ADVERTISEMENT

ಪ್ರಾಣಬಿಟ್ಟರೂ ಭೂಮಿ ಬಿಡೋಲ್ಲ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2011, 9:50 IST
Last Updated 12 ಏಪ್ರಿಲ್ 2011, 9:50 IST
ಪ್ರಾಣಬಿಟ್ಟರೂ ಭೂಮಿ ಬಿಡೋಲ್ಲ
ಪ್ರಾಣಬಿಟ್ಟರೂ ಭೂಮಿ ಬಿಡೋಲ್ಲ   

ಯಲಬುರ್ಗಾ: ಪ್ರಾಣ ಬಿಟ್ಟರೂ ಭೂಮಿ ಬಿಡೋಲ್ಲ. ನಮ್ಮ ಜಮೀನನ್ನು ಕಸಿದುಕೊಂಡರೆ ಆತ್ಮಹತ್ಯೆಯೇ ಮುಂದಿನ ಹೆಜ್ಜೆ ಎಂದು 100 ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕಾಗಿ ಸರ್ಕಾರ ನೀರಾವರಿ ಜಮೀನನ್ನು ವಶಪಡಿಸಿಕೊಂಡಿದ್ದನ್ನು ವಿರೋಧಿಸಿ ಉಪವಾಸ ನಡೆಸುತ್ತಿರುವ ರೈತರು ದೃಢವಾಗಿ ನುಡಿದರು.

ತಹಸೀಲ್ದಾರ್ ಕಚೇರಿ ಎದುರು ಸೋಮವಾರದಿಂದ ಅನಿರ್ದಿಷ್ಟಕಾಲದ ಉಪವಾಸ ಸತ್ಯಾಗ್ರಹ ಆರಂಭಿಸಿರುವ ರೈತರು, ನಮ್ಮ ಭೂಮಿ ನಮಗೆ ಬಿಟ್ಟುಕೊಡಿ; ಬಡ ರೈತರ ಪ್ರಾಣ ಉಳಿಸಿ ಎಂದು  ರೋಧಿಸುತ್ತಿದ್ದರು.

ಕಳೆದ ನಾಲ್ಕೈದು ವರ್ಷಗಳಿಂದಲೂ 100 ಹಾಸಿಗೆ ಸರ್ಕಾರಿ ಆಸ್ಪತ್ರೆಯ ನಿರ್ಮಾಣಕ್ಕಾಗಿ ಜಮೀನು ನೀಡಲು ತೀವ್ರ ವಿರೋಧಿಸುತ್ತಾ ಆತ್ಮಹತ್ಯೆಗೆ ಪ್ರಯತ್ನಪಟ್ಟರೂ ಕೆಲವರ ವೈಯಕ್ತಿಕ ಹಿತಾಸಕ್ತಿಗಾಗಿ ಏಳೆಂಟು ರೈತರಿಗೆ ಸೇರಿದ ಹತ್ತಾರು ಎಕರೆ ಫಲವತ್ತಾದ ನೀರಾವರಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವುದು ರೈತರಿಗೆ ಮಾಡಿದ ಅನ್ಯಾಯವಾಗಿದೆ ಎಂದು ರೈತರಾದ ಶಿವಶಂಕರಗೌಡ ಮಾಲಿಪಾಟೀಲ, ಈರನಗೌಡ ಸಿದ್ರಾಮಗೌಡ ಮತ್ತಿತರರು ನೋವು ತೋಡಿಕೊಂಡರು.

ಬೆಂಬಲ: ತಾಲ್ಲೂಕು ಬಿಜೆಪಿ ಅಧ್ಯಕ್ಷ ಆದಪ್ಪ ಕಲಬುರ್ಗಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಸುರೇಶಗೌಡ ಶಿವನಗೌಡ, ಅರವಿಂದಗೌಡ ಪಾಟೀಲ್, ವಾದಿರಾಜ ಪುರೋಹಿತ್, ಶ್ರೀ ಶೈಲಪ್ಪ ಗಸೆಟ್ಟಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಭೂಮಿ ಕಳೆದುಕೊಳ್ಳುವ ಆತಂಕದಲ್ಲಿರುವ ರೈತರಾದ ಶೇಖರಗೌಡ ಮಾಲಿಪಾಟೀಲ್, ರತ್ನಮ್ಮ, ಬಸಲಿಂಗಮ್ಮ ಹಿತ್ತಲಮನಿ, ಶಿವಪುತ್ರಮ್ಮ ಪಾರಮ್ಮ ಮಾಲಿಪಾಟೀಲ, ಸಾವಿತ್ರಿ ಮತ್ತಿತರರು ಸತ್ಯಾಗ್ರಹದಲ್ಲಿ  ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.