ADVERTISEMENT

ಬಸ್‌ಪಾಸ್ ದರ ಹೆಚ್ಚಳ: ಎಸ್‌ಎಫ್‌ಐ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2011, 9:15 IST
Last Updated 20 ಜೂನ್ 2011, 9:15 IST

ಗಂಗಾವತಿ: ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಸಂಚರಿಸಲು ವಿದ್ಯಾರ್ಥಿಗಳಿಗೆ ನೀಡಿದ ಬಸ್‌ಪಾಸ್ ದರದಲ್ಲಿ  ಗಣನೀಯ ಏರಿಕೆಯಾಗಿದ್ದು, ಅದನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ನಗರದಲ್ಲಿ ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಇತ್ತೀಚೆಗೆ ಧರಣಿ ನಡೆಸಿದರು.

ವಿವೇಕಾನಂದ ಕಾಲೋನಿ ಸಮೀಪ ಇರುವ ಸಂಕಲ್ಪ ಸ್ವತಂತ್ರ ಪದವಿ ಪೂರ್ವ ಕಾಲೇಜಿನಿಂದ ಮೆರವಣಿಗೆ ಹೊರಟ ವಿದ್ಯಾರ್ಥಿಗಳು ಕೃಷ್ಣದೇವರಾಯ ವೃತ್ತದಲ್ಲಿ ಕುಳಿತು ಕೆಲಕಾಲ ಧರಣಿ ನಡೆಸಿದರು. ಸಾರಿಗೆ ಇಲಾಖೆಯ ವಿರುದ್ಧ ಘೋಷಣೆ ಕೂಗಿದರು.

ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಸರ್ಕಾರ ಪ್ರತಿಯೊಂದು ಕೋರ್ಸಿಗೂ ಶುಲ್ಕವನ್ನು ಹೆಚ್ಚಳ ಮಾಡಿದೆ. ಅದರ ಜೊತೆಗೆ ಈಗ ವಿದ್ಯಾರ್ಥಿಗಳ ರಿಯಾಯಿತಿ ದರದ ಬಸ್‌ಪಾಸಿನಲ್ಲೂ ದರ ಹೆಚ್ಚಳ ಮಾಡಲಾಗಿದೆ ಎಂದು ವಿದ್ಯಾರ್ಥಿಗಳು ದೂರಿದರು.

ಇದರಿಂದಾಗಿ ಗ್ರಾಮೀಣ ಪ್ರದೇಶದಿಂದ ಉನ್ನತ ವ್ಯಾಸಂಗಕ್ಕೆ ನಗರಕ್ಕೆ ಬರುವ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆಯಾಗಲಿದೆ. ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುವ ಸ್ಥಿತಿ ನಿರ್ಮಾಣವಾದರೂ ಅಶ್ಚರ್ಯ ಪಡಬೇಕಿಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದರು.

ಪ್ರಸ್ತಕ ಸಾಲಿಗೆ ಹೈಸ್ಕೂಲ್ ವಿಭಾಗಕ್ಕೆ ರೂ. 770 (ಕಳೆದ ವರ್ಷದ ದರ 670), ಕಾಲೇಜು ರೂ. 1170 (1170) ಮತ್ತು ಐ.ಟಿ.ಐ ವಿದ್ಯಾರ್ಥಿಗಳಿಗೆ ರೂ. 1422 (1322) ಹೆಚ್ಚಿಸಲಾಗಿದೆ ಎಂದು ವಿದ್ಯಾರ್ಥಿಗಳು ವಿವರಿಸಿದರು.

ಕೂಡಲೇ ಸಂಬಂಧಿತ ಇಲಾಖೆ ಮೇಲಧಿಕಾರಿಗಳ ಗಮನ ಸೆಳೆಯಬೇಕು. ಸಾರಿಗೆ ಸಚಿವರು ಏರಿಕೆಯಾದ ದರವನ್ನು ಇಳಿಸದಿದ್ದಲ್ಲಿ ಹಂತಹಂತವಾಗಿ ಹೋರಾಟ ತೀವ್ರಗೊಳಿಸುವುದಾಗಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಸ್‌ಎಫ್‌ಐ ಸಂಘಟನೆಯ ಮುಖಂಡರು ಎಚ್ಚರಿಸಿದರು.

ರೇಖಾ, ರೋಜಾ, ಅಪೂರ್ವ, ಅನ್ನಪೂರ್ಣ, ಅರ್ಪಿತಾ, ಅರ್ಜುನ, ರಾಘವೇಂದ್ರ, ರವಿ, ಹನುಮೇಶ ಗುಂಡೂರು, ಪಂಪಾಪತಿ ಹಣವಾಳ, ನಾಗರಾಜ ಸುಗೂರು, ವಿರೂಪಾಕ್ಷಿ, ದೇವಣ್ಣ, ಅಮರೇಶ ಕುರಿ, ಬಾಳಪ್ಪ ಹುಲಿಹೈದರ, ದುರುಗೇಶ ಡಗ್ಗಿ ಇತರರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.