ಪ್ರಜಾವಾಣಿ ವಾರ್ತೆ
ಕೊಪ್ಪಳ: ಚುನಾವಣಾ ಪೂರ್ವದಲ್ಲಿ ನೀಡಲಾದ 160 ಭರವಸೆಗಳ ಪೈಕಿ 90ನ್ನು ಕೇವಲ 9 ತಿಂಗಳ ಅವಧಿಯಲ್ಲಿ ಈಡೇರಿಸಲಾಗಿದ್ದು, ಈ ನಿಟ್ಟಿನಲ್ಲಿ ನಮ್ಮದು ನುಡಿದಂತೆ ನಡೆವ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿದರು.
ಶುಕ್ರವಾರ ಯಲಬುರ್ಗಾದಲ್ಲಿ ಗದಗ–ವಾಡಿ ರೈಲು ಮಾರ್ಗದ ಕಾಮಗಾರಿ ಶಂಕುಸ್ಥಾಪನೆ, ಕೃಷ್ಣಾ ಜಲ ಭಾಗ್ಯ ನಿಗಮದ ಕಚೇರಿ, ಹಿರೇಹಳ್ಳ ಸಂತ್ರಸ್ತರಿಗೆ ಪರಿಹಾರ ಹಾಗೂ ಹಕ್ಕುಪತ್ರ ವಿತರಣೆ ನೆರವೇರಿಸಿ ಅವರು ಮಾತನಾಡಿದರು.
ಮುಂದಿನ ಏಪ್ರಿಲ್ ವೇಳೆಗೆ ಸಹಕಾರ ಸಂಘಗಳ ಮೂಲಕ ರೈತರಿಗೆ ರೂ 3 ಲಕ್ಷದವರೆಗೆ ಬಡ್ಡಿರಹಿತ ಸಾಲ ನೀಡಲಾಗುವುದು. ಕೇಂದ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ರೈಲ್ವೆ ಸಚಿವರಾಗಿದ್ದರಿಂದ ರಾಜ್ಯಕ್ಕೆ ಹಲವಾರು ರೈಲ್ವೆ ಯೋಜನೆಗಳು ಸಿಗುವಂತಾಯಿತು. ಗದಗ –ವಾಡಿಯ 252 ಕಿ.ಮೀ ಮಾರ್ಗವನ್ನು ರೂ 1,922 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ರಾಜ್ಯ ಸರ್ಕಾರ ಭೂಮಿ ಹಾಗೂ ಯೋಜನೆಯ ಶೇ 50ರಷ್ಟು ವೆಚ್ಚವನ್ನು ಭರಿಸಲಿದೆ. ಬಹಳ ಕಾಲದಿಂದ ಈ ಮಾರ್ಗಕ್ಕೆ ಬೇಡಿಕೆಯಿತ್ತು. ಇದೀಗ ಅದು ಸಾಕಾರಗೊಳ್ಳುತ್ತಿದೆ ಎಂದು ಹೇಳಿದರು.
ಈಗಾಗಲೇ ಅಸ್ತಿತ್ವದಲ್ಲಿರುವ ಯೋಜನೆಗಳ ಬಗ್ಗೆ ಮಾತನಾಡಿದ ಅವರು, ಕೊಪ್ಪಳ ಏತ ನೀರಾವರಿ ಯೋಜನೆಗೆ ಸುಮಾರು 1,050 ಕೋಟಿ ವೆಚ್ಚ ಮಾಡಲಾಗುವುದು. ಅದರಲ್ಲಿ 12.8 ಟಿಎಂಸಿ ನೀರನ್ನು ನೀರಾವರಿಗೆ ಬಳಸಲಾಗುವುದು. ಸಾಂಪ್ರದಾಯಿಕ ಪದ್ಧತಿ ಬಿಟ್ಟು ಸೂಕ್ಷ್ಮ ನೀರಾವರಿ ಪದ್ಧತಿ ಅಳವಡಿಸಲಾಗುವುದು. ಇದರಿಂದ 2.85 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಆಗಲಿದೆ ಎಂದು ಹೇಳಿದರು.
ಮಾತಿನುದ್ದಕ್ಕೂ ಶಾಸಕ ಬಸವರಾಜ ರಾಯರಡ್ಡಿ ಅವರ ಗುಣಗಾನ ಮಾಡಿದ ಅವರು, ರಾಯರಡ್ಡಿ ಅವರಿಗೆ 5 ವರ್ಷದಲ್ಲಿ ಆಗುವ ಕೆಲಸಗಳನ್ನು ಶೀಘ್ರವೇ ಮುಗಿಸುವ ತರಾತುರಿಯಿದೆ. ಅವರು ಶಾಶ್ವತವಾಗಿ ಶಾಸಕರಾಗಿರಬೇಕು. ಅವರ ಪರಿಶ್ರಮಕ್ಕೆ ಶೀಘ್ರ ಪ್ರತಿಫಲ ಸಿಗಲಿದೆ ಎಂದು ಸೂಚ್ಯವಾಗಿ ನುಡಿದರು.
