ADVERTISEMENT

ಪುರಸಭೆಯಿಂದ ಯದ್ವಾತದ್ವಾ ರಸ್ತೆ ವಿಸ್ತರಣೆ- ದೂರು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 6:20 IST
Last Updated 16 ಸೆಪ್ಟೆಂಬರ್ 2011, 6:20 IST

ಕುಷ್ಟಗಿ:  ಪಟ್ಟಣದ ನಾಲ್ಕನೇ ವಾರ್ಡ್‌ನ ವಿಷ್ಣುತೀರ್ಥ ನಗರದಲ್ಲಿ ಪುರಸಭೆ ನಡೆಸುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಅಸಮರ್ಪಕ ರೀತಿಯಲ್ಲಿ ನಡೆದಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ನೆರೆಬೆಂಚಿ  ಹಳೆ ರಸ್ತೆ ಹಾಗೂ ವಾಹೀದಅಲಿಯವರ ಮನೆ ಹಿಂದಿನ ರಸ್ತೆ ಸೇರಿ ಎಸ್.ಎಫ್.ಸಿ ಅನುದಾನದ ರೂ 9 ಲಕ್ಷ ವೆಚ್ಚದಲ್ಲಿ ಮೆಟ್ಲಿಂಗ್ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು ಟೆಂಡರ್ ಪಡೆದಿರುವ ಮಲ್ಲಿಕಾರ್ಜುನ ಮಸೂತಿ ಎಂಬ ಗುತ್ತಿಗೆದಾರರು ಕಾಮಗಾರಿ ನಿರ್ವಹಿಸುತ್ತಿದ್ದಾರೆ.

ವಿದ್ಯುತ್ ಕಂಬಗಳು ಮತ್ತು ಸಪೋರ್ಟ್ ವೈರಗಳು ರಸ್ತೆಯಲ್ಲಿದ್ದರೂ ಅವುಗಳನ್ನು ಸ್ಥಳಾಂತರಿಸದೇ ಕೆಲಸ ನಿರ್ವಹಿಸುತ್ತಿರುವುದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ. ಅಲ್ಲದೇ ಸದರಿ ರಸ್ತೆಯಲ್ಲಿ 13 ಅಡಿ ಅಗಲದಲ್ಲಿ ಕೆಲಸ ನಡೆಬೇಕಿದ್ದರೂ ವಾಸ್ತವದಲ್ಲಿ ಕಡಿಮೆ ಅಗಲದಲ್ಲಿ ಕೆಲಸ ನಡೆಸಲಾಗುತ್ತಿದೆ. ಕೆಲಸ ಆರಂಭಗೊಂಡು ವಾರ ಕಳೆದರೂ ಪುರಸಭೆಯಲ್ಲಿರುವ ಸಹಾಯಕ ಎಂಜಿನಿಯರ್ ಮತ್ತು ಕಿರಿಯ ಎಂಜಿನಿಯರ್‌ಗಳಲ್ಲಿ ಒಬ್ಬರೂ ಸ್ಥಳ ಮತ್ತು ಕಾಮಗಾರಿ ಪರಿಶೀಲನೆ ನಡೆಸದ ಕಾರಣ ಕಳಪೆ ಅಷ್ಟೇ ಅಲ್ಲ ಕಾಮಗಾರಿ ಬೇಕಾಬಿಟ್ಟಿಯಾಗಿ ನಡೆಯುತ್ತಿದೆ ಎಂದು ದೂರಿದ್ದಾರೆ.

ಎಂಜಿನಿಯರ್ ಹೇಳಿಕೆ: ಈ ಕುರಿತು ವಿವರಿಸಿದ ಸಹಾಯಕ ಎಂಜಿನಿಯರ್ ಕೆ.ಎಂ.ಖಾಜಿ, ರಸ್ತೆ 13 ಅಡಿ ಅಗಲದಲ್ಲಿ ನಡೆಯಲೇ ಬೇಕು, ಇಲ್ಲದಿದ್ದರೆ ಸಂಬಂಧಿಸಿದವರ ಮೇಲೆ ಅಗತ್ಯ ಕ್ರಮ ಜರುಗಿಸುತ್ತೇವೆ ಎಂದರು. ಆದರೆ ಕೆಲಸ ಮುಗಿಯುವ ಹಂತ ತಲುಪಿದ್ದರೂ ಕಂಬಗಳನ್ನು ಸ್ಥಳಾಂತರಿಸಿದ ನಂತರ ರಸ್ತೆ ಕೆಲಸ ಆರಂಭಗಾಗುತ್ತದೆ ಎಂದು ಹೇಳುವ ಮೂಲಕ ಎಂಜಿನಿಯರ್ ಖಾಜಿ ಅಚ್ಚರಿ ಮೂಡಿಸಿದರು. ಅಲ್ಲದೇ ಕಂಬಗಳನ್ನು ಸ್ಥಳಾಂತರಿಸುವುದಕ್ಕೆ ಜೆಸ್ಕಾಂಗೆ ಇನ್ನೂ ಅರ್ಜಿ ಸಲ್ಲಿಸಿಲ್ಲ ಎಂದರು.ತಾವು ಜಿಲ್ಲಾಧಿಕಾರಿಗಳು ನಡೆಸಿದ ಸಭೆಯಲ್ಲಿ ಭಾಗವಹಿಸಿದ್ದರಿಂದ ಗುರುವಾರ ಸ್ಥಳಕ್ಕೆ ಭೇಟಿ ನೀಡಿರಲಿಲ್ಲ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.