ADVERTISEMENT

ಪ್ರೇಮವಿಲ್ಲದೆ ಜಗತ್ತು ಬಡವಾಗಿದೆ: ಗವಿಮಠಶ್ರೀ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2013, 11:00 IST
Last Updated 15 ಏಪ್ರಿಲ್ 2013, 11:00 IST

ಮುನಿರಾಬಾದ್: ಸದ್ಯ ಜಗತ್ತು ಅನ್ನ ನೀರಿನಿಂದ ಬಡವಾಗಿಲ್ಲ ಬದಲಾಗಿ ಮಾನವನ ಹೃದಯದಲ್ಲಿನ ಪ್ರೀತಿ, ಪ್ರೇಮದ ಕೊರತೆಯಿಂದ ಬಡವಾಗಿದೆ ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ನುಡಿದರು.

ಅವರು ಇಲ್ಲಿಗೆ ಸಮೀಪದ ಬೇವಿನಹಳ್ಳಿ ಗ್ರಾಮದಲ್ಲಿ ಶ್ರೀಮಾರುತೇಶ್ವರ ಜಾತ್ರೆಯ ಅಂಗವಾಗಿ ಶುಕ್ರವಾರ ನಡೆದ ಧಾರ್ಮಿಕ ಹಾಗೂ ಸಂಗೀತ ಸಭೆಯಲ್ಲಿ ಆಶೀರ್ವಚನ ನೀಡುತ್ತಿದ್ದರು. ಯಾರ ಹೃದಯದಲ್ಲಿ ಪ್ರೀತಿ, ಪ್ರೇಮ ಮತ್ತು ಮುಖದ ಮೇಲೆ ನಗು ಇರುತ್ತದೋ ಅವರ ಜೀವನ ಸಾರ್ಥಕ. “ಜಲಂ, ಅನ್ನಂ, ಸುಭಾಷಿತಂ ತ್ರಿರತ್ನ”ಗಳೆಂದು ಹೇಳಲಾಗಿದೆ.

ದೇಹಕ್ಕೆ ನೀರು, ಅನ್ನ, ಮಸ್ತಕಕ್ಕೆ ಒಳ್ಳೆಯ ವಿಚಾರ ತುಂಬುವ ಸುಭಾಷಿತ ಇವು ಮೂರು ಮುಖ್ಯ ರತ್ನಗಳು. ಮುತ್ತು ರತ್ನ, ಬಂಗಾರ ಉಳಿದವು ಭೌತಿಕ ಕಲ್ಲಿನ ಚೂರುಗಳು. ಹಣ, ಸಂಪತ್ತು ಇದ್ದವನೇ ಶ್ರೀಮಂತನಲ್ಲ. ಒಳ್ಳೆಯ ಗುಣ ಹೊಂದಿದವನೇ ಶ್ರೀಮಂತ. ಸಮಾಜದೆಡೆ ತ್ಯಾಗ ಮತ್ತು ನಿಸ್ವಾರ್ಥ ಸೇವೆ ಇರಬೇಕು.

ದಾನ ಕೊಟ್ಟಿದ್ದನ್ನು ಹೇಳಿಕೊಳ್ಳಬಾರದು ಮತ್ತು ಪರಸ್ಪರ ದ್ವೇಷ, ಮತ್ಸರ ತೊರೆದು ಕ್ಷಮಾ ಗುಣ ಹೊಂದಿರಬೇಕು ಎಂದರು. ಹೆಬ್ಬಾಳ ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಜಾತ್ರೆ ಎಂಬುದೊಂದು ಜಾತ್ಯಾತೀತ ಆಚರಣೆ. ಇಲ್ಲಿ ಜಾತಿಗೆ ಪ್ರಾಧಾನ್ಯತೆ ಇಲ್ಲ ತೇರು ಎಳೆಯುವ ಸಂದರ್ಭದಲ್ಲಿ ನಿನ್ನನ್ನು ಯಾರೂ ಯಾವ ಜಾತಿ ಎಂದು ಕೇಳಿಲ್ಲ. ಶ್ರದ್ಧೆ ಮತ್ತು ದೇವರ ಮೇಲಿನ ಭಕ್ತಿ ಮಾತ್ರ ಇಲ್ಲಿ ಮುಖ್ಯ ಎಂದರು.

ಕಿರ್ಲೊಸ್ಕರ್ ಕಾರ್ಖಾನೆಯ ಎಂ.ಡಿ. ಆರ್.ವಿ.ಗುಮಾಸ್ತೆ, ಕೊಪ್ಪಳದ ಸೈಯ್ಯದ್ ಫೌಂಡೇಶನ್ ಅಧ್ಯಕ್ಷ ಕೆ.ಎಂ.ಸೈಯ್ಯದ್ ಮಾತನಾಡಿದರು. ಗವಿಸಿದ್ದೇಶ್ವರ ಸಂಗೀತ ಪಾಠಶಾಲೆಯ ಕಲಾವಿದರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಇದೇ ಸಂದರ್ಭದಲ್ಲಿ ಮುನಿರಾಬಾದ್ ಪೊಲೀಸ್ ಠಾಣೆಯ ಠಾಣಾಧಿಕಾರಿ ವಿಶ್ವನಾಥ ಹಿರೇಗೌಡರ್ ಅವರಿಗೆ ಉತ್ತಮ ಸೇವೆ ಸಲ್ಲಿಸಿದ ಪ್ರಯುಕ್ತ ಮುಖ್ಯಮಂತ್ರಿಗಳ ಪ್ರಶಸ್ತಿ ಲಭಿಸಿದ ಸಂದರ್ಭದಲ್ಲಿ ಹೆಬ್ಬಾಳ ಮತ್ತು ಕೊಪ್ಪಳ ಮಠದ ಶ್ರೀಗಳು ಶಾಲು ಹೊದಿಸಿ ಅವರನ್ನು ಸನ್ಮಾನಿಸಿದರು.

ಗವಿಸಿದ್ದಪ್ಪ ಕರಡಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೆ.ರಾಘವೇಂದ್ರ ಹಿಟ್ನಾಳ, ಕೆಎಫ್‌ಐಎಲ್‌ನ ಅಧಿಕಾರಿ ಎಂ.ಎಸ್.ಕೃಷ್ಣ, ಶಾಂತರಾಜ್‌ಜೈನ್, ದ್ಯಾಮಣ್ಣ ಚಿಲವಾಡಗಿ ಇತರರು ವೇದಿಕೆಯಲ್ಲಿದ್ದರು. ಶಿವಮೂರ್ತಿಮಡ್ಡಿ ಸ್ವಾಗತಿಸಿದರು. ರಾಮಣ್ಣ ನಿರೂಪಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.