ಕೊಪ್ಪಳ ವೈದ್ಯಕೀಯ ಕಾಲೇಜಿಗೆ ಶಂಕುಸ್ಥಾಪನೆ ಕೊಪ್ಪಳ ನಗರದಲ್ಲಿ ವೈದ್ಯಕೀಯ ಕಾಲೇಜಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜು ಆರಂಭಿಸಲಾಗುವುದು. ಹಳ್ಳಿಗಾಡಿನ ಮಕ್ಕಳೂ ವೈದ್ಯರಾಗಬೇಕು. ಹಳ್ಳಿ ಮತ್ತು ಪಟ್ಟಣದ ವೈದ್ಯರು ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಬೇಕು. ನಾಲ್ಕು ಕಂದಾಯ ವಿಭಾಗಗಳಲ್ಲಿಯೂ ಸೂಪರ್ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲಾಗುವುದು ಎಂದು ನುಡಿದರು.
ತೋಟಗಾರಿಕಾ ಕಾಲೇಜು ಹಾಗೂ ಹಾಸ್ಟೆಲ್ ಕಟ್ಟಡವನ್ನೂ ಇದೇ ವೇದಿಕೆಯಲ್ಲಿ ಉದ್ಘಾಟಿಸಿದ ಅವರು, ರೈತರು ಸಮಗ್ರ ತೋಟಗಾರಿಕಾ ಪದ್ಧತಿ ಅಳವಡಿಸಿಕೊಳ್ಳಬೇಕು. ಸಿಂಗಟಾಲೂರು 2ನೇ ಹಂತದ ನೀರಾವರಿಗೆ ರೂ 43 ಕೋಟಿ, ಅಳವಂಡಿ–ಬೆಟಗೇರಿ ಏತ ನೀರಾವರಿಗೆ 63 ಕೋಟಿ ಮೀಸಲಿರಿಸಲಾಗಿದೆ. ಶೌಚಾಲಯ ನಿರ್ಮಾಣದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಕಾಳಜಿಯಿಂದ ಜಿಲ್ಲೆ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಯಲಬುರ್ಗಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೈಲ್ವೆ ಮಂಡಳಿ ಅಧ್ಯಕ್ಷ ಅರವಿಂದರ್ ಕುಮಾರ್, ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಪಿ.ಕೆ.ಸಕ್ಸೇನಾ, ಶಾಸಕರಾದ ದೊಡ್ಡನಗೌಡ ಪಾಟೀಲ್, ಇಕ್ಬಾಲ್ ಅನ್ಸಾರಿ ಭಾಗವಹಿಸಿದ್ದರು.
ಯಲಬುರ್ಗಾ ಹಾಗೂ ಕೊಪ್ಪಳದಲ್ಲಿ ನಡೆದ ಎರಡೂ ಕಾರ್ಯಕ್ರಮಗಳಲ್ಲಿ ಸಚಿವರಾದ ಎಚ್.ಕೆ.ಪಾಟೀಲ್. ಎಂ.ಬಿ.ಪಾಟೀಲ್, ಎಚ್.ಸಿ.ಮಹಾದೇವಪ್ಪ, ಶಿವರಾಜ ತಂಗಡಗಿ, ಡಾ.ಶರಣಪ್ರಕಾಶ ಪಾಟೀಲ್, ಶಾಸಕ ಬಸವರಾಜ ರಾಯರಡ್ಡಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಟಿ.ಜನಾರ್ದನ ಹುಲಿಗಿ, ಉಪಾಧ್ಯಕ್ಷೆ ಅನ್ನಪೂರ್ಣಾ ಕಂದಕೂರಪ್ಪ, ಜಿಲ್ಲಾಧಿಕಾರಿ ಕೆ.ಪಿ.ಮೋಹನರಾಜ್ ಇದ್ದರು. ಕೊಪ್ಪಳದಲ್ಲಿ ನಗರಸಭೆ ಅಧ್ಯಕ್ಷೆ ಲತಾ ವೀರಣ್ಣ ಸಂಡೂರ, ಉಪಾಧ್ಯಕ್ಷ ಅಮ್ಜದ್ ಪಟೇಲ್ ಹಾಗೂ ಇತರ ಸದಸ್ಯರು ಭಾಗವಹಿಸಿದ್ದರು.
ಸಿದ್ದರಾಮಯ್ಯ ಹೇಳಿದ್ದು...
