ADVERTISEMENT

ಬಿಸಿಲ ಬೇಗೆ ತಣಿಸಲು ಹಲವು ಬಗೆ

ಭೀಮಸೇನ ಚಳಗೇರಿ
Published 28 ಫೆಬ್ರುವರಿ 2011, 6:30 IST
Last Updated 28 ಫೆಬ್ರುವರಿ 2011, 6:30 IST

ಕೊಪ್ಪಳ: ಈ ತಿಂಗಳ ಮಧ್ಯದ ಅವಧಿವರೆಗೂ ಚಳಿಯಿಂದ ನಡುಗಿದ್ದ ನಗರದ ಜನತೆ, ತಿಂಗಳಾಂತ್ಯದ ವೇಳೆಗೆ ಬಿಸಿಲಿನ ತಾಪವನ್ನು ಎದುರಿಸುತ್ತಿದ್ದಾರೆ.ಇದೇನು, ಫೆಬ್ರವರಿ ಬಂದರೂ ಇನ್ನೂ ಚಳಿ ಹೋಗಿಲ್ಲ ಎಂದು ಅಚ್ಚರಿಪಡುತ್ತಿದ್ದ ಜನರು ಈಗ ಬಿಸಿಲಿನ ಝಳಕ್ಕೆ ನಿಟ್ಟುಸಿರು ಬಿಡುವಂತಾಗಿದೆ. ಮಕರ ಸಂಕ್ರಾಂತಿ ನಂತರ ಸಹಜವಾಗಿಯೇ ಬಿಸಿಲಿನ ತಾಪ ಹೆಚ್ಚಲಿದೆ ಎಂಬ ನಗರದ ಜನರ ಲೆಕ್ಕಾಚಾರವನ್ನು ಬುಡಮೇಲು ಮಾಡಿದ್ದ ಪ್ರಕೃತಿ, ಚಳಿ ವಾತಾವರಣ ಮುಂದುವರಿಸಿ ಅಚ್ಚರಿ ಮೂಡಿಸಿತ್ತು. ಈಗ ಸಹ ಜನರಲ್ಲಿ ಇಂತಹದೇ ದುಗುಡ ಆರಂಭಗೊಂಡಿದ್ದರೆ ಅದಕ್ಕೂ ಅಚ್ಚರಿಪಡಿಬೇಕಿಲ್ಲ.

ಕಾರಣ ಇಷ್ಟೇ, ಜನೆವರಿ ಮುಗಿದಿದ್ದರೂ ಚಳಿ ಮುಂದುವರಿದ ರೀತಿಯಲ್ಲಿ, ಈ ಬಾರಿ ಬೇಸಿಗೆ ತಡವಾಗಿ ಆರಂಭಗೊಂಡರೂ, ಮುಂದಿನ ದಿನಗಳಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾಗಿರಬಹುದೇ ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ.ಕೆಲವು ಖಾಸಗಿ ವೆಬ್‌ಸೈಟ್‌ಗಳಲ್ಲಿ ದಾಖಲಾಗಿರುವಂತೆ ಫೆ. 27ರಂದು ಕೊಪ್ಪಳ ನಗರ ತಾಪಮಾನ ಗರಿಷ್ಠ 32 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದರೆ, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ಇನ್ನು, ಹವಾಮಾನ ಇಲಾಖೆಯ ಅಂದಾಜಿನ ಪ್ರಕಾರ ಮಾ. 34ರ ವರೆಗೆ ತಾಪಮಾನ ಹೆಚ್ಚುಕಡಿಮೆ ಇದೇ ಪ್ರಮಾಣದಲ್ಲಿ ಇರಲಿದೆ. ಆದರೆ, ಮಾ. 4ರಂದು ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ದಾಟಬಹುದು ಎಂದು ಹೇಳಲಾಗಿದೆ. ಈ ತಾಪಮಾನ ಇದಕ್ಕಿಂತ ಹೆಚ್ಚಾದರೂ ಅಚ್ಚರಿಪಡಬೇಕಿಲ್ಲ!

