ADVERTISEMENT

ಬರ: ಶೈಕ್ಷಣಿಕ ಶುಲ್ಕ ಮನ್ನಾಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2012, 10:25 IST
Last Updated 14 ಏಪ್ರಿಲ್ 2012, 10:25 IST
ಬರ: ಶೈಕ್ಷಣಿಕ ಶುಲ್ಕ ಮನ್ನಾಕ್ಕೆ ಒತ್ತಾಯ
ಬರ: ಶೈಕ್ಷಣಿಕ ಶುಲ್ಕ ಮನ್ನಾಕ್ಕೆ ಒತ್ತಾಯ   

ಗಂಗಾವತಿ: ಬರಪೀಡಿತ ಪ್ರದೇಶಗಳಲ್ಲಿನ ಶಾಲೆ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳ ಶುಲ್ಕವನ್ನು ಸರ್ಕಾರ ಕೂಡಲೇ ಮನ್ನಾ ಮಾಡಬೇಕೆಂದು ಭಾರತ ವಿದ್ಯಾರ್ಥಿ ಪೇಡರೇಶನ್ (ಎಸ್‌ಎಫ್‌ಐ) ಸಂಘಟನೆ ಶುಕ್ರವಾರ ಇಲ್ಲಿ ಒತ್ತಾಯ ಮಾಡಿದೆ.

ಸಂಘಟನೆಯ ಪದಾಧಿಕಾರಿಗಳು ಶುಕ್ರವಾರ ಮಿನಿವಿಧಾನಸೌಧದ ಮುಂದೆ ಕೆಲಕಾಲ ಧರಣಿ ನಡೆಸಿದರು, ಬರಪೀಡಿತ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆ ನಿಸ್ತೇಜವಾಗಿವೆ. ಕೃಷಿ ಆಧಾರಿತ ಆರ್ಥಿಕ ಚಟುವಟಿಕೆ ಸ್ತಬ್ಧವಾಗಿವೆ ಎಂದು ವಿದ್ಯಾರ್ಥಿಗಳು ವಿವರಿಸಿದರು.

ಈ ಬಗ್ಗೆ ಸರ್ಕಾರಕ್ಕೆ ಬರೆದ ಮನವಿಯನ್ನು ತಹಸೀಲ್ದಾರ್ ಸಿ,ಡಿ. ಗೀತಾ ಅವರ ಮೂಲಕ ಸಲ್ಲಿಸಲಾಯಿತು. ರಾಜ್ಯದ 123 ತಾಲ್ಲೂಕುಗಳಲ್ಲಿ ಬರ ಇದೆ. ರೈತರ ಭೂಕಂದಾಯವನ್ನು ಸರ್ಕಾರ ಮನ್ನಾ ಮಾಡಿದೆ.
ಈ ಇಂತಹ ಸಂದರ್ಭದಲ್ಲಿ ರೈತರು, ಕೃಷಿ ಕೂಲಿಕಾರ್ಮಿಕರು, ದಲಿತರು, ಹಿಂದುಳಿದ ವರ್ಗದವರು ತಮ್ಮ ಮಕ್ಕಳಿಗೆ ದುಬಾರಿ ಶಿಕ್ಷಣ ಶುಲ್ಕ ನೀಡಿ ವಿದ್ಯಾಭ್ಯಾಸ ಕೊಡಿಸುವರೇ ಎಂಬುದನ್ನು ಸರ್ಕಾರ ಮನಗಾಣಬೇಕು ಎಂದು ಒತ್ತಾಯಿಸಿದರು.
ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಜೆಡಿಎಸ್ ಪಕ್ಷದ ಪ್ರಮುಖರು ಬರಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ರಾಜಕೀಯ ಪ್ರೇರಿತ ಓಟ್ ಬ್ಯಾಂಕಿನ ಉದ್ದೇಶದಿಂದ ಮಾತನಾಡುತ್ತಿದ್ದಾರೆ. ಆದರೆ ಯಾರೊಬ್ಬರು ಬಡವರ ಮಕ್ಕಳ ಶಿಕ್ಷಣದ ಬಗ್ಗೆ ಚಿಂತಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರಿದರು.
ಹೈದರಬಾದ್ ಕರ್ನಾಟಕ ಪ್ರದೇಶದಲ್ಲಿ ಅತಿವೃಷ್ಠಿ ಸಂಭವಿಸಿ ಮನೆ, ಹೊಲ ಕಳೆದುಕೊಂಡು ಆರ್ಥಿಕ ಸಂಕಷ್ಟದಿಂದ ಸುಧಾರಿಸಿಕೊಳ್ಳುವ ಹಂತದಲ್ಲಿ ಮತ್ತೆ ಈಗ ಬರದ ಛಾಯೆ ಮೂಡಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ನೆರವಿಗೆ ಧಾವಿಸಬೇಕೆಂದು ಒತ್ತಾಯಿಸಲಾಯಿತು.
ಬರ ಪೀಡಿತ ಪ್ರದೇಶ ಎಂದು ಘೋಷಿಸಿದ ಪ್ರದೇಶದಲ್ಲಿ ಎಲ್ಲ ಹಂತದ ಶಿಕ್ಷಣವನ್ನು ಉಚಿತವಾಗಿ ನೀಡಬೇಕು, ವಿದ್ಯಾರ್ಥಿ ವೇತನ ತಕ್ಷಣಕ್ಕೆ ಬಿಡುಗಡೆ ಮಾಡಬೇಕು, ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡಬೇಕೆಂಬ ಮನವಿಯನ್ನು ಸಲ್ಲಿಸಲಾಯಿತು.
ದುರುಗೇಶ ಡಗ್ಗಿ, ಗ್ಯಾನೇಶ ಕಡಗದ, ಬಾಳಪ್ಪ ಹುಲಿಹೈದರ, ರಸೂಲ್, ಕನಕರಾಯ ಡಗ್ಗಿ, ಈರಣ್ಣ ವಡ್ಡರ, ಪ್ರಕಾಶ ಚಿತ್ರಗಾರ, ನೀಲಕಂಠ, ಪರಮೇಶ, ಲೋಕೇಶ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.