* ಬಸವರಾಜ ರಾಯರಡ್ಡಿಗೆ ಬೇರೆ ಯಾವ ಚಟಗಳೂ ಇಲ್ಲ. ಅವರು ವರ್ಕ್‌ಆಲ್ಕೋಹಾಲಿಕ್!
* ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಕ್ಷೇತ್ರ ಅಭಿವೃದ್ಧಿ ಸಂಬಂಧಿಸಿ ಪದೇ ಪದೇ ಬಂದು ಕೇಳುತ್ತಿದ್ದರು. ಯಾವತ್ತೂ ನನ್ನನ್ನು ಮಂತ್ರಿ ಮಾಡಿ ಅಂತ ಕೇಳಿಲ್ಲ. – ಹೀಗೆ ಮಂತ್ರಿ ಸ್ಥಾನದ ಆಕಾಂಕ್ಷಿಗಳಿಗೆ ಕುಟುಕಿದರು.
* ರೈತರಿಗೆ ಹಗಲು ನಾಲ್ಕು ಗಂಟೆ, ರಾತ್ರಿ ಮೂರು ಗಂಟೆ ವಿದ್ಯುತ್ ಪೂರೈಕೆಗೆ ಕ್ರಮ
* ತೋಟಗಾರಿಕಾ ಕಾಲೇಜು ಹಾಗೂ ಹಾಸ್ಟೆಲ್ ಕಟ್ಟಡಗಳ ಉದ್ಘಾಟನೆ ಸಂಬಂಧಿಸಿ ಉದ್ಘಾಟನೆಯೋ ಅಥವಾ ಶಂಕುಸ್ಥಾಪನೆಯೋ ಎಂದು ಸಿಎಂ ಒಂದು ಕ್ಷಣ ಗೊಂದಲಕ್ಕೊಳಗಾದರು.
ಸನ್ಮಾನ
* ಯಲಬುರ್ಗಾದಲ್ಲಿ ಖಡ್ಗ, ಕೊಪ್ಪಳದಲ್ಲಿ ಬೆಳ್ಳಿ ಗದೆ ನೀಡಿ ಸಿಎಂ ಅವರನ್ನು ಸನ್ಮಾನಿಸಲಾಯಿತು.
* ಕೊಪ್ಪಳದ ಸಾರ್ವಜನಿಕ ಮೈದಾನದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಸಭಾಂಗಣದ ಸುತ್ತ ಕಾಂಗ್ರೆಸ್ ಚಿಹ್ನೆಯ ಬಂಟಿಂಗ್ಸ್ ರಾರಾಜಿಸಿದವು.
* ಕೊಪ್ಪಳದಲ್ಲಿ ಪತ್ರಿಕಾ ಛಾಯಾಗ್ರಾಹಕರು ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಸಿಎಂ ಸಮಾಧಾನಿಸಿದರು.
‘ನೇಮಕಾತಿ ಅನ್ಯಾಯ ಆಗಿಲ್ಲ’
ಸಂವಿಧಾನದ 371(ಜೆ) ಕಲಂ ಅನ್ವಯ ಮೀಸಲಾತಿ ಜಾರಿಯಲ್ಲಿ ಯಾವುದೇ ಅನ್ಯಾಯ ಆಗಿಲ್ಲ. ಎಲ್ಲವೂ ನಿಯಮ ಪ್ರಕಾರ ನಡೆಯುತ್ತಿವೆ. ನಿಗಮ ಮಂಡಳಿಗಳಿಗೆ ನೇಮಕಾತಿಯಲ್ಲಿ ಮೀಸಲಾತಿ ನಿಯಮ ಅನ್ವಯ ಆಗುವುದಿಲ್ಲ. ಅವು ಸ್ವಾಯತ್ತ ಸಂಸ್ಥೆಗಳು. ಅವರ ನಿಯಮ ಪ್ರಕಾರ ನೇಮಕ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಯಲಬುರ್ಗಾದಲ್ಲಿ ಗದಗ–ವಾಡಿ ರೈಲು ಮಾರ್ಗದ ಕಾಮಗಾರಿಗೆ ಶಂಕುಸ್ಥಾಪನೆ ಸಮಾರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ನಟ ಅಂಬರೀಷ್ ಆರೋಗ್ಯ ಸಂಬಂಧಿಸಿ ಮಾತನಾಡಿದ ಅವರು, ಅಂಬರೀಷ್ ಆರೋಗ್ಯದ ಕುರಿತು ದೆಹಲಿಯಿಂದ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ತಜ್ಞ ವೈದ್ಯರನ್ನು ಕರೆಸಲಾಗುತ್ತದೆ. ಅವರ ಸಲಹೆಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.