ADVERTISEMENT

ಪ್ರಶ್ನೆ ಪತ್ರಿಕೆ ಬಹಿರಂಗ: ಮರು ಪರೀಕ್ಷೆ ನಾಳೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2013, 9:41 IST
Last Updated 10 ಜೂನ್ 2013, 9:41 IST

ಕೊಪ್ಪಳ: ಬಿಎ 6ನೇ ಸೆಮಿಸ್ಟರ್‌ನ ಐಚ್ಛಿಕ ಶಿಕ್ಷಣ ಶಾಸ್ತ್ರದ ಪ್ರಶ್ನೆಪತ್ರಿಕೆ ಪರೀಕ್ಷೆ ಆರಂಭಗೊಳ್ಳುವ ಎರಡು ಗಂಟೆ ಮುಂಚೆ ಬಹಿರಂಗಗೊಂಡಿರುವ ಘಟನೆ ಭಾನುವಾರ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.

`ಭಾರತದಲ್ಲಿ ಶಿಕ್ಷಣದ ಐತಿಹಾಸಿಕ ಅಭಿವೃದ್ಧಿ' ಎಂಬ ವಿಷಯದ 8ನೇ ಪ್ರಶ್ನೆಪತ್ರಿಕೆ ಬಹಿರಂಗಗೊಂಡಿದ್ದು, ಸದರಿ ವಿಷಯದ ಮರು ಪರೀಕ್ಷೆಯನ್ನು ಜೂ. 11ರಂದು ನಿಗದಿಗೊಳಿಸಿ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಆದೇಶ ಹೊರಡಿಸಿದೆ.

ಘಟನೆ ವಿವರ: ಇಂದು ಬಿಎ 6ನೇ ಸೆಮಿಸ್ಟರ್‌ನ ಕೊನೆಯ ಪರೀಕ್ಷೆ ಇತ್ತು. ಆದರೆ, ಪರೀಕ್ಷೆಗೂ ಮುನ್ನ ಪ್ರಶ್ನೆ ಪತ್ರಿಕೆ ಬಹಿರಂಗಗೊಂಡಿದ್ದರಿಂದ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗೊಂದಲ ಸೃಷ್ಟಿಯಾಯಿತು.

ಕೈ ಬರಹದಲ್ಲಿದ್ದ ಪ್ರಶ್ನೆಪತ್ರಿಕೆ ಮಾಧ್ಯಮ ಪ್ರತಿನಿಧಿಗಳಿಗೆ ಲಭ್ಯವಾಗಿತ್ತಲ್ಲದೇ, ಬಹಿರಂಗಗೊಂಡಿದ್ದ ಪ್ರಶ್ನೆಪತ್ರಿಕೆಯನ್ನು ಕಾಲೇಜಿನ ಪ್ರಾಚಾರ್ಯ ತಿಮ್ಮಾರೆಡ್ಡಿ ಮೇಟಿ ಅವರಿಗೂ ಪ್ರದರ್ಶಿಸಲಾಯಿತು.

ನಂತರ, ವಿಶ್ವವಿದ್ಯಾಲಯದಿಂದ ರವಾನೆಯಾಗಿದ್ದ ಪ್ರಶ್ನೆ ಪತ್ರಿಕೆ ಲಕೋಟೆಯನ್ನು ಪ್ರಾಚಾರ್ಯ ತಿಮ್ಮಾರೆಡ್ಡಿ ಮಾಧ್ಯಮ ಪ್ರತಿನಿಧಿಗಳ ಸಮ್ಮುಖದಲ್ಲಿಯೇ ತೆರೆದರಲ್ಲದೇ, ಕೈ ಬರಹದಲ್ಲಿದ್ದ ಪ್ರಶ್ನೆ ಪತ್ರಿಕೆಯೊಂದಿಗೆ ತುಲನೆ ಸಹ ಮಾಡಿದರು.

ವಿಶ್ವವಿದ್ಯಾಲಯದಿಂದ ಬಂದಿದ್ದ ಪ್ರಶ್ನೆ ಪತ್ರಿಕೆಯಲ್ಲಿದ್ದ ಶೇ 80ರಷ್ಟು ಪ್ರಶ್ನೆಗಳು ಕೈ ಬರಹದಲ್ಲಿದ್ದ ಬಹಿರಂಗಗೊಂಡಿದ್ದ ಪ್ರಶ್ನೆ ಪತ್ರಿಕೆಯಲ್ಲಿ ಇರುವುದು ಸಹ ಪ್ರಾಚಾರ್ಯರಿಗೆ ಮನದಟ್ಟಾಯಿತು.

ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ತಿಮ್ಮಾರೆಡ್ಡಿ, ಸದರಿ ಪ್ರಶ್ನೆ ಪತ್ರಿಕೆ ನಮ್ಮ ಕಾಲೇಜಿನಲ್ಲಿ ಬಹಿರಂಗಗೊಂಡಿಲ್ಲ ಎಂದು ಹೇಳಿದರು.
`ಜಿಲ್ಲಾ ಸಶಸ್ತ್ರ ಪಡೆ ಪೊಲೀಸರ ಕಾವಲು ಇರುವ ಕೊಠಡಿಯಲ್ಲಿ ಸದರಿ ಪ್ರಶ್ನೆ ಪತ್ರಿಕೆಗಳನ್ನು ಇರಿಸಲಾಗಿದೆ. ಹೀಗಾಗಿ ಪ್ರಶ್ನೆ ಪತ್ರಿಕೆ ಕಾಲೇಜಿನಲ್ಲಿ ಬಹಿರಂಗಗೊಂಡಿಲ್ಲ' ಎಂದೂ ಹೇಳಿದರು.

ಈ ವಿಷಯವನ್ನು ವಿಶ್ವವಿದ್ಯಾಲಯದ ಗಮನಕ್ಕೆ ತರಲಾಗಿದೆ. ಪ್ರಶ್ನೆ ಪತ್ರಿಕೆ ಬಹಿರಂಗೊಂಡಿರುವ ಹಿನ್ನೆಲೆಯಲ್ಲಿ ಸದರಿ ವಿಷಯದ ಮರು ಪರೀಕ್ಷೆಯನ್ನು ಜೂ. 11ರಂದು ಬೆಳಿಗ್ಗೆ 9 ಗಂಟೆಗೆ ನಡೆಸುವಂತೆ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವ ರಂಗರಾಜ ವನದುರ್ಗ ಸೂಚನೆ ನೀಡಿದ್ದಾರೆ. ಈ ವಿಷಯವನ್ನು ಬಿಎ 6ನೇ ಸೆಮಿಸ್ಟರ್‌ನ 15 ಜನ ವಿದ್ಯಾರ್ಥಿಗಳ ಗಮನಕ್ಕೂ ತರಲಾಗಿದೆ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.