ADVERTISEMENT

ಪಂಚಾಯಿತಿ ಅಧ್ಯಕ್ಷ ಗಾದಿಗೆ ಪೈಪೋಟಿ?

ಅಂಗನವಾಡಿ ಕೆಲಸ ವಜಾ ಆದೇಶ ಸ್ವೀಕರಿಸಲು ಕಾರ್ಯಕರ್ತೆ ನಿರಾಕರಣೆ

ಪ್ರಜಾವಾಣಿ ವಿಶೇಷ
Published 12 ಡಿಸೆಂಬರ್ 2012, 10:12 IST
Last Updated 12 ಡಿಸೆಂಬರ್ 2012, 10:12 IST

ಕುಷ್ಟಗಿ:ಅಂಗನವಾಡಿ ಕಾರ್ಯಕರ್ತೆಯರು ಒಂದು ಹುದ್ದೆಯಲ್ಲಿ ಮಾತ್ರ ಕರ್ತವ್ಯ ನಿರ್ವಹಿಸಬೇಕು, ಅವರು ಇತರೆ ಕ್ಷೇತ್ರಗಳಲ್ಲಿ ನಿರತರಾಗುವುದನ್ನು ನಿರ್ಬಂಧಿಸುವಂತೆ ರಾಜ್ಯ ಹೈಕೋಟ್‌ನ ಸೂಚನೆಯನ್ನು ಕಡೆಗಣಿಸಿದ ಈ ತಾಲ್ಲೂಕಿನ ಕಂದಕೂರು ಗ್ರಾಮ ಪಂಚಾಯಿತಿ ಸದಸ್ಯೆಯೊಬ್ಬರು ಗುಮಗೇರಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಾಗಿಯೂ ಸೇವೆಯಲ್ಲಿ ಮುಂದುವರೆದಿರುವುದಲ್ಲದೇ ಈಗ ಅಧ್ಯಕ್ಷೆ ಗಾದಿ ಮೇಲೆ ಕಣ್ಣಿಟ್ಟಿರುವುದು ತಿಳಿದುಬಂದಿದೆ.

ಈ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕಳೆದ ಸೆಪ್ಟಂಬರ್‌ನಲ್ಲಿ ನಿರ್ದೇಶಿಸಿತ್ತು. ಸದರಿ ವಿಷಯ ಕುರಿತಂತೆ `ಪ್ರಜಾವಾಣಿ' ವರದಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೋಟಿಸ್ ನೀಡಿದ ನಂತರ ಗುಮಗೇರಿ ಗ್ರಾಮದ ಬಸಮ್ಮ ಶಿವಪುತ್ರಪ್ಪ ಮೆಣೆದಾಳ ಎಂಬುವವರು ಗ್ರಾ.ಪಂ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ ಅಂಗನವಾಡಿ ಕಾರ್ಯಕರ್ತೆ ಸ್ಥಾನ ಮಾತ್ರ ಉಳಿಸಿಕೊಂಡಿದ್ದಾರೆ.

ಆದರೆ ಅದೇ ಗ್ರಾಮದ ಇನ್ನೊಬ್ಬ ಕಾರ್ಯಕರ್ತೆ ಯಲ್ಲಮ್ಮ ಕಳಕಪ್ಪ ಪಟ್ಟೇರ ಎಂಬುವವರು ಇಲಾಖೆಯ ಅಧಿಕಾರಿಗಳ ಮೌಖಿಕ ಸೂಚನೆ ಮತ್ತು ನೋಟಿಸ್‌ಗೆ ಉತ್ತರ ಸಹ ನೀಡದೇ ಗುಮಗೇರಿಯಲ್ಲಿ ಕಾರ್ಯಕರ್ತೆ, ಕಂದಕೂರು ಗ್ರಾಪಂನಲ್ಲಿ ಸದಸ್ಯೆಯಾಗಿ ಮುಂದುವರೆದಿರುವುದು ಅಚ್ಚರಿ ಮೂಡಿಸಿದೆ.

ಈ ಮಧ್ಯೆ ಮಾತು ಕೇಳದ ಕಾರ್ಯಕರ್ತೆ ಯಲ್ಲಮ್ಮ ಅವರನ್ನು ಸೇವೆಯಿಂದ ವಜಾಗೊಳಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಂಚೆ ರಿಜಿಸ್ಟರ್ಡ್‌ ಮೂಲಕ ಕಳುಹಿಸಿದ ಆದೇಶವನ್ನು ಸ್ವೀಕರಿಸದೇ ಮರಳಿಸಿದ್ದಾರೆ. ಮಂಗಳವಾರ ಈ ಕುರಿತು ತಮ್ಮನ್ನು ಸಂಪರ್ಕಿಸಿದ `ಪ್ರಜಾವಾಣಿ'ಗೆ  ವಿವರಿಸಿದ ಸಿಡಿಪಿಒ ಎಸ್.ಎ.ಬೆಳ್ಳಿಹಾಳ, ತಾವು ಈ ವಿಷಯವಾಗಿ ನ್ಯಾಯಾಲಯದ ಮೊರೆ ಹೋಗಿರುವುದಾಗಿ ಯಲ್ಲಮ್ಮ ಮೌಖಿಕವಾಗಿ ತಿಳಿಸಿದ್ದಾರೆ, ಆದರೆ ನಮಗೆ ನ್ಯಾಯಾಲಯದ ಯಾವುದೇ ಆದೇಶ, ಮಾಹಿತಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಅಲ್ಲದೇ ಈ ಬಗ್ಗೆ ಸೂಚನೆ ನೀಡಿರುವ ಉಪನಿರ್ದೇಶಕರು ವರದಿ ಸಲ್ಲಿಸುವಂತೆ ತಿಳಿಸಿದ್ದಾರೆ, ಒಟ್ಟಾರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.

ಅಧ್ಯಕ್ಷೆ ಆಕಾಂಕ್ಷೆ: ಈ ಮಧ್ಯೆ ಗುಮಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನದ ಚುನಾವಣೆ ಡಿ.12 ರಂದು ನಡೆಯುತ್ತಿದ್ದು ಅಂಗನವಾಡಿ ಕಾರ್ಯಕರ್ತೆ ಮತ್ತು ಸದಸ್ಯೆಯಾಗಿರುವ ಯಲ್ಲಮ್ಮ ಪಟ್ಟೇರ ಅವರಿಗೂ ಚುನಾವಣಾಧಿಕಾರಿ ನೋಟಿಸ್ ತಲುಪಿಸಿದ್ದಾರೆ. ಅಲ್ಲದೇ ನ್ಯಾಯಾಲಯ ಮತ್ತು ಸರ್ಕಾರ ಒಂದು ಹುದ್ದೆಯಲ್ಲಿ ಮಾತ್ರ ಮುಂದುವರೆಯುವಂತೆ ಸೂಚಿಸಿದ್ದರೂ ಈ ಸೂಚನೆಯನ್ನು ಧಿಕ್ಕರಿಸಿರುವ ಯಲ್ಲಮ್ಮ ಈಗ ಗ್ರಾಪಂ ಅಧ್ಯಕ್ಷೆ ಹುದ್ದೆ ಗಾದಿಗೆ ತೀವ್ರ ಪೈಪೋಟಿ ನಡೆಸಿರುವುದು ಎಷ್ಟರಮಟ್ಟಿಗೆ ಸರಿ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.