ADVERTISEMENT

‘ಪ್ರಚಾರಕ್ಕೆ ಧಾರ್ಮಿಕ ಸ್ಥಳ ಬಳಸುವಂತಿಲ್ಲ’

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2018, 10:21 IST
Last Updated 5 ಏಪ್ರಿಲ್ 2018, 10:21 IST

ಕೊಪ್ಪಳ: 'ಚುನಾವಣಾ ನೀತಿ ಸಂಹಿತೆ ಪಾಲಿಸುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ರಾಜಕೀಯ ಮುಖಂಡರು ಯಾವುದೇ ಪೂಜಾ ಹಾಗೂ ಧಾರ್ಮಿಕ ಸ್ಥಳಗಳನ್ನು ಪ್ರಚಾರ ಕಾರ್ಯಕ್ಕೆ ಬಳಸುವಂತಿಲ್ಲ' ಎಂದು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಸಿ.ಡಿ. ಗೀತಾ ಹೇಳಿದರು.ನಗರದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬುಧವಾರ ವಿಧಾನಸಭೆ ಚುನಾವಣೆ ಸಂಬಂಧ ಕ್ಷೇತ್ರದಲ್ಲಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸುವ ಕುರಿತು ಫ್ಲೈಯಿಂಗ್ ಸ್ಕ್ವಾಡ್, ಸೆಕ್ಟರ್ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

'ಚುನಾವಣಾ ಕರ್ತವ್ಯದಲ್ಲಿ ನಿರಂತರವಾಗಿ ಅಧಿಕಾರಿಗಳು ತೊಡಗಿಸಿಕೊಳ್ಳಬೇಕಿದೆ. ತಾಲ್ಲೂಕು ತಹಶೀಲ್ದಾರ್‌ ಕಚೇರಿಯಲ್ಲಿ ನಿಯಂತ್ರಣ ಕೊಠಡಿ ತೆರೆಯಲಾಗಿದೆ. 08539-222 241 ದೂರವಾಣಿಗೆ ಯಾವುದೇ ದೂರು ಬಂದಲ್ಲಿ ಸ್ವೀಕರಿಸಿ ಕಾರ್ಯನಿರ್ವಹಿಸಬೇಕು. ರಾತ್ರಿ 10ರ ನಂತರ ಧ್ವನಿವರ್ಧಕ ಬಳಸುವಂತಿಲ್ಲ. ನಾಟಕ ಪ್ರದರ್ಶನಗಳಿದ್ದಲ್ಲಿ, ರಾತ್ರಿ 10ರ ಒಳಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು' ಎಂದರು.

'ಕಾರ್ಯಕ್ರಮ, ಮೆರವಣಿಗೆಯಂತಹ ಸಂದರ್ಭಗಳಲ್ಲಿ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ 1 ಗಂಟೆ ಮುಂಚಿತವಾಗಿ ಸಭೆ ನಡೆಯುವ ಸ್ಥಳದಲ್ಲಿ ಹಾಜರಿದ್ದು ಕ್ಯಾಮೆರಾದಲ್ಲಿ ನಿಮ್ಮ ಪರಿಚಯ ಹೇಳಿಕೊಂಡು ಅಲ್ಲಿ ಎಷ್ಟು ಟೇಬಲ್ ಎಷ್ಟು ಕುರ್ಚಿ ಇದೆ. ಎಲ್ಲಾ ವಿವರಗಳನ್ನು ನೀಡುವ ಮೂಲಕ ಚಿತ್ರೀಕರಿಸಬೇಕು' ಎಂದರು.'ಅಭ್ಯರ್ಥಿಗಳ ಚುನಾವಣಾ ವೆಚ್ಚ ₹ 28 ಲಕ್ಷ ಮೀರಬಾರದು. ಬೈಕ್ ರ‍್ಯಾಲಿಯಲ್ಲಿ 10 ವಾಹನಗಳಿಗಿಂತ ಹೆಚ್ಚಿನ ವಾಹನ ಇದ್ದರೆ ಅದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಒಬ್ಬ ಅಭ್ಯರ್ಥಿಗೆ 3 ವಾಹನಗಳನ್ನು ಮಾತ್ರ ಪ್ರಚಾರಕ್ಕಾಗಿ ಬಳಸಬಹುದು. ಕೆಡಿಪಿ ಸಭೆಗಳನ್ನು ನಡೆಸುವಂತಿಲ್ಲ. ಪ್ರಚಾರ ವೇಳೆಯಲ್ಲಿ ಹಣ, ಉಡುಗೊರೆ, ಹಂಚಿಕೆ ಕಂಡುಬಂದರೆ ಪ್ಲೈಯಿಂಗ್ ಸ್ಕ್ವಾಡ್ ಹಾಗೂ ವಿಡಿಯೊಗ್ರಫಿ ಟೀಮ್‍ಗೆ ತಿಳಿಸಬೇಕು' ಎಂದು ಹೇಳಿದರು.'ವಿವಿಧ ಇಲಾಖೆಗಳ ಅನುಷ್ಠಾನ ಅಧಿಕಾರಿಗಳು ಯಾವುದೇ ಹೊಸ ಕಾಮಗಾರಿ ಆರಂಭಿಸುವಂತಿಲ್ಲ’ ಎಂದರು.ಸಹಾಯಕ ಚುನಾವಣಾಧಿಕಾರಿ ಗುರುಬಸವರಾಜ, ನಗರಠಾಣೆಯ ಪಿಐ ರವಿ ಉಕ್ಕುಂದ, ಗ್ರಾಮೀಣ ಠಾಣೆಯ ಪಿಎಸ್ಐ ಭೀಮಣ್ಣ ಸೂರೆ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.