ADVERTISEMENT

ಪಾಲಕರ ನಿರ್ಲಕ್ಷ್ಯ: ಶಿಕ್ಷಣ ವಂಚಿತ ಮಕ್ಕಳು

ಮುಖ್ಯವಾಹಿನಿಗೆ ಕರೆತರಲು ಇಲಾಖೆಯ ಹರಸಾಹಸ

ಶ್ರಿನಿವಾಸ ಎಂ.ಬಿ.ಬೆಂಗಳೂರು .
Published 1 ಮೇ 2014, 9:05 IST
Last Updated 1 ಮೇ 2014, 9:05 IST

ಗಂಗಾವತಿ: ಮಕ್ಕಳ ಮೂಲ ಹಕ್ಕುಗಳನ್ನು ಕಾಪಾಡುವ ಉದ್ದೇಶಕ್ಕೆ ಕೇಂದ್ರ ಸರ್ಕಾರ ಜಾರಿಗೆ ತಂದ ‘ಕಡ್ಡಾಯ ಶಿಕ್ಷಣ ಹಕ್ಕು’ ಅನುಷ್ಠಾನದ ಬಳಿಕವೂ ಶಿಕ್ಷಣದ ಮುಖ್ಯವಾಹಿನಿಯಿಂದ ದೂರ ಉಳಿಯುತ್ತಿರುವ ಮಕ್ಕಳ ಸಂಖ್ಯೆ ತಾಲ್ಲೂಕಿನಲ್ಲಿ ಹೆಚ್ಚಾಗುತ್ತಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.

ಸರ್ಕಾರ ಜಾರಿಗೆ ತಂದ ಕ್ಷೀರಭಾಗ್ಯ, ಮಧ್ಯಾಹ್ನದ ಬಿಸಿಯೂಟ, ಸಮವಸ್ತ್ರ, ಸೈಕಲ್‌, ಪಠ್ಯಪುಸ್ತಕ, ಶೈಕ್ಷಣಿಕ  ಪ್ರವಾಸ, ನೋಟ್‌ಬುಕ್‌, ಕೈಚೀಲ, ವಿದ್ಯಾರ್ಥಿ ವೇತನ, ದಿನಕ್ಕೆ ₨2  ಪ್ರೋತ್ಸಾಹ ಧನದಂತಹ ಯಾವ ಯೋಜನೆಯೂ ಪಾಲಕರನ್ನು ಮನಮುಟ್ಟುವಲ್ಲಿ ಸಫಲವಾಗಿಲ್ಲ.

ಪರಿಣಾಮ ತಾಲ್ಲೂಕಿನ 8 ಹೋಬಳಿಯಲ್ಲಿ ತಲಾ 35ರಿಂದ 50ಕ್ಕೂ ಹೆಚ್ಚು 6 ರಿಂದ 14 ವಯೋಮಾನದ ಮಕ್ಕಳು ಶಾಲೆಯಿಂದ ದೂರ ಉಳಿದಿರುವ ಮಾಹಿತಿ ಶಿಕ್ಷಣ ಇಲಾಖೆ ನಡೆಸಿದ 2013–14ನೇ ಶೈಕ್ಷಣಿಕ ಸಾಲಿನ ಸಮೀಕ್ಷೆಯಿಂದ ಬಹಿರಂಗವಾಗಿದೆ.

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮತ್ತೆ ಶಿಕ್ಷಣದ ಮುಖ್ಯವಾಹಿನಿಗೆ ತರುವ ಉದ್ದೇಶಕ್ಕೆ ಇಲಾಖೆ, ಏಪ್ರಿಲ್‌ 22 ರಿಂದ ತಾಲ್ಲೂಕಿನಲ್ಲಿ ಆರಂಭಿಸಿದ ಪ್ರಸಕ್ತ ಸಾಲಿನ ‘ಸೇತುಬಂಧ–ಚಿಣ್ಣರ ಅಂಗಳ’ಕ್ಕೆ ದಾಖಲಾಗುವ ಮಕ್ಕಳು ನಾಲ್ಕಾರು ದಿನಕ್ಕೇ ನಾಪತ್ತೆಯಾಗುತ್ತಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಪತ್ರ ನೀಡಿದ ಪಾಲಕರು: ಆರ್ಥಿಕ ದುಃಸ್ಥಿತಿ, ಆದಾಯದ ಮೂಲ, ಆಗಾಗ ಗುಳೆ ಹೋಗುವುದು, ಹೆಣ್ಣು ಮಕ್ಕಳ ಸಮಸ್ಯೆ, ವಯಸ್ಸಿನ ಅಂತರ ಹೀಗೆ ನಾನಾ ಕಾರಣಗಳನ್ನು ನಿಡುತ್ತಿರುವ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎನ್ನಲಾಗಿದೆ.