ವಾತಾವರಣದಲ್ಲಿ ಕಂಡು ಬಂದಿರುವ ಈ ಏರುಪೇರಿಗೆ ತಕ್ಕಂತೆ ಜನಜೀವನ ಹಾಗೂ ವಹಿವಾಟು ಸಹ ಬದಲಾಗಿರುವುದು ಕಾಣಬಹುದು. ಈಗಾಗಲೇ ನಗರದಲ್ಲಿ ಕಲ್ಲಂಗಡಿ ಹಣ್ಣುಗಳ ಮಾರಾಟ ಆರಂಭಗೊಂಡಿದೆ. ನಗರದ ವಿವಿಧ ಆಯಕಟ್ಟಿನ ಸ್ಥಳಗಳಲ್ಲಿ ಕಲ್ಲಂಗಡಿ ಹಣ್ಣುಗಳನ್ನು ಸಗಟು ಹಾಗೂ ಚಿಲ್ಲರೆಯಾಗಿ ಮಾರಾಟ ಮಾಡುವ ಅಂಗಡಿಗಳು ಕಾಣಿಸಿಕೊಂಡಿವೆ. ಇನ್ನು, ಬಿಸಿಲಿನ ಬೇಗೆಯಿಂದ ಬಾಯಾರಿದ ಜನರನ್ನು ತಣಿಸಲು ಕಲ್ಲಂಗಡಿಗಳ ಜೊತೆಗೆ ತಂಪು ಪಾನೀಯಗಳು ಸಹ ಪೈಪೋಟಿಗೆ ಇಳಿದಿವೆ.

ಮಳೆಗಾಲ ಹಾಗೂ ಚಳಿಗಾಲದ ಹಿನ್ನೆಲೆಯಲ್ಲಿ ನಿಷ್ಕ್ರಿಯಗೊಂಡಿದ್ದ ಸೋಡಾ, ಶರಬತ್, ಲಸ್ಸಿ ಮಾರಾಟ ಮಾಡುವ ಅಂಗಡಿಗಳು ಈಗ ಬೇಸಿಗೆಯ ವ್ಯಾಪಾರಕ್ಕಾಗಿ ಮತ್ತೆ ಶೃಂಗಾರಗೊಂಡು ಗ್ರಾಹಕರನ್ನು ಕೈಬೀಸಿ ಕರೆಯುತ್ತಿವೆ. ಕಾಲದ ವ್ಯತ್ಯಾಸವಿಲ್ಲದೇ ಸಿಗುವ ಎಳೆನೀರು ಮಾರಾಟ, ಕಬ್ಬಿನ ಹಾಲಿನ ಮಾರಾಟ ಸಹ ನಗರದಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ನಂತರ, ಕೆಲವೇ ದಿನಗಳ ಅಂತರದಲ್ಲಿ ಕರಬೂಜ ಹಣ್ಣುಗಳೂ ಮಾರುಕಟ್ಟೆಗೆ ಲಗ್ಗೆ ಇಡಲಿವೆ.

ತಂಪು ಪಾನೀಯ ಇಲ್ಲವೇ ಎಳೆನೀರು ಕುಡಿದೋ, ಕಲ್ಲಂಗಡಿ, ಕರಬೂಜ ತಿನ್ನುವ ಮೂಲಕವೋ ಅಥವಾ ಕಬ್ಬಿನ ಹಾಲು, ಐಸ್‌ಕ್ರೀಂಗಳಿಂದ ಜನರು ಬಿಸಿಲಿನ ತಾಪವನ್ನು ತಣಿಸುವ ಮಾರ್ಗಗಳನ್ನು ಕಂಡು ಕೊಳ್ಳುತ್ತಿದ್ದಾರೆ. ಜೊತೆಗೆ, ಬರುವ ಬೇಸಿಗೆ ಸಂದರ್ಭದಲ್ಲಿ ಮಾತ್ರ ಸಮರ್ಪಕವಾಗಿ ಕುಡಿಯುವ ನೀರನ್ನು ಪೂರೈಕೆ ಮಾಡುವಂತೆ ಜನತೆ ನಗರಸಭೆಗೆ ಮನವಿ ಕೂಡ ಮಾಡಿದ್ದಾರೆ. ಇಲ್ಲದಿದ್ದರೆ, ಬಿಸಿಲ ಧಗೆಯ ಜೊತೆಗೆ ನೀರು ಇಲ್ಲ ಎಂಬ ಬೇಗೆ ಮತ್ತಷ್ಟೂ ಕಂಗೆಡಿಸಬಲ್ಲದು ಎಂಬ ಆತಂಕ ಜನರದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.