ADVERTISEMENT

ಬಿಜೆಪಿ ಮತಬುಟ್ಟಿ ಕಾಂಗ್ರೆಸ್‌ ಪಾಲು

ಕನಕಗಿರಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶಿವರಾಜ ತಂಗಡಗಿ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 6 ಮೇ 2018, 12:00 IST
Last Updated 6 ಮೇ 2018, 12:00 IST
ಶಿವರಾಜ ತಂಗಡಗಿ
ಶಿವರಾಜ ತಂಗಡಗಿ   

2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆಗೊಂಡ ನಂತರ ನಡೆದ ಪರಿಶಿಷ್ಟ ಜಾತಿಯ ಮೀಸಲು ಕ್ಷೇತ್ರದಲ್ಲಿ ಎರಡು ಚುನಾವಣೆಯಲ್ಲಿ ಪಕ್ಷೇತರ ಹಾಗೂ  2013ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಆಯ್ಕೆಯಾಗಿ ಶಾಸಕ, ಸಚಿವರಾಗಿ ಅಧಿಕಾರ ನಡೆಸಿದ ಶಾಸಕ ಶಿವರಾಜ ತಂಗಡಗಿ ಅವರು ಈ ಸಲದ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ಪ್ರಚಾರದ ಮಧ್ಯೆ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನ ಇಲ್ಲಿದೆ.

ಈ ಬಾರಿಯ ಚುನಾವಣಾ ತಂತ್ರಗಾರಿಕೆ ಏನು?

ಕಾರ್ಯಕರ್ತರ ಬಲಿಷ್ಠ ಪಡೆ ಕಾಂಗ್ರೆಸ್‌ನಲ್ಲಿದೆ. ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಮತದಾರರು ತುದಿಗಾಲಿನಲ್ಲಿ ನಿಂತಿದ್ದಾರೆ. ಕ್ಷೇತ್ರದಲ್ಲಿ ನಾನು ಹಾಗೂ ಮುಖಂಡರು ಕೈಗೊಂಡ ಪ್ರಚಾರಕ್ಕೆ ಅಭೂತಪೂರ್ವ ಬೆಂಬಲ ದೊರೆತ ಕಾರಣ ಬಿಜೆಪಿಯವರು ಹತಾಶರಾಗಿ, ಜಗಳ ಕಾಯುತ್ತಿದ್ದಾರೆ. ಜನರ ಮೇಲೆ ವಿಶ್ವಾಸ ಇದ್ದು, ಬೇರೆಯವರಿಗೆ ಅವಕಾಶ ನೀಡುವುದಿಲ್ಲ. ಜನರು ಬಿಜೆಪಿ ಸೋಲಿಸಲು ಮೇ 12ಕ್ಕೆ ಕಾಯುತ್ತಿದ್ದಾರೆ.

ADVERTISEMENT

ಬಿಜೆಪಿಯವರ ಮತಬುಟ್ಟಿಗೆ ಕೈ ಹಾಕಿದ್ದೀರಿ ಫಲಿತಾಂಶ ಏನಾಗುತ್ತದೆ?

ಮಾಜಿ ಸಂಸದರಾದ ಕೆ.ವಿರೂಪಾಕ್ಷಪ್ಪ, ಶಿವರಾಮಗೌಡ, ಮುಕುಂದರಾವ್ ಭವಾನಿಮಠರು ನಮ್ಮವರು. ಈ ಹಿಂದಿನ ನನ್ನ ಎರಡು ಚುನಾವಣೆಯಲ್ಲಿ ತುಂಬಾ ಸಹಾಯ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಬಸವರಾಜ ದಡೇಸೂಗೂರು ಅವರು ಓದಲು ಬಾರದ ವ್ಯಕ್ತಿ. ಇಂತಹ ವ್ಯಕ್ತಿಯಿಂದ ಅಭಿವೃದ್ಧಿ ಅಸಾಧ್ಯ ಎಂಬುದು ಮನಗಂಡಿರುವ ಬಹುತೇಕ ಬಿಜೆಪಿಗರು ನನಗೆ ಬೆಂಬಲ ನೀಡಿದ್ದಾರೆ. ಬಿಜೆಪಿ ಮತಬುಟ್ಟಿಗೆ ಕೈ ಹಾಕಿದ್ದೇನೆ. ಸ್ಪರ್ಧಾತ್ಮಕ ದೃಷ್ಟಿಯಲ್ಲಿ ಇದು ಸಹಜ. ಇದು ಯಶಸ್ಸಿಗೆ ಪೂರಕವಾಗಲಿದೆ.

ಅಧಿಕಾರಾವಧಿಯಲ್ಲಿ ಬಹುತೇಕ ವಿವಾದಗಳು, ಆರೋಪಗಳು ನಿಮ್ಮನ್ನು ಸುತ್ತಿಕೊಂಡವಲ್ಲ?

ಬಿಜೆಪಿಗರಿಗೆ ಆರೋಪ ಮಾಡುವುದು ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ಪತ್ರಿಕೆ, ಟಿವಿ ವಾಹಿನಿಗಳಿಗೆ ಆಹಾರವಾಗಿದ್ದಾರೆ. ಸಣ್ಣ ಘಟನೆಗೂ ನಾನು ಹಾಗೂ ಬೆಂಬಲಿಗರು ಕಾರಣ ಎಂದು ದೂರಿ ಗೊಂದಲ ಸೃಷ್ಟಿಸಿ ಲಾಭ ಪಡೆಯುವುದೇ ಅವರ ಕೆಲಸವಾಯಿತು. ಅವರ ಆರೋಪಕ್ಕೆ ಜನ ಬೆಂಬಲ ನೀಡಿಲ್ಲ.  ಜನ ಒಳ್ಳೆಯದು, ಕೆಟ್ಟದು ಯೋಚನೆ ಮಾಡುತ್ತಾರೆ. ಸಣ್ಣ ನೀರಾವರಿ ಇಲಾಖೆಯಲ್ಲಿ ನಡೆದ ಭ್ರಷ್ಟಾಚಾರದಲ್ಲಿ ಭಾಗಿಯಾದವರ ಮೇಲೆ ಕ್ರಮ ಕೈಗೊಳ್ಳಲಾಗಿದೆ.

