ADVERTISEMENT

ಬಿಸಿಯೂಟ ಸ್ಥಗಿತ: ವಿದ್ಯಾರ್ಥಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 6:36 IST
Last Updated 5 ಡಿಸೆಂಬರ್ 2013, 6:36 IST

ಕಾರಟಗಿ: ಬಿಸಿಯೂಟ ತಯಾರಿಸುವ ಮುಖ್ಯ ಹಾಗೂ ಸಹಾಯಕ ಅಡುಗೆ­ದಾರರು ತಮ್ಮನ್ನು ಕಾಯಂ ಮಾಡ­ಬೇಕು, ವೇತನ ಹೆಚ್ಚಿಸಬೇಕು ಎನ್ನು­ವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಟಾವಧಿ ಧರಣಿಯನ್ನು ರಾಜ್ಯಮಟ್ಟದಲ್ಲಿ ಕೈಗೊಂಡಿದ್ದರಿಂದ ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ, ಕ್ಷೀರಭಾಗ್ಯದಿಂದ ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ.

ಗುಡೂರ ಗ್ರಾಮದಿಂದ ಸೋಮನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೊರಟಿದ್ದ ವಿದ್ಯಾರ್ಥಿ ನಾಗೇಶ್ ‘ಸೋಮವಾರ ಉಪವಾಸವಿದ್ದು ಬಂದಿದ್ದೆ. ನಿನ್ನೆ ಗುರುಗಳು ತಿಳಿಸಿದ್ದರಿಂದ ಇಂದು ಮನೆಯಿಂದಲೇ ಊಟ ತೆಗೆದುಕೊಂಡು ಹೊರಟಿದ್ದೇನೆ’ ಎಂದನು.

ಹಾಲು ವಿತರಣೆಯೂ ಬಂದ್ ಆಗಿದೆ ಎಂದು ವಿದ್ಯಾರ್ಥಿಗಳು ತಿಳಿಸಿದರು. ಅಡುಗೆಯವರು ಮುಷ್ಕರದಲ್ಲಿ ಭಾಗವಹಿಸಿದ್ದರಿಂದ ಸೋಮವಾರದಿಂದ ಬಿಸಿಯೂಟ ಇಲ್ಲದಾಗಿದೆ ಎಂದು ಮುಖ್ಯಗುರು ವನಮಾಲಾ ತಿಳಿಸಿದರು.

ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಉಪ ಪ್ರಾಚಾರ್ಯ ಶರಣಪ್ಪ ಗೌರಿಪೂರ, ಮುಷ್ಕರ ಅನಿರ್ದಿ­ಷ್ಟಾವಧಿಯದ್ದಾಗಿದ್ದು, ಯಾವಾಗ ಬಿಸಿಯೂಟ ಆರಂಭಗೊಳ್ಳುವುದು ಎಂಬುದನ್ನು ಹೇಳಲಾಗದು. ಪರ್ಯಾಯ ವ್ಯವಸ್ಥೆಗೆ ಇಲಾಖೆಯಿಂದ ಯಾವುದೇ ಸೂಚನೆ ಬಂದಿಲ್ಲ ಎಂದವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.