಾಲಕರು ಹೇಳಿದರು.

ಕೆರೆ, ಊರು, ರಸ್ತೆಗಳನ್ನೇ `ಗುಳುಂ~ ಮಾಡುತ್ತಿರುವ ಅಕ್ರಮ ಗ್ರಾನೈಟ್ ಗಣಿಗಾರಿಕೆಯ ರಾಕ್ಷಸ ನರ್ತನಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಧಿಕಾರ ನಡೆಸಿದ ಒಬ್ಬ ಜಿಲ್ಲಾಧಿಕಾರಿಯೂ ಕಟ್ಟುನಿಟ್ಟಿನ ಕ್ರಮ ಜರುಗಿಸದಿರುವುದು ಅಚ್ಚರಿ ಮೂಡಿಸಿದೆ. ಈ ಹಿಂದೆ ಸಣ್ಣನೀರಾವರಿ ಸಚಿವರಾಗಿದ್ದ ಗೋವಿಂದ ಕಾರಜೋಳ ಅವರು ಸ್ಥಳ ಪರಿಶೀಲಿಸಿ ಕಟ್ಟುನಿಟ್ಟಿನ ಕ್ರಮಕ್ಕೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು.
 
ಆದರೆ ಯಥಾ ರೀತಿಯಲ್ಲಿ ಅಕ್ರಮ ಮುಂದುವರೆದಿದ್ದು ಅದರ ವಿರುದ್ಧ ದನಿ ಎತ್ತಿದವರ ಬಾಯಿ ಮುಚ್ಚಿಸುವುದಕ್ಕೆ ಗಣಿ ಮಾಲೀಕರು ಪೊಲೀಸ್ ಮತ್ತು ಗೂಂಡಾಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪವೂ ಈ ಭಾಗದಲ್ಲಿ ಸಂಚರಿಸಿದಾಗ ಕೇಳಿಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.