ಕನಕಗಿರಿಯಲ್ಲಿ ಬರೀ ಕನಸುಗಳನ್ನು ಬಿತ್ತುತ್ತೀರೊ ಅಥವಾ ನನಸಾಗಿಸುವ ಪರಿಕಲ್ಪನೆಗಳು ಇವೆಯೋ?

ಕನಸುಗಳನ್ನು ನನಸು ಮಾಡುವ ಜಾಯಮಾನ ನನ್ನದು. ತುಂಗಭದ್ರಾ ಕಾಲುವೆ ನೀರನ್ನು ಈ ಭಾಗದ ಎಂಟು ಕೆರೆಗಳಿಗೆ ತುಂಬಿಸಿರುವುದು ನನ್ನ ಕನಸಾಗಿತ್ತು. ಅದು ನನಸಾಗಿದೆ. ಅದನ್ನು ನನಸು ಮಾಡಿದ್ದು ಹೆಮ್ಮೆಯ ವಿಚಾರ. ಇದಲ್ಲದೆ ಕನಕಗಿರಿ, ಕಾರಟಗಿ ತಾಲ್ಲೂಕು ಘೋಷಣೆ ಹಾಗೂ ಅನುಷ್ಠಾನ, ನವಲಿಯಲ್ಲಿ ರೈಸ್‌ಟೆಕ್ ಪಾರ್ಕ್‌ ಸ್ಥಾಪನೆ, ಕನಕಗಿರಿ ಪಟ್ಟಣ ಪಂಚಾಯಿತಿ, ಕಾರಟಗಿ ಪುರಸಭೆ ರಚನೆ, ಕನಕಗಿರಿ ಉತ್ಸವ ಆಚರಣೆ, ಕಾರಟಗಿ, ಕನಕಗಿರಿಯಲ್ಲಿ ಡಿಪ್ಲೊಮಾ ಕಾಲೇಜು ಆರಂಭ, ಕನಕಗಿರಿಯಲ್ಲಿ ಆದರ್ಶ ವಿದ್ಯಾಲಯ, ಐಟಿಐ ಕಾಲೇಜು ಆರಂಭ, ಶಾದಿಮಹಲ್‌, ವಿವಿಧ ಸಮಾಜಗಳ ಸಮುದಾಯ ಭವನ, ಶಾಲಾ–ಕಾಲೇಜು, ಅಂಗನವಾಡಿ ಕಟ್ಟಡ ನಿರ್ಮಾಣ ಹೀಗೆ ಕನಸು ನನಸು ಮಾಡಿರುವೆ.

ರಾಹುಲ್‌ಗಾಂಧಿ ಪ್ರವಾಸ ಕ್ಷೇತ್ರದ ಮೇಲೆ ಏನು ಪರಿಣಾಮ ಬೀರಿದೆ?

ರಾಹುಲ್‌ ಗಾಂಧಿ ಅವರ ಕ್ಷೇತ್ರದ ಪ್ರವಾಸ ಕಾರ್ಯಕರ್ತರಲ್ಲಿ ಖುಷಿ ತಂದಿದೆ. ಒಳ್ಳೆಯ ಪರಿಣಾಮ ಬೀರಿದೆ. ರಾಷ್ಟ್ರ ನಾಯಕರಾಗಿರುವ ಅವರು ಕನಕಗಿರಿ, ಕಾರಟಗಿ ಸೇರಿದಂತೆ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ರೋಡ್ ಶೋ ನಡೆಸಿರುವುದು ಜನರ ಮೇಲೆ ಪರಿಣಾಮ ಬೀರಿದೆ. ರಾಹುಲ್‌ ಗಾಂಧಿ ಭೇಟಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರನ್ನು ನೆನಪಿಸಿದೆ. ಇದು ಗೆಲುವಿಗೆ ಸಹಕಾರಿಯಾಗಲಿದೆ.

ನಿಮ್ಮ ಆದ್ಯತೆಗಳು ಏನು?

ಕ್ಷೇತ್ರದಲ್ಲಿ ಇಲ್ಲಿಯವರೆಗೆ ಕಾಪಾಡಿಕೊಂಡು ಬಂದಿರುವ ಶಾಂತಿ, ನೆಮ್ಮದಿಯನ್ನು ಮುಂದುವರಿಸಿಕೊಂಡು ಹೋಗುವುದು. ನೂತನ ಕನಕಗಿರಿ ಹಾಗೂ ಕಾರಟಗಿ ತಾಲ್ಲೂಕಿಗೆ ಮುಂದಿನ 30–40 ವರ್ಷಗಳ ದೂರದೃಷ್ಟಿ ಹೊಂದಿ ಅಭಿವೃದ್ಧಿ ಕೆಲಸಗಳನ್ನು ಮಾಡುವ ಗುರಿ ಇದೆ. ರಸ್ತೆ, ಶುದ್ಧ ಕುಡಿಯುವ ನೀರು ಸೇರಿದಂತೆ ಇತರ ಮೂಲಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು.

- ಮೆಹಬೂಬಹುಸೇನ ಕನಕಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.