ಶಿಕ್ಷಣದಿಂದ ವಂಚಿಸುವುದು ಮಕ್ಕಳ ಹಕ್ಕು ಉಲ್ಲಂಘನೆಯಾಗಲಿದ್ದು, ಕಡ್ಡಾಯವಾಗಿ ಶಾಲೆಗೆ ಕಳುಹಿಸಿ ಎಂದು
ಶಿಕ್ಷಕರು ಒತ್ತಾಯ ಮಾಡಿದ್ದಕ್ಕೆ ಹಿರೇಜಂತಕಲ್‌ ಕ್ಲಸ್ಟರ್‌ ವ್ಯಾಪ್ತಿಯೊಂದರಲ್ಲೇ 20ಕ್ಕೂ ಹೆಚ್ಚು ಪಾಲಕರು ‘ಮಕ್ಕಳನ್ನು ಶಾಲೆಗೆ ಕಳಿಸಲಾರೆವು’ ಎಂದು ಇಲಾಖೆಗೆ ಪತ್ರ ಬರೆದುಕೊಟ್ಟಿರುವ ಅಂಶ ಬಯಲಿಗೆ ಬಂದಿದೆ.

ನಾಲ್ವರು ದೇವದಾಸಿಯರು ಶಿಕ್ಷಣ ಇಲಾಖೆಗೆ ಲಿಖಿತ ಪೂರ್ವಕ ನೀಡಿದ ಪತ್ರಗಳು ‘ಪ್ರಜಾವಾಣಿ’ಗೆ ಲಭಿಸಿದ್ದು, ಕಾನೂನು ಕ್ರಮ ಎದುರಿಸಲೂ ಸಿದ್ದವಿದ್ದೇವೆ. ಆದರೆ ಯಾವ ಕಾರಣಕ್ಕೂ ನಮ್ಮ ಮಕ್ಕಳನ್ನು ಶಾಲೆಗೆ ಕಳಿಸಲಾರೆವು’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಪಾಲಕರ ನಿರಾಸಕ್ತಿ
ಶಾಲೆಯಿಂದ ಯಾವ ಮಗುವು ಹೊರಗುಳಿಯದಂತೆ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗಿದೆ. ಆದರೆ ಪಾಲಕರ ನಿರಾಸಕ್ತಿಯಿಂದ ಶಿಕ್ಷಣ ವಂಚಿತ ಮಕ್ಕಳ ಸಂಖ್ಯೆ ಹೆಚ್ಚುತ್ತಲಿದೆ. ಕಾನೂನು ಕ್ರಮಕ್ಕೆ ಅವಕಾಶವಿದೆ. ಆದರೆ ಪಾಲಕರ ಆರ್ಥಿಕ ಸ್ಥಿಯ ಬಗ್ಗೆಯೂ ಮಾನವೀಯತೆ ಅನಿವಾರ್ಯ. ಈ ಬಗ್ಗೆ  ಸಂಬಂಧಿತ ಇಲಾಖೆಗೆ ವರದಿ ಸಲ್ಲಿಸಿ ಗಮನ ಸೆಳೆಯಲಾಗುವುದು.
–ವಿಜಯಕುಮಾರ ಬಾರಕೇರ, ಕ್ಷೇತ್ರ ಶಿಕ್ಷಣಾಧಿಕಾರಿ, ಗಂಗಾವತಿ
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.