ಕೊಪ್ಪಳ:ಸಂವಿಧಾನದ 371ನೇ ಕಲಂಗೆ ತಿದ್ದುಪಡಿ ತಂದ ನಂತರ ವಿಶೇಷ ಸ್ಥಾನಮಾನ ಪಡೆಯಲಿರುವ ಹೈದರಾಬಾದ್ ಕರ್ನಾಟಕ ವ್ಯಾಪ್ತಿಗೆ ವಿಜಾಪುರ ಜಿಲ್ಲೆಯನ್ನು ಸೇರಿಸಲಾಗುವುದು ಎಂಬ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದ ಘಟನೆ ನಗರದಲ್ಲಿ ಬುಧವಾರ ನಡೆಯಿತು.
ನಗರದ ಅಶೋಕ ವೃತ್ತದಲ್ಲಿ ಸಂಜೆ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ, ಪ್ರಗತಿಪರ ಸಂಘಟನೆಗಳ ಒಕ್ಕೂಟ, ತಿರುಳ್ಗನ್ನಡ ಕ್ರಿಯಾ ಸಮಿತಿ, ಕೊಪ್ಪಳ ಜಿಲ್ಲಾ ಹೋರಾಟ ಸಮಿತಿ ಮತ್ತಿತರ ಸಂಘಟನೆಗಳ ಕಾರ್ಯಕರ್ತರು ದಿಢೀರ್ ರಸ್ತೆ ತಡೆ ನಡೆಸಿ, ಸಚಿವ ನಿರಾಣಿ ಹೇಳಿಕೆಯನ್ನು ಖಂಡಿಸಿದರು.
ಕೂಡಲೇ ಈ ಹೇಳಿಕೆಯನ್ನು ಹಿಂದಕ್ಕೆ ಪಡೆಯದಿದ್ದರೆ, ನಿರಾಣಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ಕಿತ್ತೊಗೆಯುವಂತೆ ಒತ್ತಾಯಿಸಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ವಿಠ್ಠಪ್ಪ ಗೋರಂಟ್ಲಿ, ಬಸವರಾಜ ಶೀಲವಂತರ, ಸಂತೋಷ ದೇಶಪಾಂಡೆ, ರಮೆಶ ತುಪ್ಪದ, ರಾಜಶೇಖರ ಅಂಗಡಿ, ಮಂಜುನಾಥ ಅಂಗಡಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.