ADVERTISEMENT

ಬರಿಗೈಯಲ್ಲಿ ಹೋದ ಲೋಕಾಯುಕ್ತರು

​ಪ್ರಜಾವಾಣಿ ವಾರ್ತೆ
Published 30 ಮೇ 2012, 19:30 IST
Last Updated 30 ಮೇ 2012, 19:30 IST
ಬರಿಗೈಯಲ್ಲಿ ಹೋದ ಲೋಕಾಯುಕ್ತರು
ಬರಿಗೈಯಲ್ಲಿ ಹೋದ ಲೋಕಾಯುಕ್ತರು   

ಕುಷ್ಟಗಿ: ಸರ್ಕಾರಿ ಸೇವೆ ಮತ್ತಿತರ ವಿಷಯಗಳಲ್ಲಿ ವೈಯಕ್ತಿಕ, ಸಾರ್ವಜನಿಕ ಸಮಸ್ಯೆ, ಕುಂದುಕೊರತೆ ಮತ್ತು ಸರ್ಕಾರಿ ಇಲಾಖೆಗಳಲ್ಲಿನ ಲೋಪದೋಷಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ದೂರು ಪಡೆಯಲು ಬುಧವಾರ ಕೊಪ್ಪಳ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಖುದ್ದಾಗಿ ಇಲ್ಲಿಗೆ ಬಂದರೆ ಒಬ್ಬರೂ ಅವರನ್ನು ಭೇಟಿ ಮಾಡದಿರುವುದು ಕಂಡುಬಂದಿತು.

ಲೋಕಾಯುಕ್ತ ಅಧಿಕಾರಿಗಳ ಭೇಟಿ, ಮಧ್ಯಾಹ್ನ ಮಂದಿರದಲ್ಲಿ ಪ್ರವಾಸಿ ಮಂದಿರದಲ್ಲಿ ಅಹವಾಲು, ದೂರುಗಳನ್ನು ಸ್ವೀಕರಿಸಲಾಗುತ್ತದೆ ಸಾರ್ವಜನಿಕರು ಅಧಿಕಾರಿಗಳನ್ನು ಖುದ್ದಾಗಿ ಭೇಟಿ ಮಾಡಬಹುದು ಎಂಬುದನ್ನು ಕೆಲ ದಿನಗಳ ಹಿಂದೆಯೇ ಪತ್ರಿಕೆಗಳಲ್ಲಿ ಮಾಹಿತಿಯನ್ನೂ ನೀಡಲಾಗಿತ್ತು.

ಅದರಂತೆ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5ರವರೆಗೆ ನಿಗದಿತ ಅವಧಿಯಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ಕೆ.ಎಂ.ಯೂಸೂಫ್ ಮತ್ತು ಸರ್ಕಲ್ ಇನ್‌ಸ್ಪೆಕ್ಟಕ್ಟರ್ ಸಲೀಂ ಪಾಶಾ ಪ್ರವಾಸಿ ಮಂದಿರದಲ್ಲಿ ಜನರ ಆಗಮನದ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದರು. ಆದರೆ ಸಂಜೆಯಾದರೂ ಒಬ್ಬರೂ ಈ ಅಧಿಕಾರಿಗಳತ್ತ ಸುಳಿಯಲಿಲ್ಲ. ಅಧಿಕಾರಿಗಳು ಖಾಲಿ ಕುಳಿತು ದೂರುಗಳಿಲ್ಲದೇ ಬರಿಗೈಯಲ್ಲಿ ಮರಳುವಂತಾಯಿತು.

ನಂತರ ಈ ಕುರಿತು ವಿವರಿಸಿದ ಡಿವೈಎಸ್‌ಪಿ ಕೆ.ಎಂ.ಯೂಸೂಫ್, ಈ ಹಿಂದಿನ ಭೇಟಿಯ ಸಂದರ್ಭದಲ್ಲಿ ಕೆಲ ದೂರುಗಳು ಬಂದಿದ್ದವು. ಆದರೆ ಈ ಬಾರಿ ಒಂದೂ ಬಂದಿಲ್ಲ, ಗಂಗಾವತಿಗೆ ಭೇಟಿ ನೀಡಿದಾಗ ಕನಿಷ್ಠ ಎರಡು ದೂರುಗಳಾದರೂ ಬಂದಿವೆ ಎಂದು ತಿಳಿಸಿದ ಅವರು, ಈ ತಾಲ್ಲೂಕಿನಲ್ಲಿ ಸಮಸ್ಯೆಗಳೇ ಇಲ್ಲವೇ? ಎಂದು ಪ್ರಶ್ನಿಸಿದರು.

ಮಳೆ ಇಲ್ಲದ ಕಾರಣ ರೈತರಿಗೆ ಕೃಷಿ ಚಟುವಟಿಕೆಗಳಿಲ್ಲ, ಬರಗಾಲದಿಂದಾಗಿ ಜನರಿಗೂ ಕೆಲಸವಿಲ್ಲ, ಪತ್ರಿಕೆಗಳ ಪುಟ ತೆರೆದರೆ ನಿತ್ಯ ಈ ಭಾಗದ ಸಾಕಷ್ಟು ಸಮಸ್ಯೆ, ಆರೋಪಗಳೇ ತುಂಬಿರುತ್ತವೆ. ಆದರೆ ಸ್ವತಃ ದೂರು ಪಡೆಯಲು ಲೋಕಾಯುಕ್ತ ಅಧಿಕಾರಿಗಳು ಮನೆ ಬಾಗಿಲಿಗೆ ಬಂದರೆ ದೂರು ನೀಡುವವರೇ ಬಾರದಿರುವುದು ವಿಪರ್ಯಾಸ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.